Advertisement

ಚಟ್ನಳ್ಳಿ ಗ್ರಾಮ ಪಂಚಾಯಿತಿಗೂ ಪ್ರಶಸ್ತಿ

04:26 PM Oct 01, 2019 | Suhan S |

ಶಹಾಪುರ: ಗ್ರಾಪಂ ವ್ಯಾಪ್ತಿಯಲ್ಲಿ ಉತ್ತಮ ಕಾರ್ಯನಿರ್ವಹಣೆ ಹಾಗೂ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿಅನುಷ್ಠಾನಗೊಳಿಸಿರುವ ಹಿನ್ನೆಲೆಯಲ್ಲಿ ಈ ಬಾರಿ ತಾಲೂಕಿನ ಚಟ್ನಳ್ಳಿ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ ಒಲಿದು ಬಂದಿದ್ದು, ಗ್ರಾಮಸ್ಥರು ಸೇರಿದಂತೆ ಗ್ರಾಪಂ ವ್ಯಾಪ್ತಿಯ ಜನರು ಸಂತಸ ವ್ಯಕ್ತಪಡಿಸಿದ್ದಾರೆ.

Advertisement

ಚಟ್ನಳ್ಳಿ ಗ್ರಾಪಂ ಒಟ್ಟು 19 ಜನ ಸದಸ್ಯರನ್ನು ಹೊಂದಿದೆ. ಚಟ್ನಳ್ಳಿ ಸೇರಿ ಕರಣಗಿ, ಮರಮಕಲ್‌, ಬಲಕಲ್‌, ನಾಲ್ವಡಿಗಿ ಮತ್ತು ನಾಲ್ವಡಿಗಿ ತಾಂಡಾ ಗ್ರಾಮಗಳು ಬರುತ್ತವೆ. ಇದರಲ್ಲಿ ಚಟ್ನಳ್ಳಿ ಗ್ರಾಮವೇ 3000 ಜನಸಂಖ್ಯೆ ಹೊಂದಿದ್ದು, ಗ್ರಾಪಂ ವ್ಯಾಪ್ತಿಯ ಎಲ್ಲಾ ಹಳ್ಳಿಗಳು ಸೇರಿ ಅಂದಾಜು 8000 ಜನಸಂಖ್ಯೆ ಹೊಂದಿದೆ. ಗ್ರಾಪಂ ವ್ಯಾಪ್ತಿಯಲ್ಲಿ 14ನೇ ಹಣಕಾಸು ಯೋಜನೆಯಡಿ ಹಲವಾರು ಕಾಮಗಾರಿಗಳು ಹಮ್ಮಿಕೊಂಡಿದ್ದು ಆನ್‌ಲೈನ್‌ ಮೂಲಕ ಹಣ ಪಾವತಿ ಮಾಡಲಾಗಿದೆ.

ಚರಂಡಿ ತ್ಯಾಜ್ಯ ವಿಲೇವಾರಿ, ಹೂಳು ತೆಗೆಯುವುದು, ರಸ್ತೆ ಸುಧಾರಣೆ, ಬೀದಿ ದೀಪ ಅಳವಡಿಕೆ, ಉದ್ಯೋಗ ಖಾತ್ರಿ ಕಾಮಗಾರಿಗಳು ಸಮರ್ಪಕ ನಿರ್ವಹಣೆ, ಚೆಕ್‌ ಡ್ಯಾಂ ನಿರ್ಮಾಣ ಸೇರಿದಂತೆ ಶೈಕ್ಷಣಿಕವಾಗಿ ಹತ್ತು ಹಲವು ಸೌಲಭ್ಯ, ಆಟದ ಮೈದಾನ ಗ್ರಾಮಗಳಲ್ಲಿ ಸಚ್ಛತಾ ಅಭಿಯಾನ, ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬೀದಿ ನಾಟಕಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮಗಳು ಮತ್ತು ಮನೆಗಳ ನಿರ್ಮಾಣ ಮತ್ತು ಸರ್ಕಾರಿ ಪ್ರಾಥಮಿಕ ಆರೋಗ್ಯ ಆವರಣ ಸೇರಿದಂತೆ ಗ್ರಾಮಗಳ ದೇವಸ್ಥಾನಗಳ ಆವರಣಗಳಲ್ಲಿ ಸಸಿಗಳನ್ನು ನೆಡುವುದು ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿದೆ. ಜತೆಗೆ ಸಂಘ, ಸಂಸ್ಥೆಗಳ ಸಹಾಯ ಸಹಕಾರದಿಂದ ಪ್ರಸ್ತುತ ವರ್ಷದ ಗಾಂಧಿ  ಗ್ರಾಮ ಪ್ರಶಸ್ತಿಗೆ ಭಾಜನವಾಗಿದೆ.  ಮೂಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಗ್ರಾಪಂ ಆಡಳಿತ ಮಂಡಳಿ ಸಹಾಯ ಸಹಕಾರದಿಂದ ಪಂಚಾಯತ್‌ ಅಧಿಕಾರಿಗಳು ಕ್ರಮಬದ್ಧವಾಗಿ ಕಾರ್ಯವನ್ನು ಕೈಗೊಳ್ಳಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷದಿಂದ ಉತ್ತಮ ಕಾರ್ಯ ನಿರ್ವಹಣೆಯಿಂದಾಗಿ ಅಭಿವೃದ್ಧಿ ಕಾರ್ಯಗಳು ಸುಗಮವಾಗಿ ಸಾಗುತ್ತಿವೆ. ಹೀಗಾಗಿ ಗಾಂಧಿ  ಪುರಸ್ಕಾರಕ್ಕೆ ಗ್ರಾಮ ಆಯ್ಕೆಯಾಗಿದೆ. ಇದೇ ಅ.2 ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನವಾಗಲಿದ್ದು, ಅಂದು ಗ್ರಾಪಂ ಅಧ್ಯಕ್ಷ ಮತ್ತು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸಿಬ್ಬಂದಿ ಭಾಗವಹಿಸಲಿದ್ದಾರೆ.

 

Advertisement

-ಮಲ್ಲಿಕಾರ್ಜುನ ಮುದ್ನೂರ

Advertisement

Udayavani is now on Telegram. Click here to join our channel and stay updated with the latest news.

Next