Advertisement
ಬುಧವಾರ ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದ ಬಗ್ಗೆ ಸಂಸತ್ತಿನ ಉಭಯ ಸದನಗಳಿಗೆ ರಾಜನಾಥ್ ಸಿಂಗ್ ಮಾಹಿತಿ ನೀಡಿದರು. ಈ ಅಪಘಾತ ಹೇಗೆ ಸಂಭವಿಸಿತು ಎಂಬ ಬಗ್ಗೆ ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ಅವರ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದರು.
Related Articles
Advertisement
ಉಭಯ ಸದನಗಳಿಗೆ ಮಾಹಿತಿ ನೀಡಿದ ಬಳಿಕ ರಾಜನಾಥ್ ಸಿಂಗ್ ರಾಷ್ಟ್ರಪತಿ ಭವನಕ್ಕೆ ತೆರಳಿ, ರಾಷ್ಟ್ರಪತಿ ಮತ್ತು ಸೇನೆಯ ಮಹಾದಂಡ ನಾಯಕ ರಾಮನಾಥ ಕೋವಿಂದ್ ಅವರಿಗೆ ದುರ್ಘಟನೆಯ ಬಗ್ಗೆ ವಿವರಣೆ ನೀಡಿದರು.
ತನಿಖೆಗೆ ಆದೇಶ ನೀಡಿರುವ ವಿವರ, ಜ| ರಾವತ್ ಮತ್ತಿತರರು ವೆಲ್ಲಿಂಗ್ಟನ್‌ಗೆ ಯಾಕೆ ತೆರಳುತ್ತಿದ್ದರು ಎಂಬ ಬಗ್ಗೆಯೂ ಸ್ಪಷ್ಟನೆ ನೀಡಿದರಲ್ಲದೆ, ತೆರವಾಗಿರುವ ಸಿಡಿಎಸ್ ಹುದ್ದೆ ಬಗ್ಗೆ ಮಾಹಿತಿ ನೀಡಿದರು.
ಬ್ಲ್ಯಾಕ್ ಬಾಕ್ಸ್ ವಶಕ್ಕೆ :
ಈಗಾಗಲೇ ತನಿಖೆ ಆರಂಭಿಸಿರುವ ವಾಯುಪಡೆಯ ಅಧಿಕಾರಿಗಳು ಘಟನ ಸ್ಥಳದಿಂದ ಬ್ಲ್ಯಾಕ್ ಬಾಕ್ಸ್ ಅನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಇದನ್ನು ತನಿಖೆಗಾಗಿ ಕಳುಹಿಸಲಾಗಿದ್ದು, ಪೈಲಟ್‌ಗಳ ಕೊನೆಯ ಕ್ಷಣದ ಮಾತುಕತೆಗಳು, ರವಾನೆಯಾಗಿರುವ ಸಂದೇಶಗಳು ಮತ್ತಿತರ ಮಾಹಿತಿಗಳು ತಿಳಿದುಬರಲಿದ್ದು, ದುರಂತ ಹೇಗಾ ಯಿತು ಎಂಬುದು ತಿಳಿಯಲಿದೆ.
ಪ್ರಧಾನಿ, ರಕ್ಷಣ ಸಚಿವರ ನಮನ :
ಜ| ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು 11 ಸಿಬಂದಿಯ ಪಾರ್ಥಿವ ಶರೀರಗಳನ್ನು ತಮಿಳುನಾಡಿನಿಂದ ಹೊಸದಿಲ್ಲಿಗೆ ಗುರುವಾರ ರಾತ್ರಿ 8ರ ವೇಳೆಗೆ ತರಲಾಯಿತು. ಪಾಲಂ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪಾರ್ಥಿವ ಶರೀರಗಳನ್ನು ಮೂರು ಸೇನಾ ಪಡೆಗಳ ಮುಖ್ಯಸ್ಥರು ಬರಮಾಡಿಕೊಂಡರು. ಬಳಿಕ ರಾತ್ರಿ 9ರ ವೇಳೆಗೆ ಪ್ರಧಾನಿ ಮೋದಿ, ರಕ್ಷಣ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತ ಸಲಹೆಗಾರ ಅಜಿತ್ ದೋವಲ್ ಮತ್ತಿತರ ಗಣ್ಯರು ಜ| ರಾವತ್ ಸಹಿತ ಎಲ್ಲರ ಪಾರ್ಥಿವ ಶರೀರಗಳಿಗೆ ಗೌರವ ಅರ್ಪಿಸಿದರು.
ಬೆಂಗಳೂರಿನ ಆಸ್ಪತ್ರೆಗೆ ಕ್ಯಾ| ವರುಣ್ ಸಿಂಗ್ :
ತಮಿಳುನಾಡಿನ ಕೂನೂರಿನಲ್ಲಿ ಘಟಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಬದುಕಿ ಉಳಿದಿರುವ ಏಕಮಾತ್ರ ಅಧಿಕಾರಿ, ಐಎಎಫ್ನ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರನ್ನು ಬೆಂಗಳೂರಿನಲ್ಲಿರುವ ಐಎಎಫ್ ಕಮಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯ ಇರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ವೆಲ್ಲಿಂಗ್ಟನ್‌ನಲ್ಲಿ ಇರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವ ಸಂದರ್ಭದಲ್ಲಿ ಸಿಂಗ್ ಅವರನ್ನು ಜೀವರಕ್ಷಕ ವ್ಯವಸ್ಥೆಯಡಿ ಇರಿಸಲಾಗಿತ್ತು. ಅದೇ ಸ್ಥಿತಿಯಲ್ಲಿ ಅವರನ್ನು ಬೆಂಗಳೂರಿಗೆ ಕರೆತರಲಾಗಿದೆ.
ಜ| ನರವಾಣೆ ಹೊಸ ಸಿಡಿಎಸ್? :
ಜ| ಬಿಪಿನ್ ರಾವತ್ ಅವರ ಅಕಾಲಿಕ ನಿಧನದಿಂದಾಗಿ ರಕ್ಷಣ ಪಡೆಗಳ ಮುಖ್ಯಸ್ಥರ ಸ್ಥಾನ ತೆರವಾಗಿದ್ದು, ಈ ಹುದ್ದೆಗೆ ಹಾಲಿ ಭೂಸೇನಾ ಮುಖ್ಯಸ್ಥ ಜ| ನರವಾಣೆ ಅವರು ಆಯ್ಕೆಯಾಗುವ ಸಾಧ್ಯತೆ ಇದೆ. ಇನ್ನು 5 ತಿಂಗಳುಗಳಲ್ಲಿ ಜ| ನರವಾಣೆ ನಿವೃತ್ತರಾಗಲಿದ್ದಾರೆ. 3 ಪಡೆಗಳ ಮುಖ್ಯಸ್ಥರ ಪೈಕಿ ಇವರೇ ಹಿರಿಯರು. ಸದ್ಯದಲ್ಲೇ 3 ಪಡೆಗಳ ಉನ್ನತ ಅಧಿಕಾರಿಗಳನ್ನು ಒಳಗೊಂಡ ಸಮಿತಿಯೊಂದನ್ನು ಕೇಂದ್ರ ಸರಕಾರ ರಚಿಸಲಿದೆ. ಇದು ಎರಡು-ಮೂರು ದಿನಗಳಲ್ಲಿ ರಕ್ಷಣ ಸಚಿವರಿಗೆ ಶಿಫಾರಸು ಮಾಡಲಿದೆ. ಅವರು ಅದನ್ನು ಅಂಗೀಕರಿಸಿ, ಸಂಪುಟದ ಆಯ್ಕೆ ಸಮಿತಿಗೆ ಕಳುಹಿಸಲಿದ್ದಾರೆ. ಅಲ್ಲಿ ಅಂತಿಮವಾಗಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.
ಜ| ನರವಾಣೆ ಅವರೇ ಮುಂದಿನ ಸಿಡಿಎಸ್ ಆಗಬಹುದು ಎಂದು ಸರಕಾರದ ಮೂಲಗಳು ಹೇಳಿವೆ. ಇವರು ಪೂರ್ವ ಲಡಾಖ್ ಘರ್ಷಣೆಯನ್ನು ಎದುರಿಸಿದ ರೀತಿಯ ಬಗ್ಗೆ ಉತ್ತಮ ಅಭಿಪ್ರಾಯಗಳಿವೆ. ಸಿಡಿಎಸ್ ಹುದ್ದೆಯ ನಿವೃತ್ತಿ ವಯಸ್ಸು 65. ಮೂರು ರಕ್ಷಣ ಪಡೆಗಳ ಮುಖ್ಯಸ್ಥರ ನಿವೃತ್ತಿ ವಯಸ್ಸು 62. ಇವರಲ್ಲಿ ಸೀನಿಯರ್ ಸಿಡಿಎಸ್ ಹುದ್ದೆಗೆ ಆಯ್ಕೆಯಾಗಲಿದ್ದು, ಅವರ ನಿವೃತ್ತಿ ವಯಸ್ಸು 3 ವರ್ಷ ವಿಸ್ತರಣೆಯಾಗುತ್ತದೆ.