ನವನೀತ್ ನಿರ್ದೇಶನ ಹಾಗೂ ನಟ ಶರಣ್ ಅಭಿನಯದಲ್ಲಿ ಮೂಡಿಬಂದ “ಛೂ ಮಂತರ್’ ಸಿನಿಮಾ ಕಳೆದ ವಾರ ಬಿಡುಗಡೆಯಾಗಿ, ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ, ಮೆಚ್ಚುಗೆ ಪಡೆದುಕೊಂಡಿರುವ ಬೆನ್ನಲ್ಲೆ, ಛೂ ಮಂತರ್ ಚಿತ್ರತಂಡ ಇತ್ತೀಚೆಗೆ ಸಕ್ಸಸ್ ಮೀಟ್ ಆಯೋಜಿಸಿತ್ತು.
ನಟ ಶರಣ್ ಮಾತನಾಡುತ್ತ, “ಸಾಮಾನ್ಯವಾಗಿ ಸಂಕ್ರಾಂತಿ ಸಮಯಕ್ಕೆ ಕನ್ನಡ ಚಿತ್ರಗಳು ಬಿಡುಗಡೆಯಾಗುವುದಿಲ್ಲ. ಆದರೆ, ಧೈರ್ಯ ಮಾಡಿ ನಮ್ಮ ಚಿತ್ರವನ್ನು ನಿರ್ಮಾಪಕರು ಬಿಡುಗಡೆ ಮಾಡಿದರು. ಬಿಡುಗಡೆ ಹಿಂದೆ ಸಾಕಷ್ಟು ಶ್ರಮವಿತ್ತು. ಜೊತೆಗೆ ಒಂದಿಷ್ಟು ಆತಂಕವೂ ಇತ್ತು. ಉತ್ತಮ ಕಥಾಹಂದರ ಚಿತ್ರಕ್ಕೆ ಕನ್ನಡಿಗರು ಪ್ರೋತ್ಸಾಹ ನೀಡುತ್ತಾರೆ ಎಂಬ ವಿಶ್ವಾಸ ಮತ್ತೂಮ್ಮೆ ಸಾಬೀತಾದಂತಾಗಿದೆ’ ಎಂದರು ನಟ ಶರಣ್.
“ಸಾಕಷ್ಟು ಅಡತಡೆಗಳ ನಡುವೆ ಬಿಡುಗಡೆಯಾದ ನಮ್ಮ ಚಿತ್ರಕ್ಕೆ ಜನರು ನೀಡುತ್ತಿರುವ ಬೆಂಬಲಕ್ಕೆ ಮನತುಂಬಿ ಬಂದಿದೆ’ ಎನ್ನುವುದು ನಿರ್ಮಾಪಕ ತರುಣ್ ಶಿವಪ್ಪ ಅವರ ಮಾತಾಗಿತ್ತು.
“ತರುಣ್ ಸುಧೀರ್ ಈ ಚಿತ್ರಕ್ಕೆ ಓಂಕಾರ ಹಾಕಿದರು. ತರುಣ್ ಶಿವಪ್ಪ ನನ್ನ ಮೇಲೆ ನಂಬಿಕೆಯಿಟ್ಟು ಚಿತ್ರ ಶುರು ಮಾಡಿದರು. ಶರಣ್ ಸೇರಿದಂತೆ ಎಲ್ಲಾ ಕಲಾವಿದರು ಕಥೆ ಮೆಚ್ಚಿಕೊಂಡು ನಟಿಸಿದರು. ಕೊನೆಗೆ ನಮ್ಮ ಚಿತ್ರವನ್ನು ನಾಡಿನ ಜನರು ಒಪ್ಪಿಕೊಂಡರು. ಶುಕ್ರವಾರ ಮಧ್ಯಾಹ್ನದ ನಂತರ ನಮ್ಮ ಚಿತ್ರದ ಬುಕ್ಕಿಂಗ್ ಗಣನೀಯಾಗಿ ಏರಿಕೆಯಾಯಿತು’ ಎಂದರು ನಿರ್ದೇಶಕ ನವನೀತ್. ಜೊತೆಗೆ ಚಿತ್ರದಲ್ಲಿ ನಟಿಸಿದ ಪ್ರಭು ಮುಂಡ್ಕೂರ್, ಅದಿತಿ ಪ್ರಭುದೇವ, ಮೇಘನಾ ಗಾಂವ್ಕರ್, ಗುರುಕಿರಣ್, ಚಿತ್ರದ ಸಂಗೀತ ನಿರ್ದೇಶಕ ಅವಿನಾಶ್ ಬಸತ್ಕೂರ್ ಚಿತ್ರದ ಯಶಸ್ಸಿನ ಬಗ್ಗೆ ಸಂತಸ ವ್ಯಕ್ತಪಡಿಸಿದರು.