Advertisement
ಬಿಸಿಲು ನಾಡು ಎಂದೇ ಖ್ಯಾತಿ ಪಡೆದ ತಾಲೂಕಿನಲ್ಲಿ ಈ ಬಾರಿ ಸಂಪೂರ್ಣ ಮಳೆ ಕೈಕೊಟ್ಟಿದೆ. ದಿನ ಬೆಳಗಾದರೆ ಮನೆಯಿಂದ ಹೊರಕ್ಕೆ ಬರಲು ಜನತೆ ಆತಂಕ ಪಡುವಂತೆ ಆಗಿದೆ. ಬೇಸಿಗೆ ಶುರುವಾಗಿ ಇನ್ನು ಒಂದೆರೆಡು ತಿಂಗಳು ಮಾಸಿಲ್ಲ. ಆದರೆ ಬಿಸಿಲಿನ ಪ್ರಖರತೆ ಶುರುವಾದಾಗಿನಿಂದ ತಾಲೂಕಿನ ಬಹುತೇಕ ಹಳ್ಳ-ಕೊಳ್ಳ, ಕೆರೆ, ಬಾವಿ, ಬೋರವೆಲ್ಗಳು ಬತ್ತಿವೆ. ಭೂಮಿ ಆಳಕ್ಕೆ ಅಗೆದರೂ ನೀರು ಸಿಗುತ್ತಿಲ್ಲ. ರೈತನ ಬದುಕು ಹಸಿರು ಮಾಡಬೇಕಾದ ಕಾಗಿಣಾ ಒಡಲು ಈಗ ಬರಿದಾಗಿ, ನದಿ ಸಂಪೂರ್ಣ ಭಣಗುಟುತ್ತಿದೆ.
Related Articles
Advertisement
ಕೋಟಿಗಟ್ಟಲೇ ಹಣ ಸುರಿದು ಭಾಗೋಡಿ ಗ್ರಾಮದ ಹತ್ತಿರ ನೀರು ತಡೆಯಲು ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಿದರೂ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತಿಲ್ಲ. 25 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಪಟ್ಟಣಕ್ಕೆ ಸಮರ್ಪಕ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ ಎಂದು ಪಟ್ಟಣದ ಜನರು ದೂರುತ್ತಿದ್ದಾರೆ. ನೀರು, ಮೇವಿನ ಸಮಸ್ಯೆ ಆಗದಂತೆ ನೂರಾರು ಕೋಟಿ ರೂ. ಬಿಡುಗಡೆ ಮಾಡಿದರೂ ಸಮಸ್ಯೆ ಪರಿಹರಿಸಲು ಮುಂದಾಗದ ಅಧಿಕಾರಿಗಳ ವಿರುದ್ಧ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನದಿಯಲ್ಲಿ ಮರಳು ಬಹುತೇಕ ಖಾಲಿ ಆಗಿದೆ. ನದಿ ಒಡಲಲ್ಲಿ ನೀರು ನಿಲ್ಲದೇ ಹರಿದು ಹೋಗುತ್ತಿದ್ದು, ಸದ್ಯ ಕಾಗಿಣಾ ಒಡಲು ಗಂಡಾಂತರ ಸ್ಥೀತಿಯಲ್ಲಿದೆ. ನದಿ ಪಾತ್ರದ ತುಂಬಾ ಜೇಕು ಬೆಳೆದು ವಿಷ ಜಂತುಗಳ ವಾಸ ತಾಣವಾಗಿ ಪರಿಣಿಮಿಸಿದೆ.
ಮಳೆ ಇಲ್ಲದ ಕಾರಣ ಮೇವಿನ ಕೊರತೆ ಹೆಚ್ಚಾಗಿದ್ದು, ದನಕರುಗಳನ್ನು ಮಾರಾಟ ಮಾಡುವ ಸ್ಥಿತಿ ಬಂದೊದಗಿದೆ. ಜಾನುವಾರುಗಳಿಗೆ ಮೇವು ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಬೇಕಿದೆ. ಇಲ್ಲದಿದ್ದರೆ ದನಕರುಗಳನ್ನು ಮಾರಿ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಕೂಡಲೇ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಜಾನುವಾರುಗಳಿಗೆ ಮೇವಿನ ಅನುಕೂಲ ಮಾಡಿಕೊಡಬೇಕು ಎಂದು ರೈತರು ಮನವಿ ಮಾಡಿದ್ದಾರೆ.
ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ಬೋರವೆಲ್ ಇಲ್ಲ, ನಳದಲ್ಲಿ ನೀರು ಬಿಟ್ಟರೆ ಮಾತ್ರ ತುಂಬಿಕೊಳ್ಳಬೇಕು. ಇಲ್ಲವಾದರೆ ಕಿ.ಮೀ ಗಟ್ಟಲೇ ನಡೆದು ಬೇರೆಯವರ ಹೊಲದಲ್ಲಿರುವ ಬಾವಿಗಳಲ್ಲಿ ಒಂದು ಕೊಡ ನೀರು ತರಬೇಕು. ವಾರಗಳೇ ಕಳೆದರೂ ಸ್ನಾನ ಮಾಡಲಾರದ ಪರಿಸ್ಥಿತಿ ನಿರ್ಮಾಣವಾಗಿದೆ.• ರಾಮಚಂದ್ರ, ಪಟ್ಟಣದ ನಿವಾಸಿ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ. ಕೆಟ್ಟಿರುವ ಮೋಟಾರ್ ದುರಸ್ತಿ ಮಾಡಲಾಗಿದೆ. ಲಭ್ಯವಿರುವ ನೀರನ್ನು ಕೆಲ ಬಡಾವಣೆಯ ಜಲಸಂಗ್ರಹಾಗಾರಕ್ಕೆ ಪೂರೈಸಲಾಗುತ್ತದೆ. ಬೆಣ್ಣೆತೋರಾದಿಂದ ನೀರು ಬಿಡಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಅಲ್ಲಿಂದ ನೀರು ಬಂದ ಕೂಡಲೇ ಚಿತ್ತಾಪುರ ಪಟ್ಟಣಕ್ಕೆ ನಾಲ್ಕ್ತ್ರೈದು ದಿನದಲ್ಲಿ ಪ್ರತಿದಿನ ಬಿಡುವ ವ್ಯವಸ್ಥೆ ಮಾಡಲಾಗುವುದು.
• ಉಸಾಮೋದ್ದಿನ್ ಬಾಬಾ, ಪುರಸಭೆ ಮುಖ್ಯಾಧಿಕಾರಿ ದಂಡೋತಿ ಗ್ರಾಮದ ಕಾಗಿಣಾ ನದಿ ದಡದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಶ್ರೀ ಸಿಮೆಂಟ್ ಕಂಪನಿ ನೀರು ಬಳಕೆ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡಲಾಗಿದೆ. ಒಂದು ವೇಳೆ ಕಾಮಗಾರಿ ಶುರು ಮಾಡಿದರೆ ಕರವೇ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
• ಸಾಬಣ್ಣ ಭರಾಟೆ,
ಕರವೇ ವಲಯ ಅಧ್ಯಕ್ಷ.