ಚಿತ್ರದುರ್ಗ: ದೇಶಾದ್ಯಂತ ಎರಡನೇ ಹಂತದ ಲಾಕ್ ಡೌನ್ ಆರಂಭವಾಗಿದ್ದು, ಅಂಗಡಿಗಳನ್ನು ತೆರೆಯಲು ಅವಕಾಶವಿದೆ. ಆದರೆ ಸಾಮಾಜಿಕ ಅಂತರ ಪಾಲನೆ ಮಾಡಿಸುವುದು ಅಂಗಡಿ ಮಾಲೀಕರ ಜವಾಬ್ದಾರಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೆಲ ಅಂಗಡಿ, ಸರ್ಕಾರಿ ಕಚೇರಿ ತೆರೆಯಲು ಅವಕಾಶ ನೀಡಲಾಗಿದೆ. ಈ ಸಂದರ್ಭದಲ್ಲಿ ಮನೆಯಿಂದ ಹೊರ ಬರುವ ಸಾರ್ವಜನಿಕರು ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸುವುದು ಕಡ್ಡಾಯ ಎಂದರು. ಅಂಗಡಿಗಳನ್ನು ತೆರೆಯುವ ಮಾಲೀಕರು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಅಥವಾ ಖರ್ಚಿಫ್ ಬಳಕೆ ಮಾಡುವಂತೆ ಸೂಚಿಸಬೇಕು. ಒಂದು ವೇಳೆ ಸಾಮಾಜಿಕ ಅಂತರ ಪಾಲನೆಯಾಗದಿದ್ದರೆ ಅಂತಹ ಅಂಗಡಿಯ ಪರವಾನಗಿಯನ್ನೇ ರದ್ದು ಮಾಡುತ್ತೇವೆ ಎಂದು ಎಚ್ಚರಿಸಿದರು.
ಕೆಲಸದ ಸ್ಥಳಗಳಲ್ಲಿ ಥರ್ಮೋಮೀಟರ್, ಸ್ಯಾನಿಟೈಸರ್ ಇರುವುದು ಕಡ್ಡಾಯ. ಸರ್ಕಾರಿ ಕಚೇರಿಗಳು ಇದನ್ನು ಪಾಲಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಐದಕ್ಕಿಂತ ಹೆಚ್ಚು ಜನ ಸೇರಬಾರದು. ಉಗುಳುವುದನ್ನು ನಿಷೇ ಧಿಸಲಾಗಿದೆ. ಗುಟಕಾ ಮಾರಾಟ ಹಾಗೂ ಬಳಕೆ ಕೂಡಾ ನಿಷೇಧವಿದೆ ಎಂದರು.
ಜನಸಂದಣಿ ತಡೆಯಲು ಬ್ಯಾರಿಕೇಡ್: ನಗರದ ವಿವಿಧೆಡೆ ಸುಮಾರು 60 ಕಡೆಗಳಲ್ಲಿ ಪ್ರಮುಖ ರಸ್ತೆಗಳನ್ನು ಸಂಪರ್ಕಿಸುವ ಕಡೆ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಯಾವ ರಸ್ತೆಗಳಲ್ಲಿ ಅಂಗಡಿ ಇದೆ. ಯಾವ ರಸ್ತೆಯಲ್ಲಿ ಹೆಚ್ಚು ಜನ ಓಡಾಡುತ್ತಾರೆ ಎನ್ನುವ ಬಗ್ಗೆ ಸರ್ವೆ ನಡೆಸಿ ಜನ ನೇರವಾಗಿ ರಸ್ತೆಗೆ ಬಂದು ದಟ್ಟಣೆಯಾಗುವ ಬದಲು ಸುತ್ತಿ ಬಳಸಿ ಓಡಾಡಿದರೆ ಒಂದಿಷ್ಟು ಜಾಮ್ ಆಗುವುದು ತಪ್ಪುತ್ತದೆ ಎಂಬ ಕಾರಣಕ್ಕೆ ಹೀಗೆ ಮಾಡಿದ್ದೇವೆ ಎಂದು ಎಸ್ಪಿ ತಿಳಿಸಿದರು.
ಮೆಡಿಕಲ್ ಶಾಪ್‌ಗ್ಳ ಮುಂದೆ ಸಾಕಷ್ಟು ಸಂಖ್ಯೆಯಲ್ಲಿ ವಾಹನ ನಿಲ್ಲುತ್ತಿದ್ದವು. ಇದನ್ನು ತಪ್ಪಿಸುವುದು ಹಾಗೂ ಕಡಿಮೆ ಅಂತರಕ್ಕೂ ವಾಹನ ಬಳಸುವುದು ಬಿಟ್ಟು ನಡೆದು ಹೋಗುವ ಮೂಲಕ ಹೆಚ್ಚು ವಾಹನ ರಸ್ತೆಗಿಳಿಯದಿರಲಿ ಎಂಬ ಕಾರಣಕ್ಕೆ ಬ್ಯಾರಿಕೇಡ್ ಹಾಕಿದ್ದೇವೆ. ಕಚೇರಿಗೆ ಹೋಗುವವರಿಗೆ ತೊಂದರೆಯಾದರೆ ನಮ್ಮ ಗಮನಕ್ಕೆ ತಂದರೆ ಅಲ್ಲಿ ಓಡಾಡಲು ಅವಕಾಶ ಮಾಡಿಕೊಡುತ್ತೇವೆ ಎಂದರು.
ಸೋಷಿಯಲ್ ಮೀಡಿಯಾಗಳಲ್ಲಿ ಕೋವಿಡ್ ಕುರಿತು ತಪ್ಪು ಮಾಹಿತಿ ಹರಡು ವವರ ವಿರುದ್ಧ ದೂರು ದಾಖಲಿಸುತ್ತಿದ್ದೇವೆ. ಇದಕ್ಕಾಗಿ ಪ್ರತ್ಯೇಕ ಟೀಮ್ ಇದೆ. ಕನಿಷ್ಠ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.
ಜಿ. ರಾಧಿಕಾ,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ