Advertisement

ಕತ್ತಲು ಓಡಿಸಿ ಬೆಳಕು ಕರುಣಿಸಲು ಪ್ರಾರ್ಥನೆ

04:28 PM Oct 30, 2019 | Team Udayavani |

„ಎಂ.ಡಿ. ಮಶಾಖ
ಚಿತ್ತಾಪುರ:
ವರ್ಷಕ್ಕೊಮ್ಮೆಯಾದರೂ ದೇವಾನು ದೇವತೆಗಳು ಸಮಾಜದ ಏಳ್ಗೆಗೆ ಹರಸಲಿ ಎಂದು ಲಂಬಾಣಿಗರು ತಮ್ಮದೇ ಶೈಲಿಯಲ್ಲಿ ತಾಲೂಕಿನ ತಾಂಡಾಗಳಲ್ಲಿ ಹಾಡಿ ಸಂಭ್ರಮಿಸಿದ್ದು ನೆರೆದವರ ಕಣ್ಮನ ಸೆಳೆಯಿತು.

Advertisement

ಬದುಕಿನ ಸಂಭ್ರಮ ಹಂಚಿಕೊಳ್ಳಲಿಕ್ಕೆ ಹಬ್ಬಗಳ ಸೃಷ್ಟಿಯಾಗಿರುವುದು. ಬದುಕಿನ ಬವಣೆ ಕಳೆದು ಹೊಸತನದೊಂದಿಗೆ ಬಂಧುತ್ವದ ನೆಲೆಗಳನ್ನು ಗಟ್ಟಿಗೊಳಿಸುತ್ತಾ, ಬದುಕಿನ ಚೈತನ್ಯ ತುಂಬಿಕೊಳ್ಳಲು ಹಬ್ಬಗಳು ಸಹಕಾರಿ ಆಗಿವೆ. ದೀಪಾವಳಿ ಹಬ್ಬ ಬಂತೆಂದರೆ ಬಂಜಾರಾ (ಲಂಬಾಣಿ) ತಾಂಡಾಗಳಲ್ಲಿ ಎಲ್ಲಿಲ್ಲದ ಸಂಭ್ರಮ.

ಅಮವಾಸ್ಯೆ ದಿವಸ ತಾಂಡಾಗಳಲ್ಲಿರುವ ಎತ್ತುಗಳನ್ನು ಶುಭ್ರವಾಗಿಟ್ಟು, ಆಕರ್ಷಕ ಬಣ್ಣಗಳಿಂದ ಅಲಂಕಾರ ಮಾಡಲಾಗುತ್ತದೆ. ಪ್ರತಿಯೊಂದು ಎತ್ತಿನ ಕೊರಳಲ್ಲಿ ಒಂದು ಕೆ.ಜಿ ಒಣ ಕೊಬ್ಬರಿ ಕಟ್ಟಿ, ಬೆದರಿಸಿ ಓಡಿಸಲಾಗುತ್ತದೆ. ಪಳಗಿಸಿ ಹಿಡಿದುಕೊಂಡು ಬಂದ ಯುವಕರಿಗೆ ಬಹುಮಾನ ನೀಡಲಾಗುತ್ತದೆ. ತಾಂಡಾದ ಯುವತಿಯರು ಮತ್ತು ಮಹಿಳೆಯರು ಮಡಿಯಿಂದ ಸಿಹಿ ಅಡುಗೆ ಮಾಡುತ್ತಾರೆ. ನಂತರ ಡಾಲ್ಯ (ಮಾಹಿತಿದಾರ) ಊರಿನ ಗೌಡರ ಸೂಚನೆಯಂತೆ ಹಲಗೆ ಬಡಿಯುವ ಮೂಲಕ ಪ್ರತಿಯೊಂದು ಮನೆಗಳಿಂದ ಅವಿವಾಹಿತ ಯುವತಿಯರು ನಾಯಕರ ಮನೆ ಹತ್ತಿರ ಬರಬೇಕು ಎಂದು ಡಂಗೂರ ಸಾರುತ್ತಾನೆ.

ಯುವತಿಯರು ನಾಯಕರ ಮನೆ ಬಳಿ ಸೇರಿ ಲಂಬಾಣಿ ಭಾಷೆಯಲ್ಲಿ ಹಾಡು ಹೇಳುತ್ತಾ ಕುಣಿದು ಸಂಭ್ರಮಿಸಿ, ಸಂಜೆ ವೇಳೆ ತಾಂಡಾದ ಹಿರಿಯ ಮಹಿಳೆಯರು ಸೇರಿ ಹೂವುಗಳನ್ನು ತರಲು ಕಾಡಿಗೆ ತೆರಳುವ ಯುವತಿಯರಿಗೆ ಬೀಳ್ಕೊಡುತ್ತಾರೆ. ಕೆಲವು ಸಮಯದಲ್ಲೇ ನಾವು ಹಿಂತಿರುಗಿ ಬರುವುದಾಗಿ ತಾಂಡಾದ ಪ್ರಮುಖರಿಗೆ ಯುವತಿಯರು ತಿಳಿಸುತ್ತಾರೆ. ಕಾಡಿನಲ್ಲಿ ಸಿಗುವ ಕಣಗಲು (ವಲ್ಯಾಣ) ಹೂಗಳನ್ನು ಪುಟ್ಟಿಯಲ್ಲಿಟ್ಟುಕೊಂಡು ಸಾಂಪ್ರಾದಾಯಿಕ ನೃತ್ಯ ಮಾಡುತ್ತಾರೆ. ಮನೆಯಿಂದ ತೆಗೆದುಕೊಂಡು ಹೋಗಿರುವ ಹಣ್ಣು, ಸಿಹಿ ತಿನಿಸುಗಳನ್ನು ಒಬ್ಬರಿಗೊಬ್ಬರು ಹಂಚಿ ತಿನ್ನುತ್ತಾರೆ.

ಶಾಲು ಹೊದ್ದು ಹಿಂತಿರುಗಿ ಬರುವ ಯುವತಿಯರಿಗೆ ತಾಂಡಾದ ಗಡಿ ಬಳಿ ಬಂದು ಸ್ವಾಗತಿಸಿಕೊಳ್ಳುತ್ತಾರೆ. ಹೂವಿನ ಪುಟ್ಟಿಗಳನ್ನು ಹೊತ್ತುಕೊಂಡು ಯುವತಿಯರ ಗುಂಪು ತಾಂಡಾದ ಪ್ರತಿಯೊಂದು ಮನೆಗೂ ತೆರಳಿ ಸಗಣಿಯ ಗುರ್ಚಿಯಲ್ಲಿ ಹೂವುಗಳನ್ನು ಇಟ್ಟು ಬರುತ್ತಾರೆ. ಅಮವಾಸ್ಯೆ ದಿನ ಸಂಜೆ 7 ಗಂಟೆ ಸುಮಾರಿಗೆ ಮನೆಗೊಬ್ಬ ಯುವತಿಯರು ದೀಪ ಹಿಡಿದುಕೊಂಡು ಗ್ರಾಮದ ದೇವಾಲಯ ಬಳಿಯಿಟ್ಟು ಪೂಜೆ ಸಲ್ಲಿಸುತ್ತಾರೆ.

Advertisement

ನಂತರ ಅವರಿಗೆ ಇಷ್ಟವಾದಂತ ಮನೆಗಳಿಗೆ ತೆರಳಿ ಮನೆ ಹಾಗೂ ಅವರ ಹೆಸರು ಸೇರಿಸಿಕೊಂಡು ಹಾಡು ಹೇಳುವ ಮೂಲಕ ಶುಭಾಶಯ ಕೋರುತ್ತಾರೆ. ಕಚ್ಚಾ ಬಚ್ಚಾ ಕಾರಿರೋತೇರ್ಯ, ಮೋಟೆ ಕಾನೆವಾಳ್ಳೋರೋ, ಯಡಿನಾ ಬಾಪುನಾ ಹರಬರೋ ರಕಾಡೀಸ್‌ ಎಂದರೆ ಚಿಕ್ಕವರಿಗೂ ಹಿರಿಯರು ಎಲ್ಲರಿಗೂ ನಮನಗಳು. ಈ ತುಂಬಿದ ಮನೆ ಸದಾ ಹಸಿರಾಗಿರುವಂತೆ ಸದಾ ನೋಡಿಕೋ ಎಂದು ಯುವತಿಯರು ದೇವರಲ್ಲಿ ಪ್ರಾರ್ಥಿಸುತ್ತಾರೆ. ಮೂರನೇ ದಿನ ಯುವತಿಯರು ಗೋಧಿ  ಸಸಿ ತಂದು ನಾಯಕರ ಮನೆ ಬಳಿ ಇಟ್ಟು, ಒಂದು ಪುಟ್ಟಿಯಲ್ಲಿ ಅವುಗಳನ್ನಿಟ್ಟಿಕೊಂಡು ಮಂಡಕ್ಕಿ, ಪೀಪಿ, ರಿಬ್ಬನ್‌ಗಳನ್ನು ಕಟ್ಟಿ, ಅಲಂಕಾರ ಮಾಡಿಕೊಂಡು ಸಾಂಪ್ರದಾಯಿಕ ಲಂಬಾಣಿ ಸಮುದಾಯದ ಹೊಸ ಬಟ್ಟೆಗಳನ್ನು ಧರಿಸಿ ತಲೆ ಮೇಲೆ ಹೊತ್ತು ನೃತ್ಯ ಮಾಡುತ್ತಾರೆ. ಪ್ರಸಕ್ತ ಮದುವೆಯಾಗಿ ತೆರಳುವಂತಹ ಯುವತಿಯರಿಗೆ ಬಳೆಗಳನ್ನು ಬಳುವಳಿಯಾಗಿ ನೀಡುವ ಕಾರ್ಯ ನಡೆಯುವುದರೊಂದಿಗೆ ಹಬ್ಬಕ್ಕೆ ತೆರೆ ಬೀಳುತ್ತದೆ ಎಂದು ಬಂಜಾರಾ ಸಮಾಜದ ಮುಖಂಡ ಗೋಪಾಲ ರಾಠೊಡ, ಜಗದೀಶ ಚವ್ಹಾಣ ಹಬ್ಬ ಆಚರಿಸುವ ಬಗೆಯನ್ನು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next