ಮುಂಬಯಿ: ಬಾಲಿವುಡ್ ಖ್ಯಾತ ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಅವರ ಬಾವ ಶವವಾಗಿ ಪತ್ತೆಯಾಗಿದ್ದು , ಆತ್ಮಹತ್ಯೆ ಶಂಕೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೇಸನ್ ವಾಟ್ಕಿನ್ಸ್ ಮುಂಬೈನ ಮಿಲ್ಲತ್ ನಗರದಲ್ಲಿರುವ ಅವರ ನಿವಾಸದಲ್ಲಿ ಗುರುವಾರ ಶವವಾಗಿ ಪತ್ತೆಯಾಗಿದ್ದು, ಪೋಷಕರು ಮನೆಯಿಂದ ಹೊರ ಹೋಗಿದ್ದ ವೇಳೆ ನೇಣು ಬಿಗಿದುಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
42 ವರ್ಷದ ಅವರು ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದೇ ಕಾರಣದಿಂದ ಅವರನ್ನು ಕಠಿಣ ನಿರ್ಧಾರ ತಳೆಯಲು ಪ್ರೇರೇಪಿಸಿರಬಹುದು ಎಂದು ಹೇಳಲಾಗಿದೆ. ಆದರೆ ಯಾವುದೇ ಡೆತ್ ನೋಟ್ ಕಂಡುಬಂದಿಲ್ಲ.
ಆರಂಭಿಕ ತನಿಖೆಯ ಪ್ರಕಾರ, ಘಟನೆಯ ಸಮಯದಲ್ಲಿ ವಾಟ್ಕಿನ್ಸ್ ತನ್ನ ಫ್ಲಾಟ್‌ನಲ್ಲಿ ಒಬ್ಬಂಟಿಯಾಗಿದ್ದರು. ಅವರ ಪೋಷಕರು ಔಷಧಗಳನ್ನು ಖರೀದಿಸಲು ಹೊರಗೆ ಹೋಗಿದ್ದರು ಮತ್ತು ಅವರು ಹಿಂತಿರುಗಿದಾಗ ಅವರು ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದಿರುವುದು ಕಂಡುಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
Related Articles
ವಾಟ್ಕಿನ್ಸ್ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಲ್ಲಿ ಅವರು ದಾಖಲಾಗುವ ಮುನ್ನವೇ ಸಾವನ್ನಪ್ಪಿದ್ದರು ಎಂದು ಘೋಷಿಸಲಾಯಿತು ಎಂದು ಅಧಿಕಾರಿ ಹೇಳಿದ್ದಾರೆ.
ರೆಮೊ ಡಿಸೋಜಾ ಇನ್‌ಸ್ಟಾಗ್ರಾಮ್ ನಲ್ಲಿ ಜೇಸನ್ ಜೊತೆಗಿನ ಚಿತ್ರವನ್ನು ಹಂಚಿಕೊಂಡರು ಮತ್ತು “ನೀವು ನಮ್ಮ ಹೃದಯವನ್ನು ಮುರಿದಿದ್ದೀರಿ ಸಹೋದರ, ನೀವು ಅಂತಿಮವಾಗಿ ಶಾಂತಿಯನ್ನು ಕಂಡುಕೊಂಡಿದ್ದೀರಿ ಎಂದು ಭಾವಿಸುತ್ತೇವೆ” ಎಂದು ಬರೆದಿದ್ದಾರೆ. ರೆಮೋ ಡಿಸೋಜಾ ಅವರ ಪತ್ನಿ ಮತ್ತು ಜೇಸನ್ ಅವರ ಸಹೋದರಿ ಲಿಜೆಲ್ ಡಿಸೋಜಾ ಅವರು ಹಠಾತ್ ಸುದ್ದಿ ತಿಳಿದು ಆಘಾತಕ್ಕೊಳಗಾಗಿದ್ದಾರೆ.