Advertisement
ಇಲ್ಲಿನ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆಯುಷ್ ಇಲಾಖೆ, ಪತಂಜಲಿ ಯೋಗ ಸಂಸ್ಥೆ, ಚಿತ್ರದುರ್ಗ ಯೋಗ ಸಂಸ್ಥೆ, ಪತಂಜಲಿ ಯೋಗ ಶಿಕ್ಷಣ ಸಂಸ್ಥೆ, ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ, ಆರ್ಟ್ ಆಫ್ ಲಿವಿಂಗ್, ನೆಹರು ಯುವ ಕೇಂದ್ರ ಹಾಗೂ ಇತರೆ ಯೋಗಾಸಕ್ತ ಸಂಘಗಳ ವತಿಯಿಂದ ಶುಕ್ರವಾರ ಆಯೋಜಿಸಿದ್ದ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್ ಮಾತನಾಡಿ, ಶ್ರಮ ಸಂಸ್ಕ ೃತಿ ಕಣ್ಮರೆಯಾಗಿದ್ದು, ಬೆವರಿನ ಜೀವನ ಕಡಿಮೆಯಾಗಿರುವುದರಿಂದ ವಯಸ್ಸಿನ ಅಂತರವಿಲ್ಲದೆ ಎಲ್ಲರೂ ಒಂದಲ್ಲ ಒಂದು ರೀತಿಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಕಡ್ಡಾಯವಾಗಿ ಯೋಗ ಮಾಡಬೇಕು. ಪೂರ್ವಿಕರು ಅದರಲ್ಲೂ ವಿಶೇಷವಾಗಿ ಹಳ್ಳಿಗಾಡಿನ ಜನ ಹೊಲ-ಮನೆ ಕೆಲಸ ಮಾಡಿ ಮೈಮುರಿದು ದುಡಿಯುತ್ತಿದ್ದರಿಂದ ಸದಾ ಆರೋಗ್ಯವಾಗಿರುತ್ತಿದ್ದರು. ಇಂದಿನ ಯಾಂತ್ರಿಕ ಜೀವನದಲ್ಲಿ ಆರೋಗ್ಯವಂತರು ಸಿಗುವುದೇ ಕಡಿಮೆಯಾಗಿದೆ. ಚಿಕ್ಕಂದಿನಿಂದಲೇ ಮಕ್ಕಳಿಗೆ ಯೋಗ ಕಲಿಸಿದರೆ ಮಾನಸಿಕ ಹಾಗೂ ದೈಹಿಕ ಒತ್ತಡದಿಂದ ದೂರವಿರಬಹುದು ಎಂದು ಹೇಳಿದರು.
ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಅನಂತ್ ಮಾತನಾಡಿ, ಶರೀರ ಮತ್ತು ಮನಸ್ಸನ್ನು ಏಕಾಗ್ರತೆಯಿಂದಿಡುವ ಶಕ್ತಿ ಯೋಗಕ್ಕಿದೆ. ಯೋಗವನ್ನು ವಿಜ್ಞಾನವನ್ನಾಗಿ ನೋಡಬೇಕು. ಯಾವುದೇ ಒಂದು ದೇಶ ಅಭಿವೃದ್ಧಿಯಾಗಬೇಕಾದರೆ ಆರೋಗ್ಯ, ಶಿಕ್ಷಣ, ಭೂಮಿ, ಬಂಡವಾಳ ಬೇಕು. ಸದೃಢ ಸಮಾಜ ನಿರ್ಮಾಣಕ್ಕೆ ಪ್ರತಿದಿನವೂ ಅಭ್ಯಾಸ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ| ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ. ಚಿಕಿತ್ಸೆಯೇ ಬೇರೆ, ಯೋಗವೇ ಬೇರೆ. ಯೋಗದಿಂದ ಆರೋಗ್ಯ ಸಂಪಾದಿಸಿಕೊಳ್ಳಬಹುದು. ಜೂ. 21 ಪರ್ವ ಕಾಲವಾಗಿರುವುದರಿಂದ ಮಳೆ ಶೀತವಿರುತ್ತದೆ. ಅದಕ್ಕಾಗಿ ಈ ಕಾಲದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತದೆ. ಆರೋಗ್ಯವೆಂದರೆ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕವಾಗಿ ಸ್ವಸ್ಥರಾಗಿರಬೇಕು. 180 ರಾಷ್ಟ್ರಗಳಲ್ಲಿ ಯೋಗ ದಿನ ಆಚರಿಸಲಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ಆರ್.ವಿನೋತ್‌ಪ್ರಿಯಾ ಮಾತನಾಡಿ, ಪ್ರತಿಯೊಬ್ಬರು ಯೋಗ ಮಾಡಬೇಕು. ಸಮಯವಿಲ್ಲವೆಂದು ಹೇಳಿ ಯೋಗಾಭ್ಯಾಸದಿಂದ ಯಾರು ವಂಚಿತರಾಗಬಾರದು. ಯೋಗದಿಂದ ಎಲ್ಲ ರೀತಿಯ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು ಎಂದು ಹೇಳಿದರು.
ಸಮಾರಂಭಕ್ಕೂ ಮುನ್ನ ಮುಂಜಾನೆ 7 ಗಂಟೆಗೆ 800ಕ್ಕೂ ಹೆಚ್ಚು ಯೋಗಾಸಕ್ತರು, ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ, ಯೋಗಾಭ್ಯಾಸ, ಪ್ರಾಣಾಯಾಮ ಹಾಗೂ ಧ್ಯಾನವನ್ನು 2 ಗಂಟೆಗಳ ಕಾಲ ಸುಮಾರು 800 ಜನ ಯೋಗಾಸಕ್ತರು ಯೋಗಾಭ್ಯಾಸ ನಡೆಸಿದರು.
ಜಿಪಂ ಸಿಇಒ ಸಿ. ಸತ್ಯಭಾಮ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್, ಬ್ರಹ್ಮಕುಮಾರಿ ರಶ್ಮಿಅಕ್ಕ, ಯೋಗ ಶಿಕ್ಷಕರಾದ ಎಲ್.ಎಸ್. ಚಿನ್ಮಯಾನಂದ, ಪತಂಜಲಿ ಮಲ್ಲಿಕಾರ್ಜುನಪ್ಪ, ರಾಮಲಿಂಗಪ್ಪ, ಕುಮಾರಸ್ವಾಮಿ, ಕೃಷ್ಣಮೂರ್ತಿ, ಆಯುಷ್ ಇಲಾಖೆಯ ವೈದ್ಯರು ಪಾಲ್ಗೊಂಡಿದ್ದರು.