ಚಿತ್ರದುರ್ಗ: ಹಿರಿಯೂರಿನ ವಾಣಿವಿಲಾಸ ಜಲಾಶಯದ ನೀರು ಡೆಡ್ ಸ್ಟೋರೇಜ್‌ಗಿಂತ ಕೆಳಗೆ ಹೋಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಆ ನೀರನ್ನು ಬಳಕೆ ಮಾಡಬಾರದು ಎಂದು ವಿವಿ ಸಾಗರ ಹೋರಾಟ ಸಮಿತಿ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ವಿವಿ ಸಾಗರಕ್ಕೆ ಭೇಟಿ ನೀಡಿದ್ದ ಹೋರಾಟ ಸಮಿತಿಯ ಪದಾಧಿಕಾರಿಗಳು, ಡೆಡ್ ಸ್ಟೋರೇಜ್ ಕೆಳಗಿನ ನೀರನ್ನು ಪಂಪ್ ಮೂಲಕ ಮೇಲೆತ್ತುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಇದು ಹೀಗೆಯೇ ಮುಂದುವರೆದರೆ ಅಪಾಯ ಕಾದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳ್ಳಲು ವಿಳಂಬವಾಗುತ್ತಿದೆ. ಹಾಗಾಗಿ ವಾಣಿವಿಲಾಸ ಸಾಗರದಿಂದ ಕುಡಿಯುವ ನೀರಿಗಾಗಿ ಆಶ್ರಯಿಸಿರುವ ಹಿರಿಯೂರು, ಚಳ್ಳಕೆರೆ, ಡಿಆರ್‌ಡಿಒ, ಚಿತ್ರದುರ್ಗ ನಗರಗಳಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ಅಲ್ಲದೆ ಡೆಡ್ ಸ್ಟೋರೇಜ್ 60 ಅಡಿ ಕೆಳಗಿನ ಮಟ್ಟಕ್ಕೆ ನೀರು ಹೋಗಿದ್ದು ಈ ನೀರನ್ನು ಯಾವುದೇ ಕಾರಣಕ್ಕೂ ಬಳಸಬಾರದೆಂದು ನಿಯಮವಿದೆ. ಆದರೂ ನಿಯಮವನ್ನು ಗಾಳಿಗೆ ತೂರಿ ನೀರನ್ನು ಎತ್ತುತ್ತಿರುವುದು ಅವೈಜ್ಞಾನಿಕವಾಗಿದೆ. ಒಂದು ವೇಳೆ ನೀರು ಬಳಸಬೇಕೆಂದಾದರೆ ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕು. ಜೊತೆಯಲ್ಲಿ ನೀರಾವರಿ ತಜ್ಞರ ಅಭಿಪ್ರಾಯವೂ ಮುಖ್ಯವಾಗಿದೆ ಎಂದು ತಿಳಿಸಿದರು.
ಜೂನ್-ಜುಲೈ ತಿಂಗಳಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ವಿವಿ ಸಾಗರಕ್ಕೆ ನೀರು ಹರಿಯಲಿದೆ ಎನ್ನುವ ವಿಶ್ವಾಸವಿತ್ತು. ಆದರೆ ಇನ್ನೂ ಮೂರು ತಿಂಗಳ ಕಾಲ ನೀರು ಹರಿಸಲು ಅಸಾಧ್ಯ ಎನ್ನುವ ಮಾತುಗಳು ಕೇಳಿ ಬಂದಿದ್ದು ಈ ಬಗ್ಗೆ ಚರ್ಚಿಸಿ ಮುಂದಿನ ಹೋರಾಟದ ರೋಪುರೇಷೆಗಳನ್ನು ಚರ್ಚಿಸಲಾಗುತ್ತದೆ ಎಂದು ತಿಳಿಸಿದರು.
ವಿವಿ ಸಾಗರ ಹೋರಾಟ ಸಮಿತಿ ಪದಾಧಿಕಾರಿಗಳಾದ ಕಸವನಹಳ್ಳಿ ರಮೇಶ್, ಎಚ್.ಆರ್. ತಿಮ್ಮಯ್ಯ, ವಕೀಲರಾದ ಸುರೇಶ್, ಬೀರೇನಹಳ್ಳಿ ಉಗ್ರಮೂರ್ತಿ, ಸಿದ್ದರಾಮಣ್ಣ, ಪತ್ರಕರ್ತ ಬಸವರಾಜ್, ಮಸ್ಕಲ್ ಚಿದಾನಂದ, ರಾಜೇಂದ್ರ, ವಿವಿ ಪುರ ಗ್ರಾಪಂ ಸದಸ್ಯ ಎ.ಉಮೇಶ್ ಇದ್ದರು.