ತುಳುನಾಡಿನ ಕಾರ್ಣಿಕ ದೈವ ಕೊರಗಜ್ಜನ ಕುರಿತು ತಯಾರಾಗುತ್ತಿರುವ “ಕರಿ ಹೈದ ಕರಿ ಅಜ್ಜ’ ಸಿನಿಮಾದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ನಟ ಕಬೀರ್ ಬೇಡಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿರುವುದು ನಿಮಗೆ ಗೊತ್ತಿರಬಹುದು. ಈಗ ಈ ಸಿನಿಮಾಕ್ಕೆ ಹಾಲಿವುಡ್ ಮತ್ತು ಬಾಲಿವುಡ್‌ನ ಪ್ರಸಿದ್ಧ ಕೊರಿಯೋಗ್ರಫರ್ ಸಂದೀಪ್ ಸೋಪರ್ಕರ್ ಎಂಟ್ರಿಯಾಗಿದ್ದಾರೆ.
ಹೌದು, “ಕರಿ ಹೈದ ಕರಿ ಅಜ್ಜ’ ಸಿನಿಮಾದಲ್ಲಿ ಬರುವ ಗುಳಿಗ ಪಾತ್ರದಲ್ಲಿ ನಟ ಕಂ ಕೊರಿಯೋಗ್ರಫರ್ ಸಂದೀಪ್ ಸೋಪರ್ಕರ್ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಸದ್ದಿಲ್ಲದೆ “ಕರಿ ಹೈದ ಕರಿ ಅಜ್ಜ’ ಸಿನಿಮಾದ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಮಾಧ್ಯಮಗಳ ಮುಂದೆ ಬಂದಿದ್ದ ಸಂದೀಪ್ ಸೋಪರ್ಕರ್ ಚಿತ್ರೀಕರಣದ ಕುರಿತು ತಮ್ಮ ಅನುಭವ ಹಂಚಿಕೊಂಡರು.
“ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಇಂಥದ್ದೊಂದು ಪಾತ್ರ ಮಾಡಿದ್ದೇನೆ. ಇಡೀ ಸಿನಿಮಾದ ಚಿತ್ರೀಕರಣ ನನಗೊಂದು ಒಳ್ಳೆ ದೈವಿಕ ಅನುಭವ ಸಿಕ್ಕಿದೆ. ಈ ತಂಡ ಹಾಗೂ ಸಿನಿಮಾದಲ್ಲಿ ಕೆಲಸ ಮಾಡಿದ್ದು ತುಂಬಾ ಖುಷಿ ಕೊಟ್ಟಿದೆ. ಒಳ್ಳೆಯ ತಂಡದಿಂದ ಅದ್ಭುತ ಕೆಲಸವಾಗಿದೆ. ಅಭಿನಯ ಮತ್ತು ನೃತ್ಯದ ಮೂಲಕ ನನ್ನ ಪಾತ್ರ ಸಾಗುತ್ತದೆ. ಪಾತ್ರಕ್ಕಾಗಿ ನನ್ನ ಸಿಸ್ಟರ್ಸ್ ಜೊತೆಗೆ ಒಂದಷ್ಟು ರೀಸರ್ಚ್ ಕೂಡ ಮಾಡಿದ್ದೇನೆ. ಮೊದಲ ಬಾರಿಗೆ ಜಾನಪದ ಶೈಲಿಯಲ್ಲಿ ಡ್ಯಾನ್ಸ್ ಮಾಡಿದ್ದು ಶಿವನ ನೃತ್ಯ ಮಾಡಿರುವ ಅನುಭವ ಮರೆಯಲಾಗದು’ ಎಂದರು.
ಇದನ್ನೂ ಓದಿ:ಕಾಂಗ್ರೆಸ್ ಗೆಲ್ಲಲು ಸೂರ್ಯ ನಾರಾಯಣ ರೆಡ್ಡಿಗೆ ಉಸ್ತುವಾರಿ ನೀಡಲು ಹೈಕಮಾಂಡ್ ಚಿಂತನೆ.!
ಇದೇ ವೇಳೆ ಮಾತನಾಡಿದ ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್, “ಮೂರು ದಿನಗಳ ಹಿಂದಷ್ಟೇ ಕೊರಗಜ್ಜನಿಗೆ ಕೋಲ ಕೊಡುವ ಮೂಲಕ “ಕರಿ ಹೈದ ಕರಿ ಅಜ್ಜ’ ಚಿತ್ರದ ಶೂಟಿಂಗ್ ಮುಗಿಸಲಾಯಿತು. ಚಿತ್ರೀಕರಣ ಸಂದರ್ಭದಲ್ಲಿ ಸಾಕಷ್ಟು ಪವಾಡಗಳು ನಡೆದಿದ್ದು, ಎಲ್ಲರ ಅನುಭಕ್ಕೆ ಬಂದಿದೆ. ಇದು ಕೊರಗಜ್ಜ ಎಂದು ಕರೆಯುವ 22-23 ವರ್ಷ ಬದುಕಿದ್ದ ಹುಡುಗನ ಕಥೆ. ಇದರಲ್ಲಿ ಹಾಲಿವುಡ್ ಕೊರಿಯೋಗ್ರಾಫರ್ ಹಾಗೂ ನಟ ಸಂದೀಪ್ ಸೋಪರ್ಕರ್ “ಗುಳಿಗ’ನ ಪಾತ್ರ ಮಾಡಿದ್ದಾರೆ. ಇದು ಕೊರಗಜ್ಜನ ಜೊತೆಗೆ ಸಾಗುತ್ತದೆ. “ಗುಳಿಗ’ನ ಪಾತ್ರವನ್ನು ಡ್ಯಾನ್ಸ್ ಬೇಸ್‌ನಲ್ಲಿ ತೋರಿಸಲಾಗಿದ್ದು ಆ ಪಾತ್ರಕ್ಕೆ ಸಂದೀಪ್ ಸೂಕ್ತರಾಗಿದ್ದಾರೆ. ಈ ಪಾತ್ರವನ್ನು ಸಂದೀಪ್ ಅದ್ಭುತವಾಗಿ ನಿಭಾಯಿಸಿದ್ದಾರೆ’ ಎಂದರು.
“ಕರಿ ಹೈದ ಕರಿ ಅಜ್ಜ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿಯರಾದ ಶ್ರುತಿ, ಭವ್ಯಾ ಮತ್ತು ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಚಿತ್ರೀಕರಣದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. “ಧ್ರತಿ ಕ್ರಿಯೇಷನ್ಸ್’ ಹಾಗೂ “ಸಕ್ಸಸ್ ಫಿಲಂಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ “ಕರಿ ಹೈದ ಕರಿ ಅಜ್ಜ’ ಚಿತ್ರ ಕನ್ನಡ, ತುಳು ಹಾಗೂ ಮಲಯಾಳಂ ಭಾಷೆಯಲ್ಲಿ ಏಕಕಾಲಕ್ಕೆ ತಯಾರಾಗುತ್ತಿದ್ದು, ಇದೇ ವರ್ಷದ ಮಧ್ಯ ಭಾಗಕ್ಕೆ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ ಚಿತ್ರತಂಡ.