Advertisement

ಮನೆ ಕಟ್ಟಿಕೊಳ್ಳಲು ನೀಡಿದ ಜಾಗದಲ್ಲಿ ಅಕ್ರಮ ಚರ್ಚ್ ನಿರ್ಮಾಣದ ಆರೋಪ: ಗ್ರಾಮಸ್ಥರಿಂದ ವಿರೋಧ

01:07 PM Aug 05, 2023 | Team Udayavani |

ಚಿಕ್ಕಮಗಳೂರು: ಆಶ್ರಯ ಯೋಜನೆಯಲ್ಲಿ ಮನೆ ಕಟ್ಟಿಕೊಳ್ಳಲು ನೀಡಿದ ಜಾಗದಲ್ಲಿ ವ್ಯಕ್ತಿಯೋರ್ವರು ಮನೆ ನಿರ್ಮಾಣದ ಬದಲು ಅಕ್ರಮವಾಗಿ ಚರ್ಚ್ ನಿರ್ಮಿಸಲು ಮುಂದಾಗಿದ್ದಾರೆ. ಇದನ್ನು ಕೂಡಲೆ ತಡೆ ಹಿಡಿಯಬೇಕೆಂದು ಒತ್ತಾಯಿಸಿ ಮೂಡಿಗೆರೆ ತಾಲೂಕಿನ ಲೋಕವಳ್ಳಿ ಎಸ್ಟೇಟ್ ಬಡಾವಣೆ ಗ್ರಾಮಸ್ಥರು ಆ.5ರ ಶುಕ್ರವಾರ ಹಳೆಮೂಡಿಗೆರೆ ಗ್ರಾ.ಪಂ.ಗೆ ಮನವಿ ಸಲ್ಲಿಸಿದರು.

Advertisement

ಲೋಕವಳ್ಳಿ ಎಸ್ಟೇಟ್ ಬಡಾವಣೆಯ 3ನೇ ಅಡ್ಡ ರಸ್ತೆಯಲ್ಲಿ ಹಾಂದಿ ಗ್ರಾಮದ ರಂಗ ಎಂಬ ವ್ಯಕ್ತಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದು, ಸ್ಥಳೀಯರೊಬ್ಬರಿಗೆ ಆಶ್ರಯ ಯೋಜನೆಯಲ್ಲಿ ಮಂಜೂರಾಗಿದ್ದ ನಿವೇಶನೆ ಕೊಂಡು ಅದರಲ್ಲಿ ಕಳೆದ 6 ತಿಂಗಳ ಹಿಂದೆ ಅಕ್ರಮವಾಗಿ ಚರ್ಚ್ ನಿರ್ಮಾಣ ಮಾಡುತ್ತಿದ್ದಾಗ ಸ್ಥಳೀಯರು ವಿರೋಧಿಸಿದ್ದರು.

ಈ ಹಿನ್ನಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಕಳೆದ 2 ತಿಂಗಳ ಹಿಂದೆ ಮತ್ತೆ ಕಟ್ಟಡ ಕಾಮಗಾರಿ ಪ್ರಾರಂಭಿಸಲಾಗಿತ್ತು. ಕಟ್ಟಡದ ಮುಂಭಾಗಕ್ಕೆ ಶಿಲುಬೆ ಆಕೃತಿ ಅಳವಡಿಸಲಾಗಿತ್ತು. ಇದನ್ನು ಸ್ಥಳೀಯರು ವಿರೋಧಿಸಲು ಪ್ರಾರಂಭಿಸಿದಾಗ ಶಿಲುಬೆ ಆಕೃತಿಯನ್ನು ಕಟ್ಟಡದಿಂದ ತೆಗೆದಿದ್ದ ಎನ್ನಲಾಗಿದೆ.

ಕಟ್ಟಡ ಕಾಮಗಾರಿಗೆ ಗ್ರಾ.ಪಂ.ಯಿಂದ ಪರವಾನಗಿ ಪಡೆದಿರುವ ಬಗ್ಗೆ ಹಾಗೂ ಚರ್ಚ್ ನಿರ್ಮಿಸಲು ಅಕ್ಕಪಕ್ಕದ ನಿವಾಸಿಗಳ ಒಪ್ಪಿಗೆ ಪಡೆದಿರುವ ಬಗ್ಗೆಯೂ ಮಾಹಿತಿಯಿಲ್ಲ.

ಹಾಗಾಗಿ ಈ ಬಗ್ಗೆ ಗ್ರಾ.ಪಂ. ಅಧಿಕಾರಿಗಳು ಈಗಲೇ ಪರಿಶೀಲನೆ ನಡೆಸಿ ಕಾಮಗಾರಿ ಕೂಡಲೇ ನಿಲ್ಲಿಸಬೇಕು. ಅಲ್ಲದೇ ಪರವಾನಗಿ ಪಡೆಯದೇ ಕಾಮಗಾರಿ ನಡೆಸಿದ್ದರೆ ಕಟ್ಟಡ ತೆರವುಗೊಳಿಸಬೇಕೆಂದು ಗ್ರಾಮಸ್ಥರು ಮನವಿಯಲ್ಲಿ ಒತ್ತಾಯಿಸಿದ್ದಾರೆ.

Advertisement

ಬಳಿಕ ಹಳೆ ಮೂಡಿಗೆರೆ ಗ್ರಾ.ಪಂ ಅಧ್ಯಕ್ಷೆ ಡಿ.ರಂಜಿತಾ, ಪಿಡಿಒ ಪ್ರಶಾಂತ್ ಕುಮಾರ್ ಹಾಗೂ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

ಮತಾಂತರ ಆರೋಪ: ಲೋಕವಳ್ಳಿ ಬಡಾವಣೆಯಲ್ಲಿ ಬಹುತೇಕರು ಬಡವರು, ದಲಿತರು ವಾಸವಾಗಿದ್ದಾರೆ. ಇಲ್ಲಿ ಜನರ ಬಡತನ ಮತ್ತು ಅಜ್ಞಾನವನ್ನು ಬಂಡವಾಳ ಮಾಡಿಕೊಂಡು ಕೆಲವರು ಮತಾಂತರ ಮಾಡುತ್ತಿದ್ದಾರೆ. ಈಗಾಗಲೇ ಇಲ್ಲಿ ಅನೇಕ ಮಂದಿಗೆ ಆಮೀಷ ಒಡ್ಡಿ ಮತಾಂತರ ಮಾಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಇದರ ಭಾಗವಾಗಿ ಈಗ ಇಲ್ಲಿ ಮನೆ ನಿರ್ಮಾಣದ ನೆಪದಲ್ಲಿ ಚರ್ಚ್ ನಿರ್ಮಿಸಲು ಮುಂದಾಗಿದ್ದಾರೆ. ಇದರಿಂದ ಸ್ಥಳೀಯವಾಗಿ ಸೌಹಾರ್ದತೆಗೆ ದಕ್ಕೆ ಉಂಟಾಗಲಿದ್ದು, ಸಂಬಂಧಪಟ್ಟ ವ್ಯಕ್ತಿಗೆ ಮುನ್ನೆಚ್ಚರಿಕೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next