ಚಿತ್ರದುರ್ಗ: ಪರಿಸರವನ್ನು ಮಕ್ಕಳಂತೆ ಪ್ರೀತಿಯಿಂದ ರಕ್ಷಣೆ ಮಾಡಬೇಕು. ಮಕ್ಕಳಿಗೆ ಪರಿಸರದ ಪರಿಕಲ್ಪನೆಯನ್ನು ನೈಜವಾಗಿ ತೋರಿಸಿ ಜಾಗೃತಿ ಮೂಡಿಸಬೇಕು ಎಂದು ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧಿಧೀಶ ಬಸವರಾಜ ಎಸ್. ಚೇಗರೆಡ್ಡಿ ಹೇಳಿದರು.
ನಗರದ ಚಳ್ಳಕೆರೆ ವೃತ್ತ ಸಮೀಪದ ಸಾಯಿ ಲೇಔಟ್ ಬಳಿಯ ಉದ್ಯಾನವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ವರ್ಷ ಪರಿಸರ ದಿನಾಚರಣೆ ಬರುತ್ತದೆ, ಆ ಸಂದರ್ಭದಲ್ಲಿ ಎಲ್ಲರ ಬಾಯಲ್ಲಿ ಪರಿಸರ ಕಾಳಜಿ ಬಗೆಗಿನ ಮಾತುಗಳು ಕೇಳಿ ಬರುತ್ತದೆ. ಗಿಡ ನೆಡುವ ಸಡಗರ ಪರಿಸರ ಸಂರಕ್ಷಣೆ ಎಲ್ಲಡೆ ಕಾಣುತ್ತದೆ. ಆದರೆ ಮುಂದಿನ ವರ್ಷದ ಪರಿಸರ ದಿನಾಚರಣೆಯಲ್ಲಿ ಕಳೆದ ವರ್ಷ ನೆಟ್ಟ ಗಿಡಗಳು ಏನಾಗಿದೆ ಎನ್ನುವ ಕಲ್ಪನೆಯೇ ಮಾಯವಾಗಿರುತ್ತದೆ. ಆದ್ದರಿಂದ ನೆಟ್ಟ ಗಿಡಗಳನ್ನು ರಕ್ಷಣೆ ಮಾಡಿಕೊಂಡು ಹೋಗಬೇಕು. ಕೇವಲ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಗಿಡ ಬೆಳೆಸಬೇಕು ಮತ್ತು ರಕ್ಷಣೆ ಮಾಡಬೇಕು ಎಂಬ ಭಾವನೆ ಸಾರ್ವಜನಿಕರಲ್ಲಿದೆ. ಈ ಭಾವನೆಯಿಂದ ಹೊರ ಬರಬೇಕು ಎಂದರು.
ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಮಾತನಾಡಿ, ಜನರು ಮನೆಯ ಸುತ್ತಮುತ್ತಲ ಪರಿಸರವನ್ನು ಕಾಪಾಡಿಕೊಳ್ಳಬೇಕು. ಮರ ಗಿಡಗಳನ್ನು ಕಡಿಯಬಾರದು. ಪ್ಲಾಸ್ಟಿಕ್ ಸಂಪೂರ್ಣ ನಿಷೇಧ ಮಾಡಲು ಪಣ ತೊಡಲಾಗಿದೆ. ಪರಿಸರವನ್ನು ಶುದ್ಧವಾಗಿಡುವುದು ಪ್ರತಿಯೊಬ್ಬರ ಜವಾಬ್ದಾರಿ. ಮುಂದಿನ ದಿನಗಳಲ್ಲಿ ಗಿಡಗಳನ್ನು ಹಾಕಿಸಲು ಯೊಜನೆ ರೂಪಿಸಿದ್ದು, ಸ್ಥಳಗಳನ್ನು ಹುಡುಕಿ ಗಿಡ ನೆಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುವುದಾಗಿ ತಿಳಿಸಿದರು.
ಎರಡನೇ ಅಪರ ಜಿಲ್ಲಾ ಸತ್ರ ನ್ಯಾಯಾಧಿಧೀಶ ಆರ್. ಬನ್ನಿಕಟ್ಟಿ ಹನುಮಂತಪ್ಪ, ಪ್ರಧಾನ ಸಿವಿಲ್ ನ್ಯಾಯಾಧೀಶ ಟಿ. ಶಿವಣ್ಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಬಿ. ಮಂಜುನಾಥ, ಎಚ್.ಎಸ್. ರಂಗನಾಥ ಸ್ವಾಮಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಸ್. ರಾಘವೇಂದ್ರ ರಾವ್, ಉಪ ನೋಂದಣಾಧಿಕಾರಿ ವಿಜಯಕುಮಾರ್, ಹಿರಿಯ ಸಿವಿಲ್ ನ್ಯಾಯಾಧೀಶ ದೇವರಾಜ್, ಸಿವಿಲ್ ನ್ಯಾಯಾಧಿಧೀಶ ಶಂಕರಪ್ಪ ಮಾಲಶೆಟ್ಟಿ, ಸಂದೇಶ ವಿ. ಭಂಡಾರಿ, ವಕೀಲರ ಸಂಘದ ಕಾರ್ಯದರ್ಶಿ ಅನಿಲ್ಕುಮಾರ್, ಅರಣ್ಯಾಧಿಕಾರಿ ಸಂದೀಪ್ ನಾಯಕ, ಜಿತೇಂದ್ರ ಇದ್ದರು.