Advertisement

ತೋರಿಕೆ ದೇಶಭಕ್ತಿ ಸರಿಯಲ್ಲ: ಶಿಮುಶ

03:29 PM Jan 27, 2020 | Naveen |

ಚಿತ್ರದುರ್ಗ: ರಾಷ್ಟ್ರಭಕ್ತಿ ತೋರ್ಪಡಿಕೆಯಾಗದೆ ಪ್ರತಿಯೊಬ್ಬ ನಾಗರಿಕನ ಅಂತರ್ಯದಲ್ಲೂ ಇರಬೇಕು ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ಎಸ್‌ಜೆಎಂ ಕ್ಯಾಂಪಸ್‌ನಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಸಂಸ್ಥೆಯ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ನಮ್ಮಲ್ಲಿ ಹೃದಯವಿದೆ. ಅದು ಉಸಿರು ಮತ್ತು ರಕ್ತ ಪರಿಚಲನೆ ಮಾಡುವ ಯಂತ್ರ ಎಂದು ಬಹುತೇಕರು ಭಾವಿಸಿದ್ದಾರೆ. ಹೃದಯದೊಳಗೂ ಒಂದು ಹೃದಯವಿದೆ. ಅದರೊಳಗೊಂದು ಬದುಕು, ಭಾವನೆ ಇದೆ. ನಾವು ಹೃದಯ ಶುದ್ಧಿಗೆ ಹೆಚ್ಚು ಮಹತ್ವ ನೀಡಬೇಕಾಗಿದೆ. ಹೃದಯಾಂತರಂಗದಲ್ಲಿ ರಾಗ-ದ್ವೇಷಗಳಿಗೆ ಅವಕಾಶ ನೀಡದಿರುವುದು ಶುದ್ಧೀಕರಣದ ಒಂದು ಭಾಗವಾಗಿದೆ ಎಂದರು.

ಸಂಕುಚಿತ ಹೃದಯ ವಿಕಾಸ ಆಗಿರುವುದಿಲ್ಲ. ವಿಶಾಲ ಹೃದಯಿಗಳ ಪ್ರಾಣವೇ ವಿಕಾಸ. ಹೃದಯ ವಿಕಾಸದಿಂದ ವ್ಯಕ್ತಿತ್ವ ವಿಕಾಸವಾಗುತ್ತದೆ. ವಿಕಾಸಯುಕ್ತ ಹೃದಯ ವಿಶಾಲ ಹೃದಯವಾಗಿದ್ದು, ಎಲ್ಲರನ್ನೂ ಒಳಗೊಳ್ಳುವ ಪ್ರಕ್ರಿಯೆ ಮಹತ್ವ ಪಡೆದುಕೊಳ್ಳುತ್ತದೆ. ಜಾತಿ-ಮತ ಧರ್ಮದ ಬೇಲಿ ಇಲ್ಲದೆ ಎಲ್ಲರನ್ನೂ ಪ್ರೀತಿಸುವ ಔದಾರ್ಯ ಇರುತ್ತದೆ. ಇಲ್ಲಿ ಕಪಟ, ಕುಹಕ ಮತ್ತು ಕೃತ್ರಿಮತನಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು. ಇತ್ತೀಚೆಗೆ ಮಾನವ ಪ್ರೀತಿ ಕಡಿಮೆ ಆಗುತ್ತಿದ್ದು, ಭೌತಿಕ ಪ್ರೀತಿ ಅಧಿ ಕವಾಗಿದೆ. ಭೌತಿಕತೆಯ ಬಗೆಗಿನ ವ್ಯಾಮೋಹ ಗುಲಾಮನನ್ನಾಗಿಸುತ್ತದೆ. ವಿಶಾಲ ಹೃದಯಿಗಳು ಮಾನವೀಯ ಮಿಡಿತಗಳಿಗೆ ಆದ್ಯತೆ ನೀಡುತ್ತಾರೆ. ಸಜ್ಜನರ ಸಂಗ, ಉತ್ತಮ ಪುಸ್ತಕಗಳ ಅಧ್ಯಯನ, ಪ್ರಕೃತಿಯೊಂದಿಗಿನ ಒಡನಾಟ, ಪಕ್ಷಿ-ಪ್ರಾಣಿ ಪ್ರೀತಿ, ಧರ್ಮದ ಬಗೆಗೆ ಸರಿಯಾದ ತಿಳವಳಿಕೆಯಿಂದ ವಿಶಾಲ ಹೃದಯವನ್ನು ಹೊಂದಬಹುದು ಎಂದರು.

ಕಾರ್ಯಕ್ರಮದಲ್ಲಿ ವಿಷ್ಣುಕಾಂತ ಚಟ್ಟಪಲ್ಲಿ, ಎಸ್‌ಜೆಎಂ ಆಡಳಿತ ಮಂಡಳಿ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾ  ಧಿಕಾರಿ ಎಂ.ಜಿ. ದೊರೆಸ್ವಾಮಿ, ಸದಸ್ಯರಾದ ಗಾಯತ್ರಿ ಶಿವರಾಂ, ರುದ್ರಾಣಿ ಗಂಗಾಧರ, ಎಲ್‌.ಬಿ. ರಾಜಶೇಖರ್‌ ಮೊದಲಾದವರು ಭಾಗವಹಿಸಿದ್ದರು. ಇದೇ ವೇಳೆ ಪಿಎಚ್‌ಡಿ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾಧನೆ ಮಾಡಿದವರು, ನಿವೃತ್ತ ನೌಕರರಿಗೆ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿದವರನ್ನು ಸನ್ಮಾನಿಸಲಾಯಿತು.ರಮ್ಯ, ಮನೋಜ್‌ ಕುಮಾರ್‌, ಮುಸೇಬ್‌ ಸಿದ್ಧಿಕ್‌ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next