ಚುರು (ರಾಜಸ್ಥಾನ): ಮದುವೆ ಮುಹೂರ್ತಕ್ಕೆ ಸ್ವಲ್ಪವೇ ಹೊತ್ತು ಬಾಕಿಯಿದ್ದರೂ ಕುಡಿದು ಕುಣಿಯುತ್ತಿದ್ದ ವರನನ್ನು ವಧು ತಿರಸ್ಕರಿಸಿದ್ದಾಳೆ.
ಇದರಿಂದ ಮದುವೆಯೇ ಮುರಿದುಬಿದ್ದಿದೆ. ಅಷ್ಟೇ ಅಲ್ಲ, ಮದುವೆಗೂ ಮುನ್ನವೇ ಹುಡುಗ ಕಲಿಯುಗದ ಕುಡುಕ ಎಂಬುದು ತಿಳಿಯುತ್ತಿದ್ದಂತೆ ಆ ಹುಡುಗಿ, ಮದುವೆಗೆ ಬಂದಿದ್ದವರಲ್ಲಿ ಒಬ್ಬರನ್ನು ಆರಿಸಿಕೊಂಡು ಮದುವೆಯಾಗಿದ್ದಾಳೆ.
ಈ ಘಟನೆ ನಡೆದಿದ್ದು ಮೇ 15ರಂದು, ರಾಜಸ್ಥಾನದ ಚುರು ಜಿಲ್ಲೆಯ ರಾಜಗಢ ತೆಹ್ಸಿಲ್‌ನ ಚೆಲನ ಎಂಬ ಹಳ್ಳಿಯಲ್ಲಿ. ಅವತ್ತು ರಾತ್ರಿ ವರನ ಕಡೆಯವರು ವಧುವಿನ ಊರಿಗೆ ಬಂದಿದ್ದರು.
ರಾತ್ರಿ 9 ಗಂಟೆಯಿಂದ ಮದುವೆ ಮೆರವಣಿಗೆ ಶುರುವಾಯಿತು. ಆದರೆ ವರ ಮತ್ತು ಆತನ ಕಡೆಯವರು ಚೆನ್ನಾಗಿ ಕುಡಿದಿದ್ದ ಪರಿಣಾಮ ಕುಣಿಯಲು ಶುರು ಮಾಡಿದರು. ಮೆರವಣಿಗೆ ಮುಂದೆಯೇ ಸಾಗಲಿಲ್ಲ. ಮಧ್ಯರಾತ್ರಿ 1.15 ನಿಮಿಷಕ್ಕೆ ಮದುವೆ ಮುಹೂರ್ತ ನಿಶ್ಚಯವಾಗಿತ್ತು.
Related Articles
ಎಷ್ಟು ಹೊತ್ತಾದರೂ ವರ ಬರುವ ಮರಳುವ ಲಕ್ಷಣ ಕಾಣದಿದ್ದಾಗ ಸಿಟ್ಟಾದ ವಧು ಈ ಹುಡುಗನೇ ಬೇಡ ಎಂದು ನಿರ್ಧರಿಸಿದಳೆಂದು ಹೇಳಲಾಗಿದೆ.
ಆದರೆ, ವಧುವಿನ ನಿರ್ಧಾರವನ್ನು ವರನ ಕಡೆಯವರು ಒಪ್ಪಿಲ್ಲ. ಹಾಗಾಗಿ, ಅವರು ಪೊಲೀಸ್ ಠಾಣೆಗೆ ಹೋಗಿ ವಧುವಿನ ವಿರುದ್ಧ ದೂರು ದಾಖಲಿಸಿದ್ದಾರೆ. ವಧು, ಪ್ರಾಪ್ತ ವಯಸ್ಕಳಾಗಿದ್ದು ತನ್ನ ಸ್ವಯಂ ವಿವೇಚನೆ ಮೇರೆಗೆ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾಳೆ. ಹಾಗಾಗಿ, ವರನ ಮನೆಯವರಿಗೆ ಪೊಲೀಸ್ ದೂರಿನಿಂದ ಏನೂ ಪ್ರಯೋಜನವಾಗಿಲ್ಲ ಎಂದು ಮೂಲಗಳು ತಿಳಿಸಿವೆ.