ಚಿತ್ರದುರ್ಗ: ನಿಜಶರಣ ಅಂಬಿಗರ ಚೌಡಯ್ಯ ಅವರ 900ನೇ ಶರಣ ಸಂಸ್ಕೃತಿ ಉತ್ಸವ ಹಾಗೂ ವಚನ ಗ್ರಂಥ ಮಹಾ ರಥೋತ್ಸವ 2020 ಜನವರಿ 14 ಮತ್ತು 15 ರಂದು ಹಾವೇರಿ ಜಿಲ್ಲೆ ನರಸೀಪುರ ಕಂಚಾರಗಟ್ಟಿಯಲ್ಲಿ ನಡೆಯಲಿದೆ ಎಂದು ಶ್ರೀ ಶಾಂತಭೀಷ್ಮ ಸ್ವಾಮೀಜಿ ತಿಳಿಸಿದರು.
ನಗರದ ರಂಗಯ್ಯನ ಬಾಗಿಲು ಬಳಿ ಇರುವ ಜಿಲ್ಲಾ ಗಂಗಾಂಬಿಕ ಬೆಸ್ತರ ಸಂಘದ ಸಭಾಂಗಣದಲ್ಲಿ ಶುಕ್ರವಾರ ಸಮುದಾಯದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಹಾಗೂ ಲಿಂಗೈಕ್ಯ ಶಾಂತಮುನಿ ಸ್ವಾಮೀಜಿ ಸ್ಮರಣೋತ್ಸವ, ತೃತೀಯ ಪೀಠಾರೋಹಣ ಮಹೋತ್ಸವ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ರಾಜ್ಯಾದ್ಯಂತ ಪ್ರವಾಸ ಮಾಡಿ ಸಮುದಾಯ ಸಂಘಟಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದೆ ಎಂದರು.
ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಕೇಂದ್ರ ಹಾಗೂ ರಾಜ್ಯದ ಮಂತ್ರಿಗಳು, ನಾಯಕರು ಆಗಮಿಸಲಿದ್ದಾರೆ. ನಾಡಿನ ವಿವಿಧ ಮಠಾಧೀಶರು ಭಾಗವಹಿಸುವ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಹೆಚ್ಚು ಸಂಖ್ಯೆಯಲ್ಲಿ ಸಮುದಾಯ ಆಗಮಿಸಿ ಗುರುಪೀಠಕ್ಕೆ ತನು, ಮನ, ಧನ ಅರ್ಪಿಸಬೇಕು ಎಂದು ಮನವಿ ಮಾಡಿದರು.
ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಸಮಾಜ ಹಿಂದುಳಿದಿದೆ. ಪರಿಶಿಷ್ಟ ವರ್ಗಕ್ಕೆ ಸೇರಿಸುವಂತೆ ಈಗಾಗಲೇ ಹಲವು ಹೋರಾಟ, ಸಮಾವೇಶ ನಡೆಸಲಾಗಿದೆ. ಆದರೂ ಫಲ ಸಿಕ್ಕಿಲ್ಲ. ಇನ್ನಾದರೂ ಸಂಘಟಿತರಾಗಿ ಸರ್ಕಾರದಿಂದ ಸಿಗುವ ಸೌಲಭ್ಯ ಪಡೆದು ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.
ಇನ್ನೂ ಬೆಂಗಳೂರಿನಲ್ಲಿ ಶನಿವಾರ ನಡೆಯುವ ಮೀನುಗಾರರ ಸಮಾವೇಶದಲ್ಲಿ ಸರ್ಕಾರದ ಮುಂದೆ ಅನೇಕ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು. ಕಾರ್ಯಕ್ರಮಕ್ಕೆ ಕೂಡಾ ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿ ಒಗ್ಗಟ್ಟು ಪ್ರದರ್ಶಿಸಿ ಎಂದು ಹೇಳಿದರು.
ಜಿಲ್ಲಾ ಗಂಗಾಂಬಿಕಾ ಬೆಸ್ತರ ಸಂಘದ ಅಧ್ಯಕ್ಷ ಎಚ್.ಡಿ. ರಂಗಯ್ಯ, ಗೌರವಾಧ್ಯಕ್ಷ ಸಿ.ಕೆ. ತ್ಯಾಗರಾಜ್, ಮುಖಂಡರಾದ ಕೃಷ್ಣಮೂರ್ತಿ, ಗೋವಿಂದರಾಜ್, ರಾಮಸ್ವಾಮಿ, ಹನುಮಂತಪ್ಪ, ಬಸವರಾಜ್ ಮತ್ತಿತರರು ಭಾಗವಹಿಸಿದ್ದರು.