ಮಂಗಳೂರು: ಪ್ರತೀ ವ್ಯಕ್ತಿ ದೇವರು ನಮ್ಮ ನಡುವೆ ಇಟ್ಟಿರುವ ಬೆಲೆ ಬಾಳುವ ನಿಧಿ ಎನ್ನುವುದನ್ನು ನಾವು ಅರಿತುಕೊಳ್ಳಬೇಕಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುವುದನ್ನು ಕಲಿಯೋಣ ಎಂದು ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಹೇಳಿದರು.
ಅವರು ಸೋಮವಾರ ನಗರದ ಕೊಡಿಯಾಲ್‌ಬೈಲ್‌ನ ಬಿಷಪ್ಸ್ ಹೌಸ್‌ನಲ್ಲಿ ಮಾಧ್ಯಮ ಮಿತ್ರರೊಂದಿಗೆ ಕ್ರಿಸ್ಮಸ್ ಆಚರಣೆ ಮಾಡಿ ಹಬ್ಬದ ಸಂದೇಶ ನೀಡಿದರು.
ಯೇಸು ಕ್ರಿಸ್ತರು ಜನಿಸಿದ ಕಾಲದಲ್ಲಿ ರೋಮನ್ನರು ಬಡ ಜನರ ವಿರುದ್ಧ ಎಲ್ಲ ರೀತಿಯ ಬಲ ಪ್ರಯೋಗ ಮಾಡುತ್ತಿದ್ದರು ಮತ್ತು ಕ್ಷುಲ್ಲಕ ಕಾರಣಗಳಿಗಾಗಿ ಕೊಲ್ಲುತ್ತಿದ್ದರು. ಕತ್ತಲೆಯಲ್ಲಿದ್ದ ಜನರಲ್ಲಿ ಹೊಸ ಭರವಸೆ ತುಂಬಲು ಮತ್ತು ಹೊರದಬ್ಬಲ್ಪಟ್ಟವರು ಹಾಗೂ ಶೋಷಿತರು ಘನತೆಯಿಂದ ಜೀವಿಸಲು ಅನುವು ಮಾಡಿಕೊಡಲು ಯೇಸು ಜನಿಸಿದರು ಎಂದರು.
ಕ್ರಿಸ್ಮಸ್ ನಮಗೆ ಮಾನವ ವಿಸ್ಮಯದ ಗಾಢತೆಯನ್ನು ಧ್ಯಾನಿಸಲು ಅನುವು ಮಾಡಿ ಕೊಡುತ್ತದೆ. ದೇವರ ಪುತ್ರರು ನಮ್ಮ ನಡುವೆ, ನಮ್ಮೊಳಗಿನ ಒಬ್ಬರಂತೆ ಜನಿಸಿದುದರಲ್ಲಿ ನಮ್ಮ ನಿಜವಾದ ಬೆಲೆಯು ಕಾಣಸಿಗುತ್ತದೆ. ಕ್ರಿಸ್ಮಸ್ ಹಬ್ಬ ಎಲ್ಲರಿಗೂ ಶುಭ ತರಲಿ ಎಂದರು.
ಬಿಷಪ್ ಜತೆಗೆ ಧರ್ಮಪ್ರಾಂತದ ಶ್ರೇಷ್ಠ ಗುರುಗಳಾದ ಮೊ| ಮ್ಯಾಕ್ಸಿಂ ನೊರೊನ್ಹಾ, ಛಾನ್ಸಲರ್ ವಂ| ವಿಕ್ಟರ್ ಜಾರ್ಜ್ ಡಿ’ಸೋಜಾ, ಸಾರ್ವಜನಿಕ ಸಂಪರ್ಕ ಅ ಧಿಕಾರಿ ಮಾರ್ಸೆಲ್ ಮೊಂತೇರೋ, ಕೆನರಾ ಸಂಪರ್ಕ ಕೇಂದ್ರದ ನಿರ್ದೇಶಕ ವಂ| ರಿಚರ್ಡ್ ಡಿ’ಸೋಜಾ, ಮಾಧ್ಯಮ ಸಲಹೆಗಾರ ಎಲಿಯಾಸ್ ಫೆರ್ನಾಂಡಿಸ್, ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅವರು ಸೇರಿಕೊಂಡು ಕ್ರಿಸ್ಮಸ್ ಕೇಕ್ ಕತ್ತರಿಸಿದರು.
ಸಹಬಾಳ್ವೆಗೆ ಒತ್ತು ನೀಡೋಣ
ಮನುಷ್ಯ ಜೀವವು ದೇವರು ಕೊಟ್ಟ ಅಮೂಲ್ಯ ಕೊಡುಗೆ. ಅದನ್ನು ರಕ್ಷಿಸೋಣ, ಬೆಳೆಸೋಣ. ಪ್ರತಿಯೊಬ್ಬರನ್ನೂ ಗೌರವದಿಂದ ಕಾಣುವ ನಿರ್ಧಾರ ಮಾಡೋಣ. ಮಾನವ ದೇಹವೇ ದೇವರಿರುವ ದೇವಾಲಯ. ಅಲ್ಲಿ ದೇವರನ್ನು ಸ್ತುತಿ ಮಾಡೋಣ ಎಂದು ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ತಿಳಿಸಿದರು.
ಮಂಗಳೂರಿನಲ್ಲಿ ಇತ್ತೀಚೆಗೆ ತಲೆದೋರಿದ ಅಶಾಂತಿಯ ವಾತಾವರಣ ನನಗೆ ಬೇಸರ ತಂದಿದೆ. ಕುಟುಂಬದ ಸದಸ್ಯರನ್ನು ಕಳಕೊಂಡವರಿಗೆ ಹಾಗೂ ಗಾಯಗೊಂಡ ಎಲ್ಲರಿಗೆ ಸಾಂತ್ವನ ಕೋರುತ್ತೇವೆ. ಯೇಸುವಿನ ಸಂದೇಶದಂತೆ ನಾವೆಲ್ಲರೂ ಶಾಂತಿಯಿಂದ ಸಹಬಾಳ್ವೆ ನಡೆಸೋಣ, ಮಾನವೀಯತೆಯಿಂದ ಜೀವಿಸೋಣ ಎಂದರು.