ದೇಶದ ಅತೀ ದೊಡ್ಡ ಪ್ರಜಾಪ್ರಭುತ್ವದ ಹಬ್ಬದ ಫಲಿತಾಂಶ, ಮತದಾರನ ತೀರ್ಪು ಗುರುವಾರ ಬಹಿರಂಗವಾಗಿದೆ. 542 ಸದಸ್ಯ ಬಲದ ಲೋಕಸಭೆಗೆ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ 300ಕ್ಕೂ ಅಧಿಕ ಸ್ಥಾನ ಪಡೆಯುವ ಮೂಲಕ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಗದ್ದುಗೆ ಏರಲು ಜನಾದೇಶ ನೀಡಿದ್ದಾರೆ. ಚುನಾವಣೋತ್ತರ ಸಮೀಕ್ಷೆಯನ್ನು ಮೀರಿ ಭಾರತೀಯ ಜನತಾ ಪಕ್ಷ 2019ರ ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಪಡೆದಿದೆ. ಇದರೊಂದಿಗೆ ಮೂರು ದಶಕಗಳ ಬಳಿಕ ಮೊದಲ ಬಾರಿಗೆ ಪೂರ್ಣ ಬಹುಮತದ ಸರ್ಕಾರ ಕೇಂದ್ರದಲ್ಲಿ ಅಧಿಕಾರ ಹಿಡಿದಿದೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಧಿಕಾರದ ಗದ್ದುಗೆಯಿಂದ ದೂರ ಇಡಬೇಕೆಂಬ ಮಹಾಘಟಬಂಧನ್ ಹೀನಾಯವಾಗಿ ಸೋಲು ಕಂಡಿದೆ. ಉತ್ತರಪ್ರದೇಶದಲ್ಲಿ ಎಸ್ಪಿ, ಬಿಎಸ್ಪಿ ಮೈತ್ರಿ ಕೂಡಾ ಮುಗ್ಗರಿಸಿಬಿದ್ದಿದ್ದು, ಬಿಜೆಪಿ ಮೈತ್ರಿಕೂಟ 60 ಸ್ಥಾನಗಳನ್ನು ಪಡೆದಿದೆ. ಕರ್ನಾಟಕದಲ್ಲಿಯೂ ಬಿಜೆಪಿ ಮೇಲುಗೈ ಸಾಧಿಸಿದೆ. ಹಿರಿಯ ಘಟಾನುಘಟಿ ಮುಖಂಡರುಗಳಾದ ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ಕೆಎಚ್ ಮುನಿಯಪ್ಪ, ದಿಗ್ವಿಜಯ್ ಸಿಂಗ್, ಸೋಲಿನ ರುಚಿ ಕಂಡಿದ್ದಾರೆ. ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿಗೆ ಮುಖಭಂಗವಾಗಿದ್ದು, ಟಿಎಂಸಿ 22, ಬಿಜೆಪಿ 19 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಛತ್ತೀಸ್ ಗಢ್, ದೆಹಲಿ, ಗುಜರಾತ್, ಉತ್ತರಾಖಂಡ್, ಒಡಿಶಾ, ಹಿಮಾಚಲ್ ಪ್ರದೇಶ, ತೆಲಂಗಾಣ,ಮಹಾರಾಷ್ಟ್ರ, ಹರ್ಯಾಣ, ಜಾರ್ಖಂಡ್, ಬಿಹಾರ್, ರಾಜಸ್ಥಾನ್, ಮಧ್ಯಪ್ರದೇಶದಲ್ಲಿ ಕಮಲ ಅರಳುವ ಮೂಲಕ ಮತ್ತೊಮ್ಮೆ ಮೋದಿ ಸರ್ಕಾರ ಅಧಿಕಾರಕ್ಕೇರಿದೆ. ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ 91 ಸ್ಥಾನ ಪಡೆದಿದೆ. ಇತರರು 100 ಸ್ಥಾನಗಳಲ್ಲಿ ಜಯ ಗಳಿಸಿದ್ದಾರೆ.