Advertisement

ಸಿಬಿಲ್‌ ಸ್ಕೋರ್‌ ಮಿತಿ ತೆಗೆದು ಸಾಲ; ಜಗದೀಶ ಶೆಟ್ಟರ

03:57 PM Jul 20, 2022 | Team Udayavani |

ಹುಬ್ಬಳ್ಳಿ: ಬೀದಿ ಬದಿ ವ್ಯಾಪಾರಿಗಳು ಖಾಸಗಿಯಾಗಿ ಸಾಲ ಪಡೆದು ಅವರಿಂದ ಶೋಷಣೆಗೊಳಗಾಗುತ್ತಿದ್ದು, ಅದನ್ನೆಲ್ಲ ಕೈಬಿಟ್ಟು ಪಿಎಂ ಸ್ವ-ನಿಧಿ ಯೋಜನೆಯಡಿ ಸಾಲ ಪಡೆದು ಬಡ್ಡಿಕುಳಗಳಿಂದ ಮುಕ್ತರಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.

Advertisement

ಗೋಕುಲ ರಸ್ತೆಯ ಖಾಸಗಿ ಹೋಟೆಲ್‌ ನಲ್ಲಿ ಮಂಗಳವಾರ ಹು-ಧಾಮಹಾನಗರ ಪಾಲಿಕೆಯಿಂದ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಸ್ವ ನಿಧಿ ಮಹೋತ್ಸವ ಬೀದಿ ಬದಿ ವ್ಯಾಪಾರಸ್ಥರ ಸಂಭ್ರಮಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಬೀದಿ ಬದಿ ವ್ಯಾಪಾರಿಗಳು ದಿನಾಲು ತಾವು ದುಡಿದ ಹಣವನ್ನೆಲ್ಲ ಖಾಸಗಿ ಬಡ್ಡಿ ಕುಳಗಳಿಗೆ ತುಂಬುವಂತಾಗಿ ಶೋಷಣೆಗೊಳಗುತ್ತಿದ್ದಾರೆ.

ಸಮಾಜದ ಕೆಳಸ್ತರದ ವ್ಯಾಪಾರಿಗಳು, ಶೋಷಿತ ವರ್ಗದವರ ದೃಷ್ಟಿಕೋನ ಇಟ್ಟುಕೊಂಡು ಅವರಿಗೆ ನೆರವಾಗಲು ಪ್ರಧಾನಿ ಹಲವು ಯೋಜನೆಗಳನ್ನು ತಂದಿದ್ದಾರೆ. ಬೀದಿಬದಿ ವ್ಯಾಪಾರಸ್ಥರಿಗಾಗಿ ಪಿಎಂ ಸ್ವ-ನಿಧಿ ಯೋಜನೆ ಮೂಲಕ ಸಾಲ ಕೊಡಲಾಗುತ್ತಿದೆ ಹಾಗೂ ಅದನ್ನು ಕಾನೂನು ವ್ಯಾಪ್ತಿಗೆ ತರಲಾಗಿದೆ. ಅವರಿಗೆ ಸಂರಕ್ಷಣೆ ಕೊಡುವ ಕೆಲಸ ಆಗುತ್ತಿದೆ. ಈ ಮೊದಲು ವ್ಯಾಪಾರಿಗಳ ಮೇಲೆ ಸಾಕಷ್ಟು ದೌರ್ಜನ್ಯವಾಗುತ್ತಿತ್ತು. ಆದರೀಗ ಆ ಪರಿಸ್ಥಿತಿ ಇಲ್ಲ ಎಂದರು.

ಪಾಲಿಕೆ ವ್ಯಾಪ್ತಿಯಲ್ಲಿ 45 ವ್ಯಾಪಾರಿ ವಲಯ ಗುರುತಿಸಲಾಗಿದೆ. ಅಂತಹ ಸ್ಥಳದಲ್ಲಿ ವ್ಯಾಪಾರ ಮಾಡಿದರೆ ನಾಗರಿಕರಿಗೂ ಅನುಕೂಲವಾಗುತ್ತದೆ. ನಗರದಲ್ಲಿ ಶಿಸ್ತು ಕಾಪಾಡಿಕೊಳ್ಳಲು ಸಹಕಾರ ನೀಡಬೇಕು. ಬೀದಿಬದಿ ವ್ಯಾಪಾರಸ್ಥರು ಹೆಚ್ಚು ಸ್ವಾವಲಂಬನೆಯಾಗಲು ಸಿಬಿಲ್‌ ಸ್ಕೋರ್‌ ಮಿತಿ ತೆಗೆದು ಸಾಲ ನೀಡಲಾಗುತ್ತಿದೆ.

ನಿಗದಿತ ಅವಧಿಯೊಳಗೆ ಸರಿಯಾಗಿ ಸಾಲ ಮರುಪಾವತಿಸಿದರೆ ಸರಕಾರ ಶೇ.7 ಸಬ್ಸಿಡಿ ನೀಡುತ್ತದೆ. ಲೀಡ್‌ ಬ್ಯಾಂಕ್‌ನವರು ಬೀದಿ ಬದಿ ವ್ಯಾಪಾರಸ್ಥರ ನೆರವಿಗೆ ನಿಲ್ಲಬೇಕು. ಪ್ರಾಮಾಣಿಕವಾಗಿ ಸಾಲ ಮರುಪಾವತಿಸುವವರಿಗೆ ಹೆಚ್ಚಿನ ಸಾಲ ಒದಗಿಸಬೇಕು. ದಾಖಲೆಗಳ ಪರಿಶೀಲನೆ ಅಥವಾ ಇನ್ನಾವುದೇ ಸಮಸ್ಯೆ ಎದುರಾದರೆ ನಮ್ಮ ಗಮನಕ್ಕೆ ತನ್ನಿ ಎಂದರು.

Advertisement

ಜಿಲ್ಲಾ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಅಣ್ಣಯ್ಯ ಆರ್‌. ಮಾತನಾಡಿ, ಬೀದಿ ಬದಿ ವ್ಯಾಪಾರಿಗಳಿಗೆ ಪಾಲಿಕೆಯಿಂದ ಅತೀ ಹೆಚ್ಚು ಸಾಲ ನೀಡಲಾಗಿದೆ. ಸಾಲಕ್ಕಾಗಿ ಬಂದಿದ್ದ ಅರ್ಜಿಗಳಲ್ಲಿ ಶೇ.90 ಸಾಲ ವಿತರಣೆ ಮಾಡಲಾಗಿದೆ. ಈಗಾಗಲೇ ಬಹುತೇಕರು 20 ಸಾವಿರ ರೂ. ಸಾಲ ಪಡೆಯಲು ಅರ್ಹರಾಗಿದ್ದಾರೆ. ವ್ಯಾಪಾರಿಗಳು 50 ಸಾವಿರ ರೂ. ವರೆಗೆ ಸಾಲ ಪಡೆಯಬಹುದು ಎಂದು ಹೇಳಿದರು.

ಪಟ್ಟಣ ಮಾರಾಟ ಸಮಿತಿಯ ಸದಸ್ಯ ಪ್ರೇಮನಾಥ ಚಿಕ್ಕತುಂಬಳ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಸರಕಾರ ಬಂದ ಬಳಿಕ ಬೀದಿ ಬದಿ ವ್ಯಾಪಾರಿಗಳಿಗೆ ಅಚ್ಚುಕಟ್ಟಾದ ನಿಯಮ ಜಾರಿ ಮಾಡಿದೆ. ರಾಜ್ಯ ಸರಕಾರ ಬ್ಯಾಂಕ್‌ ಸಿಬಿಲ್‌ ಸ್ಕೋರ್‌ ಅನ್ನು ತೆಗೆದು ಹಾಕಿದ್ದರಿಂದ ಎಲ್ಲರಿಗೂ ಸಾಲ ಸಿಗುವಂತಾಗಿದೆ. ಪಾಲಿಕೆಯು ಮಾರುಕಟ್ಟೆ ವಲಯ ಬೇಗನೆ ಗುರುತಿಸಬೇಕು ಎಂದರು.

ಮಹಾಪೌರ ಈರೇಶ ಅಂಚಟಗೇರಿ ಅಧ್ಯಕ್ಷತೆ ವಹಿಸಿದ್ದರು. ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಉಪ ಮಹಾಪೌರ ಉಮಾ ಮುಕುಂದ, ವಿಪಕ್ಷ ನಾಯಕ ರಾಜಾರಾವ ಮನ್ನೆಕುಂಟ್ಲ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಾ| ಚಂದ್ರಪ್ಪ, ಪಾಲಿಕೆ ಸದಸ್ಯರಾದ ಸಂದೀಲಕುಮಾರ ಎಸ್‌., ರೂಪಾ ಶೆಟ್ಟಿ, ಶಿವಾನಂದ ಮೆಣಸಿನಕಾಯಿ, ಪ್ರೀತಿ ಖೋಡೆ, ಮಹೀಧಾಖಾನಂ ಕಿತ್ತೂರ ಇನ್ನಿತರರಿದ್ದರು. ಸಂಪತ್‌ಕುಮಾರ ಪ್ರಾರ್ಥಿಸಿದರು. ಎಸ್‌.ಸಿ. ಬೇವೂರ ಸ್ವಾಗತಿಸಿದರು.

ರಾಜ್ಯದಲೇ ಮೊದಲ ಸ್ಥಾನ
ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ ಮಾತನಾಡಿ, ಕೋವಿಡ್‌ನಿಂದ ಬೀದಿ ಬದಿ ವ್ಯಾಪಾರಿಗಳು ಬಹಳ ತೊಂದರೆ ಅನುಭವಿಸಿದ್ದರು. ಅವರಿಗೆ ಪಿಎಂ ಸ್ವ-ನಿಧಿಯಡಿ ಬ್ಯಾಂಕ್‌ ಗಳಿಂದ 10 ಸಾವಿರ ರೂ. ಸಾಲ ನೀಡಲಾಗಿದೆ. ಅತೀ ಹೆಚ್ಚು ಸಾಲ ಕೊಡಿಸುವ ಮೂಲಕ ಪಾಲಿಕೆಯು ರಾಜ್ಯದಲ್ಲೇ ಮೊದಲೇ ಸ್ಥಾನದಲ್ಲಿದೆ. ಪಾಲಿಕೆ ವ್ಯಾಪ್ತಿಯಲ್ಲಿ 10896 ಅರ್ಜಿ ಪಡೆದು, 7193 ಜನರಿಗೆ ಸಾಲ ನೀಡಲಾಗಿದೆ. ವ್ಯಾಪಾರ ಮಾಡಲಾಗದೆ ಸಾಕಷ್ಟು ಕಷ್ಟ ಅನುಭವಿಸಿದ ಹಲವರು ಪಿಎಂ ಸ್ವ-ನಿಧಿಯಿಂದ ಸಾಧನೆ ಮಾಡಿದ್ದಾರೆ. ಇನ್ನುಳಿದ ಬೀದಿ ಬದಿ ವ್ಯಾಪಾರಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಬೀದಿ ಬದಿ ವ್ಯಾಪಾರಿಗಳಿಂದ ಪಾಲಿಕೆಯ ವಸೂಲಾತಿ ಸಿಬ್ಬಂದಿ ದುಪ್ಪಟ್ಟು ಹಣ ಪಡೆಯುತ್ತಿದ್ದು, ಈ ಬಗ್ಗೆ ಆಯುಕ್ತರು ಗಮನಹರಿಸಬೇಕು. ಬೀದಿ ಬದಿ ವ್ಯಾಪಾರಿಗಳು ಸಹಿತ ಸಂಚಾರಕ್ಕೆ ತೊಂದರೆ ಆಗದಂತೆ ವ್ಯಾಪಾರ ಮಾಡಬೇಕು. ಮಾರುಕಟ್ಟೆಯಲ್ಲಿ ಸ್ವತ್ಛತೆ ಕಾಪಾಡಿಕೊಂಡು ಪಾಲಿಕೆಯೊಂದಿಗೆ ಕೈಜೋಡಿಸಬೇಕು.
*ತಿಪ್ಪಣ್ಣ ಮಜ್ಜಗಿ, ಪಾಲಿಕೆ ಸಭಾನಾಯಕ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next