Advertisement
ಕ್ರೈಸ್ತ ಧರ್ಮಸಭೆ ಯೇಸುಕ್ರಿಸ್ತರ ಜನನಕ್ಕೆ 4 ವಾರಗಳ ಅಧ್ಯಾತ್ಮಿಕ ಸಿದ್ಧತೆಯನ್ನು ಮಾಡಿ ಕೊಳ್ಳುವುದು ಹಲವಾರು ಶತಮಾನಗಳಿಂದ ನಡೆದು ಬಂದ ರೂಢಿ. ಈ ನಾಲ್ಕು ವಾರಗಳ ಅಧ್ಯಾತ್ಮಿಕ ಸಿದ್ಧತಾ ಕಾಲವನ್ನು ಆಡ್ವೆಂಟ್ ಎಂದು ಕರೆಯುತ್ತಾರೆ. ಆಡ್ವೆಂಟ್ ಎಂಬ ಪದ ಲ್ಯಾಟಿನ್ ಭಾಷೆಯ ಆಂದ್ವೆತುಸ್ ಎಂಬ ಪದದಿಂದ ಬಂದಿದೆ. ಅಂದರೆ ಆಗಮನ ಎಂದರ್ಥ. ಈ ಸಮಯದಲ್ಲಿ ಕ್ರೈಸ್ತರು ಯೇಸು ಕ್ರಿಸ್ತರ ಆಗಮನವನ್ನು ನಿರೀಕ್ಷಿಸುತ್ತಾ ಆದಕ್ಕಾಗಿ ಪ್ರಾರ್ಥನೆ, ಧ್ಯಾನಮಾಡಿ ಏಕಚಿತ್ತದಿಂದ ಸಿದ್ಧತೆಯನ್ನು ಮಾಡುತ್ತಾರೆ. ಯೇಸು ಕ್ರಿಸ್ತರ ಆಗಮನವನ್ನು ನಿರೀಕ್ಷಿಸುತ್ತ ಅಧ್ಯಾತ್ಮಿಕ ಸಿದ್ಧತೆಯಲ್ಲಿರುತ್ತಾರೆ.
ಹೊಸ ಒಡಂಬಡಿಕೆಯಲ್ಲಿ ಸಂತ ಮತ್ತಾಯನ ಶುಭವಾರ್ತೆಯಲ್ಲಿ ಯೇಸುಕ್ರಿಸ್ತರ ಜನನದ ಕುರಿತು ಹೀಗೆಂದು ಉಲ್ಲೇಖ ಮಾಡಲಾಗಿದೆ ‘ಇಗೋ, ಕನ್ಯೆಯೊಬ್ಬಳು ಗರ್ಭ ತಳೆದು ಪುತ್ರನೊಬ್ಬನಿಗೆ ಜನ್ಮ ನೀಡುವಳು. ಆತನಿಗೆ ಇಮ್ಮಾನುವೇಲ್ ಎಂದು ಹೆಸರಿಡುವರು’. ಇಮ್ಮಾನುವೇಲ್ ಎಂದರೆ ದೇವರು ನಮ್ಮೊಡನೆ ಇದ್ದಾರೆ ಎಂದರ್ಥ. ಯೇಸು ಕ್ರಿಸ್ತರು ದೇವ ಪುತ್ರರಾಗಿ ಕನ್ಯಾಮರಿಯಮ್ಮನವರ ಉದರದಲ್ಲಿ ಜನಿಸಿ ಧರೆಗಿಳಿಯುವ ಕುರಿತು ಇನ್ನೆರಡು ಪ್ರಮುಖ ಉಲ್ಲೇಖಗಳಿವೆ: ‘ಜೆಸ್ಸೆಯನ ಬುಡದಿಂದ ಓಡೆಯುವುದೊಂದು ಚಿಗುರು, ಆದರ ಬೇರಿನಿಂದ ಫಲಿಸುವುದೊಂದು ತಳಿರು.
ನೆಲಸುವುದಾತನ ಮೇಲೆ ಜ್ಞಾನ ವಿವೇಕದಾಯಕ ಆತ್ಮ: ಸರ್ವೇಶ್ವರನ ಅರಿವನು ಭಯಸುವವನು ಹುಟ್ಟಿಸುವೆ ಆತ್ಮ ಅಹುದು.
Related Articles
Advertisement
ಇದೆಂಥ ಶುಭಾಶಯ ಎಂದು ಅವಳು ಯೋಚಿಸತೊಡಗಿದಳು. ದೂತನು ಆಕೆಗೆ ಮರಿಯಾ,ನೀನು ಅಂಜಬೇಕಾಗಿಲ್ಲ. ದೇವರ ಅನುಗ್ರಹ ನಿನಗೆ ಲಭಿಸಿದೆ. ಇಗೋ, ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ; ಆತನಿಗೆ ಯೇಸು ಎಂಬ ಹೆಸರಿಡಬೇಕು, ಅತನು ಮಹಾಪುರುಷನಾಗುವನು.
ಪರಾತ್ಪರ ದೇವರ ಪುತ್ರ ಎನಿಸಿಕೊಳ್ಳುವನು. ಯೇಸು ಕ್ರಿಸ್ತರ ಜನನದ ಕುರಿತು ಇತಿಹಾಸಕಾರರ ಉಲ್ಲೇಖ ಪ್ರಭು ಯೇಸುಕ್ರಿಸ್ತರ ಜನನದ ಕುರಿತು ನಾಲ್ವರು ಶುಭ ಸಂದೇಶಕಾರರಲ್ಲದೆ, ಇತಿಹಾಸಕಾರರು ತಮ್ಮ ಬರಹಗಳಲ್ಲಿ ಉಲ್ಲೇಖೀಸಿರುವುದು ಗಮನಾರ್ಹ. ಟಾಶಿಟಸ್ ಎಂಬಾತ ಕ್ರಿ.ಶ 114ರಲ್ಲಿ ಹೀಗೆಂದು ಬರೆಯುತ್ತಾನೆ.
‘ಕ್ರೈಸ್ತ ಧರ್ಮದ ಸ್ಥಾಪಕ ಯೇಸು ಕ್ರಿಸ್ತರಿಗೆ ಪೊನ್ಶಿಯಸ್ ಪಿಲಾತ ಎಂಬಾತನು ರೋಮಿನ ಚಕ್ರವರ್ತಿಯಾದ ಟೈಬೀರಿಯನ್ ಕಾಲದಲ್ಲಿ ಶಿಲುಬೆಯ ಮರಣದ ಶಿಕ್ಷೆಯನ್ನುವಿಧಿಸಿದನು’. ಪ್ಲೀನಿ ದಯಂಗರ್ ಎಂಬಾತ ಚಕ್ರವರ್ತಿ ತಾರ್ಜನ್ ಗೆ ಯೇಸು ಕ್ರಿಸ್ತರ ಜನನದ ಕುರಿತು ಬರೆದ ಒಂದು ಪತ್ರದಲ್ಲಿ ಉಲ್ಲೇಖವಿದೆ. ಜೊಸೇಫಾತ್ ಎಂಬ ಯಹೋದಿ ಚರಿತ್ರೆಕಾರನು ಕ್ರಿ.ಶ. 90 ರಲ್ಲಿ ಯೇಸು ಕ್ರಿಸ್ತರ ಜೀವನದ ಬಗ್ಗೆ ಹಲವಾರು ಸಂಗತಿಗಳನ್ನು ಬರೆದಿದ್ದಾನೆ. ಬಾಬಿಲೊಯಾನಿ ಎಂಬಾತನು ‘ತಾಲ್‌ವುುದ್’ ಗ್ರಂಥದಲ್ಲಿ ಯೇಸು ಕ್ರಿಸ್ತರ ಜೀವನದ ಕುರಿತು ಹಲವು ವಿಷಯಗಳನ್ನು ಉಲ್ಲೇಖೀಸಿದ್ದಾನೆ. ದೇವರ ಪುತ್ರ ಯೇಸು ಕ್ರಿಸ್ತ ಮಾನವ ಕುಲದ ಪಾಪ ವಿಮೋಚಕ ಪ್ರವಾದಿ ಯೆಶಾಯನ ಮೂಲಕ ದೇವರು ‘ಇಗೋ ನನ್ನ ದೂತನನ್ನು ನಿನಗೆ ಮುಂದಾಗಿ ಕಳುಹಿಸುವೆನು, ಆತನು ನಿನ್ನ ಮಾರ್ಗವನ್ನು ಮುಂಚಿತವಾಗಿ ಸಿದಟಛಿಗೊಳಿಸುವನು’ ಎಂದು ವಾಗ್ಧಾನ ಮಾಡಿದ್ದಾರೆ. ‘ಸರ್ವೇಶ್ವರನಿಗಾಗಿ ಮಾರ್ಗವನ್ನು ಸಿದ್ಧಪಡಿಸಿರಿ. ಆತನ ಆಗಮನಕ್ಕಾಗಿ ಹಾದಿಯನ್ನು ಸುಗಮವಾಗಿಸಿರಿ’ ಎಂದು ಯೇಸು ಕ್ರಿಸ್ತ ಹುಟ್ಟುವ ಮೊದಲೇ ಘೋಷಿಸಲಾಗಿತ್ತು. ಈ ಪ್ರವಾದನೆಗೆ ಅನುಗುಣವಾಗಿ ಯೊಹಾನ್ನನು ‘ಪಶ್ಚಾತ್ತಾಪ ಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ. ಸ್ನಾನದೀಕ್ಷೆಯನ್ನು ಪಡೆದುಕೊಳ್ಳಿ. ದೇವರು ನಿಮ್ಮ ಪಾಪಗಳನ್ನು ಕ್ಷಮಿಸಿ ಬಿಡುವರು’ ಎಂಬ ಉಲ್ಲೇಖ ಇದೆ. 2000 ವರುಷ ಹಿಂದೆ ಯೇಸುಕ್ರಿಸ್ತರು ಗೋದಲಿಯಲ್ಲಿ ಜನಿಸಿ ಮಾನವ ಕುಲದ ವಿಮೋಚನೆಗಾಗಿ ಕಾಲ್ವರಿ ಬೆಟ್ಟದಲ್ಲಿ ಶಿಲುಬೆಯ ಮೇಲೆ ತನ್ನ ಪ್ರಾಣವನ್ನು ತೆತ್ತರು. ದೇವರ ಪರಿಶುದ್ಧತೆಯು ಮನುಷ್ಯನ ಕೈಗೆ ನಿಲುಕದ ಒಂದು ಶಾಶ್ವತ ರಹಸ್ಯವಾಗಿದೆ. ದೇವರು ತಮ್ಮನ್ನೇ ಹೋಲುವ ಮನುಷ್ಯರನ್ನು ಸೃಷ್ಟಿಸುವ ಮೂಲಕ ಅವನಿಗೆ ಸರ್ವಾಧಿಕಾರ ಮತ್ತು ಮಹಿಮೆಯನ್ನು ಕೊಟ್ಟು ಉನ್ನತಕ್ಕೇರಿಸಿದರು. ಆದರೆ ಮಾನವನು ಪಾಪ ಮಾಡುವುದರ ಮೂಲಕ ದೇವರ ಮಹಿಮೆಯನ್ನು, ಕೀರ್ತಿಯನ್ನು ಕಳೆದುಕೊಳ್ಳುತ್ತಾನೆ. ಮಾನವನನ್ನು ಪಾಪದಿಂದ ವಿಮೋಚಿಸಲ ದೇವರು ತನ್ನ ಪುತ್ರ ಯೇಸುಕ್ರಿಸ್ತರನ್ನು ಧರೆಗೆ ಕಳುಹಿಸಿದರು ಎನ್ನುವುದು ಕ್ರೈಸ್ತರ ನಂಬಿಕೆ.
ಇಂದು ನಮ್ಮ ಪರಿಸರ, ಸಮಾಜ, ಹಾಗೂ ರಾಷ್ಟ್ರದಲ್ಲಿ ಕ್ಷಮದಾನ ಮನೋಭಾವ ಕ್ಷೀಣಿಸುತ್ತಿದೆ. ರಾಜಕೀಯ, ಧಾರ್ಮಿಕ, ವ್ಯಕ್ತಿ ವ್ಯಕ್ತಿಗಳ ಮಧ್ಯೆ ವೈರತ್ವ, ವಿವಿಧ ಗುಂಪುಗಳ ಮಧ್ಯೆ ಸಂಘರ್ಷ ಸಾಮಾನ್ಯವಾಗಿದೆ. ಈ ಅನಿಷ್ಠಕ್ಕೆ, ಬಲಿಯಾದ ರಾಜ್ಯಗಳು, ಸಮುದಾಯದವರ ಉದಾಹರಣೆಗಳು ಸಾಕಷ್ಟಿವೆ. ನಾವು ಪರರನ್ನು ಗೌರವಿಸಿ ಕ್ಷಮಿಸದಿದ್ದರೆ ದೇವರ ಕೃಪಾವರ ನಮ್ಮ ಹೃದಯಗಳಲ್ಲಿ ನೆಲೆಯಾಗಲು ಸಾಧ್ಯವಿಲ್ಲ. ಕಣ್ಣಿಗೆ ಕಾಣುವ ನಮ್ಮ ಸಹೋದರ ಸಹೋದರಿಯನ್ನು ಹೃದಯವಂತಿಕೆಯಿಂದ, ಉದಾರ ಮನೋಭಾವದಿಂದ ನಾವು ಗೌರವಿಸದಿದ್ದರೆ ನಮ್ಮ ಕಣ್ಣಿಗೆ ಕಾಣದ ದೇವರನ್ನು ಪ್ರೀತಿಸಲಾಗದು. ನಮ್ಮ ಸಹೋದರ ಸಹೋದರಿಯರ ತಪ್ಪುಗಳನ್ನು ನಾವು ಕ್ಷಮಿಸಲು ನಿರಾಕರಿಸಿದಾಗ ನಮ್ಮ ಹೃದಯದ ಬಾಗಿಲು ಮುಚ್ಚಲ್ಪಟ್ಟು ದೇವರ ದಯೆ, ಪ್ರೀತಿಯನ್ನು ಸವಿಯಲು ಆಗುವುದಿಲ್ಲ. ನಾವು ಪರರನ್ನು ಪ್ರೀತಿಸಿ ಅವರಿಗೆ ಸಹಾಯ ಹಸ್ತ ನೀಡಿದಾಗ ಧರ್ಮದ ಸಾರವನ್ನು ನಮ್ಮ ಜೀವನದಲ್ಲಿ ಅನುಭವಿಸಲು ನಮಗೆ ಹುಮ್ಮಸ್ಸು ಲಭಿಸುತ್ತದೆ. ಸರ್ವೇಶ್ವರ ದೇವರು ಬಡವರ, ನಿರ್ಗತಿಕರ ಕೂಗನ್ನು ಕೇಳುತ್ತಾರೆ. ಅವರು ದೀನದಲಿತರಿಗೆ ಬಡಬಗ್ಗರಿಗೆ, ನೀತಿ ನ್ಯಾಯವನ್ನು ಒದಗಿಸಿ ಕೊಡುತ್ತಾರೆ. ಲೋಕದಲ್ಲಿ ನ್ಯಾಯ ನೀತಿ, ಶಾಂತಿ ಸಮಾಧಾನ, ಸಾಮರಸ್ಯ ಭ್ರಾತೃತ್ವ ನೆಲೆಗೊಳಿಸುವುದು, ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಇದು ಯಾವುದೊಂದು ಧರ್ಮಕ್ಕೆ ಸೀಮಿತವಾದುದಲ್ಲ. ದೇವರ ಔದಾರ್ಯವನ್ನು ನಾವೆಲ್ಲರೂ ಪರಸ್ಪರ ಹಂಚಿಕೊಂಡು ಜೀವನದಲ್ಲಿ ದಿಟ್ಟತನದಿಂದ ಸಹೋದರರಂತೆ ಮುನ್ನಡೆಯಬೇಕು. ಬೈಬಲ್‌ನ ಸಿರಾಖನ ಗ್ರಂಥದಲ್ಲಿ ‘ನ್ಯಾಯ ನೀತಿಯನ್ನು ಅನುಸರಿಸಿದರೆ ನೀನು ಅದನ್ನು ಹೊದ್ದುಕೊಳ್ಳುವೆ. ಚಂದವಾದ ನಿಲುವಂಗಿಯಂತೆ ಅದನ್ನು ಧರಿಸಿಕೊಳ್ಳುವೆ. ಪಕ್ಷಿಗಳು ತಂಗುವುದು ಸ್ವಜಾತಿಯ ಜತೆಗೆ. ಅದರಂತೆ ಸತ್ಯವು ಸೇರುವುದು ಸತ್ಯಶೀಲರ ಬಳಿಗೆ, ಸಿಂಹವು ಕಾದುಕೊಂಡಿರುವುದು ಬೇಟೆಗಾಗಿ, ಪಾಪವು ಕಾದುಕೊಂಡಿರುವುದು ಅಧರ್ಮಗಳಿಗಾಗಿ’ (ಸಿರಾಖ 27/8-10) ಎಂಬ ಉಲ್ಲೇಖವಿದೆ. ಆಧುನಿಕ ಯುಗದಲ್ಲಿ ಮಾನವನು ತನ್ನ ಜಾಣ್ಮೆಯಿಂದ ಜೀವನದ ಹಲವು ಮಜುಲುಗಳಲ್ಲಿ ತನ್ನ ಆಧಿಪತ್ಯವನ್ನು ಸ್ಥಾಪಿಸಿದ್ದಾನೆ. ದೇವರ ಸೃಷ್ಟಿಯಲ್ಲಿ ಮಾನವನು ಅತಿ ಸುಂದರ ಹಾಗೂ ಮೊದಲ ಸೃಷ್ಟಿ. ಆದರೆ ಮಾನವನ ಅಂತರಾಳದ ವೇದನೆಗಳನ್ನು ಗಮನಿಸಿದಾಗ ಪರರೊಡನೆ ಅನ್ಯೋನ್ಯತೆಯಿಂದ ಜೀವನ ನಡೆಸಲು ನಿಜವಾಗಿ ಸೋತಿದ್ದಾನೆಯೇ ಎಂಬ ಸಂಶಯ ಬರುತ್ತದೆ. ಆಧ್ಯಾತ್ಮಿಕತೆ ಬಗೆಗಿನ ಒಲವು ಕಡಿಮೆ ಆಗಿರುವುದು ಇದಕ್ಕೆ ಕಾರಣ ಎನ್ನಬಹುದು. ಅಧ್ಯಾತ್ಮಿಕತೆ ನಾಶವಾದರೆ ನೈತಿಕತೆಯ ಪತನವಾಗುತ್ತದೆ. ಜೀವನದಲ್ಲಿ ಉತ್ಸಾಹ ಕುಂದುತ್ತದೆ. ನಿರಾಶೆ, ಖನ್ನತೆ ಮೂಡುತ್ತದೆ. ದೇವರಲ್ಲಿ ತಮ್ಮ ವಿಶ್ವಾಸವನ್ನು ದೃಢಪಡಿಸಿ ಪರರಿಗೆ ಸಹಾಯ ಹಸ್ತ ನೀಡಿ ಈ ಲೋಕದಲ್ಲಿ ಜೀವಿಸುವವರು ಬೆಳಕಾಗಿ ಪ್ರಜ್ವಲಿಸುತ್ತಾರೆ. ಎಲ್ಲರ ಬಾಳ್ವೆ ಈ ಸಮಾಜದಲ್ಲಿ ಹಸನಾಗ ಬೇಕು ; ಇದಕ್ಕಾಗಿ ದುಡಿಯುವುದೇ ಮಾನವ ಧರ್ಮ. ಕ್ರಿಸ್ಮಸ್ ಮಾನವ ಕುಲವನ್ನು ಅಂಧಕಾರದಿಂದ ಬೆಳಕಿನೆಡೆಗೆ ಕೊಂಡೊಯ್ಯಲಿ, ಅಂಧಕಾರದಿಂದ ಬೆಳಕಿನೆಡೆಗೆ ಕೊಂಡೊಯ್ಯಲಿ. ಇದೇ ನಮ್ಮ ಆಶಯ. — ರೆ| ಫಾ| ಮುಕ್ತಿ ಪ್ರಕಾಶ್, ಸೈಂಟ್ ಜೋಸೆಫ್ ಸೆಮಿನರಿ, ಜಪ್ಪು, ಮಂಗಳೂರು