ಶಿರ್ವ: ಸಮಾಜದಲ್ಲಿ ಜಾತಿ, ಮತ, ಧರ್ಮ, ವ್ಯಕ್ತಿತ್ವ ಬೇರೆ ಬೇರೆಯಾಗಿದ್ದರೂ ನಾವೆಲ್ಲರೂ ಮಾನವ ಧರ್ಮವನ್ನು ಪಾಲಿಸಿಕೊಂಡು ಬಾಳಬೇಕು. ಸರ್ವಧರ್ಮದ ತಿರುಳಿನಲ್ಲಿ ನಾವು ಬೆಳೆದರೆ ಪರಸ್ಪರ ಪ್ರೀತಿ, ವಿಶ್ವಾಸ, ಶಾಂತಿ, ಸೌಹಾರ್ದತೆ ಹಾಗೂ ಸಹೋದರತೆಯೊಂದಿಗೆ ಒಂದುಗೂಡಿ ಬಾಳುವ ಸಾಮರಸ್ಯದ ಜೀವನ ಸಾಧ್ಯ ಎಂದು ಶಿರ್ವ ಆರೋಗ್ಯ ಮಾತಾ ದೇವಾಲಯದ ಪ್ರಧಾನ ಧರ್ಮಗುರು ರೆ|ಪಾ|ಡಾ| ಲೆಸ್ಲಿ ಡಿಸೋಜಾ ಹೇಳಿದರು.
ಅವರು ಡಿ. 4 ರ ಬುಧವಾರ ಸಂಜೆ ಶಿರ್ವ ಶಾಂಭವಿ ಹೈಟ್ಸ್ ಬಳಿ ಶಿರ್ವ ಆರೋಗ್ಯ ಮಾತಾ ಚರ್ಚ್‌ನ ಅಂತರ್‌ಧರ್ಮೀಯ ಆಯೋಗದ ವತಿಯಿಂದ ಆಯೋಜಿಸಲಾದ ಕ್ರಿಸ್‌ಮಸ್ ಸೌಹಾರ್ದ ಕೂಟದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಎನ್.ಎಂ.ಹೆಗಡೆ ಮಾತನಾಡಿ, ಏಸು ಕ್ರಿಸ್ತರ ಬದುಕಿನ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯಬೇಕು. ಇಂತಹ ಸಾಮರಸ್ಯದ ಆಚರಣೆಗಳಿಂದ ಅಂತರಗಳು ಕಡಿಮೆಯಾಗಿ, ಸಂಬಂಧಗಳು ಸೌಹಾರ್ದವಾಗಿ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿ ಬದುಕು ಅರ್ಥಪೂರ್ಣವಾಗುತ್ತದೆ ಎಂದು ಹೇಳಿದರು.
ಶಿರ್ವ ಸುನ್ನಿ ಜಾಮೀಯಾ ಮಸೀದಿಯ ಖತೀಬರಾದ ಜನಾಬ್ ಸಿರಾಜುದ್ದೀನ್ ಝೈನಿ ಮಾತನಾಡಿ, ಪರಸ್ಪರ ಸ್ನೇಹ ಸೌಹಾರ್ದತೆಯಿಂದ ಬಾಳುವ ನಾವು ತಾನು ಪ್ರೀತಿಸುವ ಧರ್ಮ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಇತರ ಧರ್ಮವನ್ನು ಗೌರವಿಸುವ ಮೂಲಕ ನಮ್ಮ ಸಂಬಂಧಗಳು ಮುಂದಿನ ಪೀಳಿಗೆಗೆ ಮಾದರಿಯಾಗಲಿ ಎಂದು ಹೇಳಿದರು. ಶಿರ್ವ ಗ್ರಾ.ಪಂ. ಅಧ್ಯಕ್ಷೆ ಸವಿತಾ ರಾಜೇಶ್ ಶುಭ ಹಾರೈಸಿದರು.
ಶಿರ್ವ ಆರೋಗ್ಯ ಮಾತಾ ದೇವಾಲಯದ ಸಹಾಯಕ ಧರ್ಮಗುರುಗಳಾದ ರೆ|ಫಾ|ರೋನ್ಸನ್ ಪಿಂಟೊ,ರೆ|ಫಾ| ರೋಲ್ವಿನ್ ಅರಾನ್ಹಾ, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ಅರಾನ್ಹಾ ,ಕಾರ್ಯದರ್ಶಿ ಫ್ಲೆàವಿ ಡಿಸೋಜಾ, 20 ಆಯೋಗದ ಸಂಯೋಜಕಿ ಲೀನಾ ಮಚಾದೋ,ವಾರ್ಡ್ ಮುಖ್ಯಸ್ಥೆ ತೆರೆಜಾ ಮೆನೇಜಸ್ ವೇದಿಕೆಯಲ್ಲಿದ್ದರು.
ಶಿರ್ವ ಗ್ರಾ.ಪಂ. ಮಾಜಿ ಅಧ್ಯಕ್ಷ ಹಸನಬ್ಬ ಶೇಖ್, ಚರ್ಚ್ ಪಾಲನ ಮಂಡಳಿಯ ಮಾಜಿ ಉಪಾಧ್ಯಕ್ಷ ನೋರ್ಬರ್ಟ್ ಮಚಾದೋ, ನೇಟಿವಿಟಿ ಕಾನ್ವೆಂಟ್‌ನ ಧರ್ಮ ಭಗಿನಿಯರು, ಪಾಲನ ಮಂಡಳಿಯ ಸದಸ್ಯರು, ವಾರ್ಡ್‌ಗಳ ಗುರಿಕಾರರು,ಸದಸ್ಯರು ಉಪಸ್ಥಿತರಿದ್ದರು.
ನಿವೃತ್ತ ಮುಖ್ಯ ಶಿಕ್ಷಕ ಗಿಲ್ಬರ್ಟ್ ಪಿಂಟೊ ಸ್ವಾಗತಿಸಿದರು. ಉಪನ್ಯಾಸಕ ಗೈನಲ್ ಡಿಮೆಲ್ಲೋ ಕಾರ್ಯಕ್ರಮ ನಿರೂಪಿಸಿ, ಕಾಡಿಕಂಬ್ಳ ವಾರ್ಡ್‌ನ ಗೋಡ್ವಿನ್ ಕ್ವಾಡ್ರಸ್ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರಾರ್ಥನಾ ಗೀತೆ, ನೃತ್ಯ ಮತ್ತು ಕ್ರಿಸ್‌ಮಸ್ ಕ್ಯಾರಲ್ಸ್ ನಡೆಯಿತು.