Advertisement

ಕೋಚ್ ಆಯ್ಕೆ ಕಷ್ಟಕರವಲ್ಲ: ಕಪಿಲ್ ದೇವ್‌

01:22 AM Aug 03, 2019 | Team Udayavani |

ಮುಂಬಯಿ: ಟೀಮ್‌ ಇಂಡಿಯಾ ಪ್ರಧಾನ ಕೋಚ್ ಆಯ್ಕೆ ಕಷ್ಟವೇನಲ್ಲ ಎಂದು ಕ್ರಿಕೆಟ್ ಸಲಹಾ ಸಮಿತಿ ಅಧ್ಯಕ್ಷ ಕಪಿಲ್ ದೇವ್‌ ಹೇಳಿದ್ದಾರೆ.

Advertisement

ಐಸಿಸಿ ವಿಶ್ವಕಪ್‌ ಟೂರ್ನಿ ಅಂತ್ಯದೊಂದಿಗೆ ಹಾಲಿ ಕೋಚ್ ರವಿಶಾಸ್ತ್ರಿ ಅವರ ಒಪ್ಪಂದದ ಅವಧಿ ಕೂಡ ಮುಕ್ತಾಯವಾಗಿದ್ದು, ಈಗಾಗಲೇ ಬಿಸಿಸಿಐ ಕೋಚ್ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದೆ. ಹಾಲಿ ಕೋಚ್ ರವಿಶಾಸ್ತ್ರಿ ಅವರಲ್ಲದೇ ವೀರೇಂದ್ರ ಸೆಹವಾಗ್‌, ಮಾಜಿ ಕೋಚ್ ಗ್ಯಾರಿ ಕರ್ಸ್ಟನ್‌, ಮಾಹೇಲ ಜಯವರ್ಧನೆ, ಟಾಮ್‌ ಮೂಡಿ ಸೇರಿದಂತೆ ಖ್ಯಾತ ಕ್ರಿಕೆಟಿಗರು ಕೋಚ್ ಹುದ್ದೆಯ ರೇಸ್‌ನಲ್ಲಿದ್ದಾರೆ. ಇಂತಹ ಖ್ಯಾತ ಆಟಗಾರರ ನಡುವೆಯೂ ಟೀಂ ಇಂಡಿಯಾ ಪ್ರಧಾನ ಕೋಚ್ ಆಯ್ಕೆ ಕಷ್ಟವೇನಲ್ಲ ಎಂದು ಹೇಳುವ ಮೂಲಕ ಕಪಿಲ್ ದೇವ್‌ ಅಚ್ಚರಿ ಮೂಡಿಸಿದ್ದಾರೆ.

ಪೂರ್ವ ಬಂಗಾಲ ಕ್ಲಬ್‌ನ ಶತಮಾನೋತ್ಸವದ ‘ಭಾರತ್‌ ಗೌರವ್‌’ ಪ್ರಶಸ್ತಿ ಪ್ರದಾನದ ವೇಳೆ ಮಾತನಾಡಿದ ಕಪಿಲ್ ದೇವ್‌ ‘ಕೋಚ್ ಆಯ್ಕೆ ಕಠಿನವಲ್ಲ. ನಿಮ್ಮ ಕೆಲಸವನ್ನು ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನೀವು ಮಾಡುತ್ತೀರಿ. ನಿಮ್ಮ ಜವಾಬ್ದಾರಿಗಳನ್ನು ನೀವು ಪೂರೈಸದಿದ್ದಾಗ ಮಾತ್ರ ಅದು ಕಠಿನವಾಗುತ್ತದೆ’ ಎಂದು ಹೇಳಿದ್ದಾರೆ.

ರವಿಶಾಸ್ತ್ರಿ ಅವರನ್ನು ಮತ್ತೂಂದು ಅವಧಿಗೆ ಆಯ್ಕೆ ಮಾಡುವ ಕುರಿತು ಬಹಿರಂಗವಾಗಿ ಬೆಂಬಲಿಸಿದ ನಾಯಕ ಕೊಹ್ಲಿ ಮಾತಿಗೆ ಪ್ರತಿಕ್ರಿಯೆ ನೀಡಿದ ಕಪಿಲ್ ದೇವ್‌ ‘ಎಲ್ಲರಿಗೂ ಅವರದೇ ಆದ ಅಭಿಪ್ರಾಯ ವ್ಯಕ್ತಪಡಿಸಲು ಸ್ವಾತಂತ್ರ್ಯವಿದೆ. ಅದೇ ರೀತಿ ಕೊಹ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಇದರ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ ಎಂದು ಹೇಳಿದರು.

ಕಪಿಲ್ ದೇವ್‌, ಅಂಶುಮಾನ್‌ ಗಾಯಕ್ವಾಡ್‌ ಮತ್ತು ಶಾಂತಾ ರಂಗಸ್ವಾಮಿ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು ಕೋಚ್ ಹುದ್ದೆಗಾಗಿ ಸಲ್ಲಿಸಿರುವ ಅರ್ಜಿಗಳ ಪರಿಶೀಲನೆಯಲ್ಲಿ ತಲ್ಲೀನವಾಗಿದೆ. ಸುಮಾರು ಎರಡು ಸಾವಿರ ಅರ್ಜಿಗಳು ಬಂದಿದ್ದು ಆಯ್ದ ಕೆಲವರನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next