Advertisement

ಹೊಸ ಗ್ರಾಪಂನಲ್ಲೂ ಖಾತ್ರಿ ಕಾಮಗಾರಿ ಜೋರು

12:31 PM Mar 19, 2020 | Naveen |

ಚಿತ್ತಾಪುರ: ತಾಲೂಕಿನಲ್ಲಿ ಹೊಸದಾಗಿ ರಚನೆಯಾದ ಡೋಣಗಾಂವ ಗ್ರಾಮ ಪಂಚಾಯತಿ ಕೇಂದ್ರ ಸ್ಥಾನದಲ್ಲಿ ಇದೇ ಮೊದಲ ಬಾರಿಗೆ ಮಹಾತ್ಮ ಗಾಂಧಿ  ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳು ಭರದಿಂದ ಸಾಗಿವೆ.

Advertisement

ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಮೊದಲು ಎಲ್ಲ ಕೂಲಿಕಾರರ ಸಭೆ ನಡೆಸಿ ಅವರಿಗೆ ನರೇಗಾ ಯೋಜನೆ ಕುರಿತು ಸವಿವರ ಮಾಹಿತಿ ನೀಡಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರು ಕೆಲಸಕ್ಕೆ ಮುಂದಾಗಿದ್ದಾರೆ ಎಂಬುದು ಪಿಡಿಒ ರಾಚಣ್ಣಗೌಡರ ತಿಳಿಸಿದ್ದಾರೆ.

ಉದ್ಯೋಗ ಖಾತ್ರಿ ಯೋಜನೆ ಅನ್ವಯ 100 ದಿನಗಳ ಉದ್ಯೋಗ ಕಲ್ಪಿಸಲು ಅವಕಾಶವಿದೆ. ಬರಪೀಡಿತ ಪ್ರದೇಶದಲ್ಲಿ 150 ದಿನ ಉದ್ಯೋಗ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇರುವುದರಿಂದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡಲು ಮುಂದೆ ಬರುತ್ತಿದ್ದಾರೆ. ಡೋಣಗಾಂವ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನವೆಂಬರ್‌ ಒಂದೇ ತಿಂಗಳಲ್ಲಿ ಎರಡು ಸಾವಿರ ಮಾನವ ದಿನಗಳಾಗಿ ಮಾಡಿದ್ದು, ಇಲ್ಲಿಯ ತನಕ 2800 ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. ಇದಕ್ಕೆ ಕೂಲಿಕಾರರಿಗೆ ಸುಮಾರು 5.20 ಲಕ್ಷ ರೂ. ಪಾವತಿ ಮಾಡಲಾಗಿದೆ.

ಉದ್ಯೋಗ ಖಾತ್ರಿಯಡಿ ಕೆಲಸ ಮಾಡುವ ಕೂಲಿಕಾರರಿಗೆ ಈಗಾಗಲೇ ಮೂರು ವಾರದ ಕೂಲಿಯನ್ನು ಅವರವರ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗಿದೆ. ಗ್ರಾಮದಲ್ಲಿ ಮೂರು ಸಾರ್ವಜನಿಕ ಸಮುದಾಯ ಆಧಾರಿತ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಕರೆ ಹೂಳೆತ್ತುವುದು, ನಾಲಾ ಹೂಳು ತೆಗೆಯುವುದು, ಚೆಕ್‌ ಡ್ಯಾಮ್‌ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ. ಹೊಲದಲ್ಲಿ ರಾಶಿ ಕೆಲಸ ಮುಗಿದ ನಂತರ ರೈತರಿಗೆ ಉಪಯೋಗವಾಗುವ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಬಾಂದಾರ ನಿರ್ಮಾಣ, ಕೃಷಿ ಹೊಂಡ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪಿಡಿಒ ತಿಳಿಸಿದ್ದಾರೆ.

ಬರಗಾಲದ ಬವಣೆಯಿಂದ ಬೇಸತ್ತಿದ್ದ ಇಲ್ಲಿನ ಜನತೆಗೆ ಕೆಲಸದ ಚಿಂತೆಯಾಗಿತ್ತು. ಕೆಲವರು ಉದ್ಯೋಗಕ್ಕಾಗಿ ಮಹಾನಗರಗಳಿಗೆ ಗುಳೆ ಹೋಗಿದ್ದಾರೆ. ಉದ್ಯೋಗಕ್ಕಾಗಿ ದಿನವೂ ಪಂಚಾಯತಿಗೆ ಅಲೆದು ಬೇಸತ್ತಿದ್ದವರಿಗೆ ಕೊನೆಗೂ ಗ್ರಾ.ಪಂ ಪಿಡಿಒ ಗ್ರಾಮದ ನೂರಾರು ಕೂಲಿಕಾರರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕಲ್ಪಿಸಿದ್ದಾರೆ.

Advertisement

230 ಕೂಲಿಕಾರರು ಕಳೆದ ಹಲವು ತಿಂಗಳಿಂದ ಕೆರೆಯ ಹೂಳೆತ್ತುವ ಕಾಮಗಾರಿಯಲ್ಲಿ ತೊಡಗಿದ್ದಾರೆ. ಪ್ರತಿ ಕೂಲಿಕಾರನಿಗೆ ಪ್ರತಿ ದಿನಕ್ಕೆ 249ರೂ. ಜೊತೆಗೆ ಸಲಕರಣಾ ವೆಚ್ಚ 10ರೂ. ಸೇರಿದಂತೆ ಒಟ್ಟು 259ರೂ. ಕೂಲಿ ಪಾವತಿ ಮಾಡಲಾಗುತ್ತಿದೆ. ಇದರಿಂದಾಗಿ ಕೂಲಿಕಾರರರು ಖುಷಿಯಾಗಿದ್ದಾರೆ. ಗ್ರಾಮದಲ್ಲಿ ಇನ್ನೂ ಉದ್ಯೋಗಕ್ಕಾಗಿ 100 ಜನರು ಅರ್ಜಿ ಸಲ್ಲಿಸಿದ್ದಾರೆ.

ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳುವಾಗ ಜಮೀನಿನ ರೈತರೆ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಲು ಮುಂದೆ ಬಂದರೆ ಅವರಿಗೂ ಸಹ ಜಾಬ್‌ ಕಾರ್ಡ್‌ ನೀಡಲಾಗುತ್ತದೆ. ಉದ್ಯೋಗ ಖಾತ್ರಿ ಕಾಮಗಾರಿ ನಡೆಯುವ ಸ್ಥಳದಲ್ಲಿ 75 ಜನ ಕೂಲಿ ಕಾರ್ಮಿಕರಿಗೊಬ್ಬರಂತೆ ಕಾಯಕ ಬಂಧು ಎಂದು ನೇಮಿಸಲಾಗಿದೆ.

ಇವರು ಪ್ರತಿ ದಿನ ಕಾಮಗಾರಿಯ ಅಳತೆ ಮಾಡಿ ಕಾಮಗಾರಿ ನೀಡುತ್ತಾರೆ. ಉದ್ಯೋಗ ಖಾತ್ರಿ ಯೋಜನೆ ಯಶಸ್ವಿಗೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಅನಿತಾ ಪೂಜಾರಿ, ಗ್ರಾ.ಪಂ ಅಧ್ಯಕ್ಷೆ ಈರಮ್ಮ ಪೀರಪ್ಪ ರಾಜೋಳಾ, ಉಪಾಧ್ಯಕ್ಷೆ ಜಗದೇವಿ ಹಲಕರ್ಟಿ ಸಾಥ್‌ ನೀಡಿದ್ದಾರೆ.

ಹೊಸದಾಗಿ ರಚನೆಯಾದ ಡೋಣಗಾಂವ ಗ್ರಾ.ಪಂನಲ್ಲಿ ಮೊದಲ ಬಾರಿಗೆ ಉದ್ಯೋಗ ಖಾತ್ರಿ ಯೋಜನೆ ಪ್ರಾರಂಭವಾಗಿದೆ. ಅಲ್ಲದೇ ಗ್ರಾಮದ 230 ಕೂಲಿಕಾರರು ಹೆಸರು ನೋಂದಾಯಿಸಿಕೊಂಡು ಕೆಲಸದಲ್ಲಿ ನಿರತರಾಗಿರುವುದು ಸಂತೋಷವಾಗಿದೆ.
ರಾಚಣ್ಣಗೌಡ ಪಿಡಿಒ,
ಡೋಣಗಾಂವ

ನರೇಗಾ ಯೋಜನೆ ಮೂಲಕ ಚೆಕ್‌ ಡ್ಯಾಂ, ಸಿಸಿ ರಸ್ತೆ ಚರಂಡಿ ನಿರ್ಮಾಣ ಜೊತೆಗೆ ವೈಯಕ್ತಿಕ ಕಾಮಗಾರಿಗಳನ್ನು ಮಾಡಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಅಭಿವೃದ್ಧಿ ಕೆಲಸ ಮಾಡಲು ಈ ಯೋಜನೆ ಪೂರಕವಾಗಿದೆ.
ನಿಂಗಣ್ಣ ಹೆಗಲೇರಿ,
ಡೋಣಗಾಂವ ಗ್ರಾಪಂ ಸದಸ್ಯ

ಮಹಾತ್ಮ ಗಾಂಧಿ  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ. ಗ್ರಾಮದ ಜನತೆಗೆ ವರ್ಷದಲ್ಲಿ 100 ದಿನ ಉದ್ಯೋಗ ಸೃಷ್ಟಿಸಲಾಗಿದೆ.
ಕಾಶಪ್ಪ ಡೋಣಗಾಂವ,
ಮುಖಂಡ

ಎಂ.ಡಿ. ಮಶಾಖ

Advertisement

Udayavani is now on Telegram. Click here to join our channel and stay updated with the latest news.

Next