Advertisement

ಚಿತ್ರಕಲಾ ಪರಿಷತ್‌ನಲ್ಲಿ ಜ.7ರಂದು ಚಿತ್ರಸಂತೆ; 1,500 ಕಲಾವಿದರ ಕಲಾಕೃತಿ ಪ್ರದರ್ಶನ

10:09 AM Jan 03, 2024 | Team Udayavani |

■ ಉದಯವಾಣಿ ಸಮಾಚಾರ
ಬೆಂಗಳೂರು: ನೈಸರ್ಗಿಕ, ಮೈಸೂರು ಸಾಂಪ್ರದಾಯಿಕ, ರಾಜಸ್ಥಾನಿ, ಮಧುಬನಿಯ, ತೈಲ ಮತ್ತು ಜಲವರ್ಣಗಳ ಕಲಾಕೃತಿಗಳಿಂದ ನಿಮ್ಮ ಮನೆಯ ಗೋಡೆಗಳು ಸುಂದರಗೊಳಿಸಬೇಕೆ ಅಥವಾ ಸ್ಥಳದಲ್ಲೇ ನಿಮ್ಮ ಚಿತ್ರವನ್ನು (ಲೈವ್‌ ಆರ್ಟ್‌) ಬಿಡಿಸಿಕೊಳ್ಳಬೇಕೆ? ಹಾಗಾದರೆ ಜ.7ರಂದು ಕುಮಾರಕೃಪಾ ರಸ್ತೆಯಲ್ಲಿ ನಡೆಯುವ ಚಿತ್ರಸಂತೆ ಭೇಟಿ ನೀಡಿ.

Advertisement

ಇದೇ ಭಾನುವಾರ ಶಿವಾನಂದ ವೃತ್ತ, ಕುಮಾರಕೃಪಾ ರಸ್ತೆ, ಭಾರತ ಸೇವಾದಳ ಆವರಣದಲ್ಲಿ ಉನ್ನತ ಶಿಕ್ಷಣ ಇಲಾಖೆಯ
ಸಹಯೋಗದಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತು ನಡೆಸುವ ಒಂದು ದಿನದ ಚಿತ್ರಸಂತೆಯಲ್ಲಿ ಸಾವಿರಾರು ವೃತ್ತಿ ಕಲಾವಿದರು ಸೇರಿದಂತೆ ಉತ್ಸಾಹಿ, ಸಾಂಪ್ರದಾಯಿಕ ಕಲಾವಿದರು, ಕಲಾ ವಿದ್ಯಾರ್ಥಿಗಳು ಹಾಗೂ ದಿವ್ಯಾಂಗ ಕಲಾವಿದರು ಭಾಗವಹಿಸಿ, ತಾವು ಬಿಡಿಸಿದ ಚಿತ್ರಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಲಿದ್ದಾರೆ.

ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ ಸೇರಿದಂತೆ ಒಟ್ಟು 22 ರಾಜ್ಯಗಳಿಂದ 2,726 ಅರ್ಜಿಗಳು ಬಂದಿದ್ದು, ಅದರಲ್ಲಿ 1,500 ಕಲಾವಿದರಿಗೆ ಕಲಾಕೃತಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ 300ಕ್ಕೂ ಅಧಿಕ ಮಳಿಗೆಗಳನ್ನು ಕಲ್ಪಿಸಲಾಗುತ್ತಿದೆ. ಕರ್ನಾಟಕ ಚಿತ್ರಕಲಾ ಪರಿಷತ್ತಿನ ಪ್ರದರ್ಶನ ಗ್ಯಾಲರಿಗಳಲ್ಲಿ ಪರಿಷತ್ತಿನ ಸಂಗ್ರಹ ದಲ್ಲಿರುವ ತೊಗಲು ಗೊಂಬೆ ಹಾಗೂ ಮೈಸೂರು ಸಾಂಪ್ರದಾಯಿಕ ಕಲಾಕೃತಿಗಳ ಪ್ರದರ್ಶನವಿರುತ್ತದೆ ಎಂದು ಪರಿಷತ್ತಿನ ಅಧ್ಯಕ್ಷ ಡಾ. ಬಿ.ಎಲ್‌. ಶಂಕರ್‌ ಮಂಗಳವಾರ ಚಿತ್ರಕಲಾ ಪರಿಷತ್ತಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜ.7ಕ್ಕೆ ಚಿತ್ರಸಂತೆ ಉದ್ಘಾಟನೆ: ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಭಾನುವಾರ ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ 21ನೇ ಚಿತ್ರಸಂತೆಗೆ ಚಾಲನೆ ನೀಡಲಿದ್ದು, ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್‌ ಸಾಂಪ್ರದಾಯಿಕ
ಕಲಾಕೃತಿ ಮತ್ತು ತೊಗಲುಗೊಂಬೆ ಪ್ರದರ್ಶನ ಉದ್ಘಾಟಿಸಲಿದ್ದಾರೆ.

ಸಹಕಾರ ಸಚಿವ ಕೆ.ಎನ್‌. ರಾಜಣ್ಣ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್‌, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ, ಸಂಸದ ಪಿ.ಸಿ.ಮೋಹನ್‌, ಶಾಸಕರಾದ ಎಸ್‌.ಟಿ. ಸೋಮ ಶೇಖರ್‌, ರಿಜ್ವಾನ್‌ ಅರ್ಷದ್‌ ಭಾಗವಹಿಸಲಿದ್ದಾರೆ ಎಂದು ಬಿ.ಎಲ್‌. ಶಂಕರ್‌ ತಿಳಿಸಿದರು.

Advertisement

ವಿಶೇಷ ವ್ಯವಸ್ಥೆಗಳು
* ಹಿರಿಯ ಮತ್ತು ದಿವ್ಯಾಂಗ ಕಲಾವಿದರಿಗೆ ಶೌಚಾಲಯ ವ್ಯವಸ್ಥೆಯೊಂದಿಗೆ ಮಳಿಗೆಗಳ ಹಂಚಿಕೆ
*ಕೆನರಾ ಮತ್ತು ಎಸ್‌ಬಿಐ ಬ್ಯಾಂಕಿನ ಸಂಚಾರ ಎಟಿಎಂ ಯಂತ್ರಗಳ ವ್ಯವಸ್ಥೆ. ಭಾಗವಹಿಸುವ ಕಲಾವಿದರಿಗೆ ಉಚಿತ ಊಟ, ತಿಂಡಿ, ನೀರು ಮತ್ತು ಮಳಿಗೆಗೆ ಸ್ಥಳಾವಕಾಶ
*ಚಿತ್ರಸಂತೆ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ
*ಕ್ರೆಸೆಂಟ್‌, ರೇಸ್‌ಕೋರ್ಸ್‌ ರಸ್ತೆ, ಬಿಡಿಎ ಆವರಣ, ರೈಲ್ವೆ ಪ್ಯಾರಲಲ್‌ ರಸ್ತೆಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆ
*20 ಆಯ್ದ ಸ್ಥಳಗಳಲ್ಲಿ ಮೊಬೈಲ್‌ ಶೌಚಾಲಯ ಮತ್ತು ಕಸದ ಬುಟ್ಟಿ ವ್ಯವಸ್ಥೆ
*ಬೆಳಗ್ಗೆ 8ರಿಂದ ರಾತ್ರಿ 9ರವರೆಗೆ ಮೆಜೆಸ್ಟಿಕ್‌ ಮತ್ತು ಮಂತ್ರಿ ಮಾಲ್‌ ಮೆಟ್ರೋ ನಿಲ್ದಾಣದಿಂದ ಶಿವಾನಂದ ಮಾರ್ಗವಾಗಿ ವಿಧಾನಸೌಧವರೆಗೆ ಫೀಡರ್‌ ಬಸ್‌ ಸೇವೆ, ಆಹಾರ ಮಳಿಗೆ ಇರಲಿದೆ.

ನಾಲ್ವರು ಕಲಾವಿದರಿಗೆ ಚಿತ್ರಕಲಾ ಸಮ್ಮಾನ್‌ ಪ್ರಶಸ್ತಿ
ಚಿತ್ರಕಲಾ ಪರಿಷತ್ತಿನಿಂದ ಕೊಡಮಾಡುವ ವಿವಿಧ ಪ್ರಶಸ್ತಿಗಳಲ್ಲಿ ಕರ್ನಾಟಕದ ಕಲಾವಿದರಾದ ಪ್ರೊ. ವಸುಧಾ ತೋಜುರ್‌ ಅವರಿಗೆ ಎಚ್‌.ಕೆ. ಕೇಜ್ರಿವಾಲ್‌ ಪ್ರಶಸ್ತಿ, ಪ್ರೊ. ಬಿ.ವಿ. ಸುರೇಶ್‌ ಅವರಿಗೆ ಎಂ. ಆರ್ಯಮೂರ್ತಿ ಪ್ರಶಸ್ತಿ, ಎಲ್‌.ಎನ್‌. ತಲ್ಲೂರ್‌ ಅವರಿಗೆ ಡಿ. ದೇವರಾಜ ಅರಸು ಪ್ರಶಸ್ತಿ ಮತ್ತು ಬಿ.ಬಿ. ರಾಘವೇಂದ್ರ ಅವರಿಗೆ ವೈ. ಸುಬ್ರಮಣ್ಯರಾಜು ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ನಾಲ್ಕು ಪ್ರಶಸ್ತಿಗಳು ತಲಾ 50 ಸಾವಿರ ನಗದು ಮತ್ತು ಪ್ರಶಸ್ತಿ ಫ‌ಲಕ ಹೊಂದಿರುತ್ತದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಜ.6ಕ್ಕೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ವಿಜ್ಞಾನಿಗಳ ಸಾಧನೆ ಕುರಿತು ವಿಶೇಷ ಪ್ರದರ್ಶನ
“ಬಾಹ್ಯಕಾಶ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆಗೈದಿರುವ ಭಾರತೀಯ ವಿಜ್ಞಾನಿಗಳಿಗೆ’ ಈ ಬಾರಿಯ ಚಿತ್ರಸಂತೆಯನ್ನು
ಸಮರ್ಪಿಸಲಾಗುತ್ತಿದ್ದು, ಇಸ್ರೋದ ಮೊದಲ ಮುಖ್ಯಸ್ಥ ವಿಕ್ರಂ ಸಾರಾಬಾಯಿಯಿಂದ ಇಂದಿನ ಸೋಮನಾಥ್‌ ವರೆಗೆ ನಡೆದಿರುವ ಸಾಧನೆ ಕುರಿತು ವಿಶೇಷ ಪ್ರದರ್ಶನ ಇರಲಿದೆ ಎಂದು ಬಿ.ಎಲ್‌.ಶಂಕರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next