ಮಂಗಳೂರು: ನರೇಂದ್ರ ಮೋದಿಯವರ ಮುಖದ ಒಂದು ಭಾಗ ರಾಜ ಗಾಂಭೀರ್ಯ ಮತ್ತು ಇನ್ನೊಂದು ಭಾಗದಲ್ಲಿ ಸಿಂಹದ ಮುಖದ ಚಿತ್ರವಿರುವ ಕಲಾಕೃತಿಯೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ವಿಶೇಷವೆಂದರೆ, ಈ ಚಿತ್ರವನ್ನು ರಚಿಸಿದವರು ಮಂಗಳೂರಿನ ಯುವಕ.
ನಗರದ ಕದ್ರಿ ಕಂಬಳ ನಿವಾಸಿ ಜೀವನ್ ಆಚಾರ್ಯ ಅವರೇ ಈ ಚಿತ್ರ ರಚಿಸಿ ಸಾಮಾಜಿಕ ತಾಣದಲ್ಲಿ ಸಂಚಲನ ಮೂಡಿಸಿದವರು. ನಗರದ ಖಾಸಗಿ ಕಾಲೇಜಿನಲ್ಲಿ ಚಿತ್ರಕಲಾ ಶಿಕ್ಷಕರಾಗಿರುವ ಜೀವನ್, ಎರಡೇ ದಿನದಲ್ಲಿ ಈ ಚಿತ್ರವನ್ನು ರಚಿಸಿ ಶಹಬ್ಟಾಸ್ ಅನಿಸಿಕೊಂಡಿದ್ದಾರೆ. ಜೀವನ್ ಅವರು ಕಲಾವಿದ ಜಾನ್ ಚಂದ್ರನ್ ಅವರ ಶಿಷ್ಯ.ಚಿತ್ರದಲ್ಲಿ ‘ಚೌಕೀದಾರ್ ಶೇರ್ ಹೈ’ ಎಂದು ಬರೆಯಲಾಗಿದೆ. ನವ ಭಾರತದ ಕಲ್ಪನೆಯೊಂದಿಗೆ ನರೇಂದ್ರ ಮೋದಿಯವರು ಆಗಮಿಸುವ ಭಂಗಿಯ ಚಿತ್ರ ಇದಾಗಿದೆ. ಡಿಜಿಟಲ್‌ನ ವೆಕ್ಟರ್ ಕಲಾತ್ಮಕತೆಯಲ್ಲಿ ಚಿತ್ರ ರಚಿಸಲಾಗಿದೆ. ‘ರಾಷ್ಟ್ರ ಹಿತದ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ಚಿತ್ರ ರಚನೆ ಮಾಡಿದ್ದೇನೆ. ಉತ್ತಮ ಬೇಡಿಕೆಯೂ ವ್ಯಕ್ತವಾಗಿದೆ. ಯಾವುದೇ ಪಕ್ಷದ ಕಾರ್ಯಕರ್ತ ನಾನಲ್ಲ’ ಎಂದು ಜೀವನ್ ಆಚಾರ್ಯ ತಿಳಿಸಿದ್ದಾರೆ.
ನಗರದ ಕರಣ್ ಆಚಾರ್ಯ ಅವರು ಈ ಹಿಂದೆ ರುದ್ರ ಹನುಮನ ಚಿತ್ರ ಬಿಡಿಸಿ ರಾಷ್ಟ್ರಾದ್ಯಂತ ಮೆಚ್ಚುಗೆ ಗಳಿಸಿದ್ದರು. ಸ್ವತಃ ನರೇಂದ್ರ ಮೋದಿಯವರೇ ಕರಣ್ ಅವರನ್ನು ಪ್ರಶಂಸಿದ್ದರು. ಇದೀಗ ಜೀವನ್ ರಚಿಸಿದ ನರೇಂದ್ರ ಮೋದಿಯವರ ಚಿತ್ರವೂ ಅದೇ ಮಾದರಿಯಲ್ಲಿ ಸದ್ದು ಮಾಡುತ್ತಿದೆ. ಜೀವನ್ ಅವರು ಚಿತ್ರಕಲೆಗೆ ಸಂಬಂಧಿಸಿ ಕರಣ್ ಆಚಾರ್ಯ ಅವರಿಂದ ಒಂದು ವಾರ ಕಾಲ ತರಬೇತಿ ಪಡೆದಿದ್ದರು.