Advertisement

1.51 ಲಕ್ಷ ಮಕ್ಕಳಿಗೆ ಪೋಲಿಯೋ ಲಸಿಕೆ ಗುರಿ

03:42 PM Jan 02, 2020 | Team Udayavani |

ಚಿತ್ರದುರ್ಗ: ರಾಷ್ಟ್ರಿಯ ಪಲ್ಸ್‌ ಪೋಲಿಯೊ ಲಸಿಕಾ ಅಭಿಯಾನದಡಿ ಜ. 19 ರಿಂದ 22 ರವರೆಗೆ ಜಿಲ್ಲೆಯ ಐದು ವರ್ಷದೊಳಗಿನ 1,51,613 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಧಿಕಾರಿ ವಿನೋತ್‌ ಪ್ರಿಯಾ ಹೇಳಿದರು.

Advertisement

ಪೋಲಿಯೋ ಲಸಿಕಾ ಕಾರ್ಯಕ್ರಮದ ಪೂರ್ವಸಿದ್ಧತೆ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಗ್ರಾಮೀಣ ಪ್ರದೇಶದ 1,17,699 ಹಾಗೂ ನಗರ ಪ್ರದೇಶದ 33,914 ಮಕ್ಕಳು ಸೇರಿ ಒಟ್ಟು 1,51,613 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಇದೆ. ಇದಕ್ಕಾಗಿ 1145 ಲಸಿಕಾ ಕಾರ್ಯಕರ್ತರು, 185 ಮೇಲ್ವಿಚಾರಕರನ್ನು ನಿಯೋಜಿಸಲಾಗಿದ್ದು,
1012 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು.

ಜ. 20 ಹಾಗೂ 22 ರಂದು ಬಾಕಿ ಉಳಿದ ಎಲ್ಲ ಮಕ್ಕಳನ್ನೂ ಮನೆ ಮನೆ ಭೇಟಿ ಮೂಲಕ ಗುರುತಿಸಿ ಲಸಿಕೆ ಹಾಕಲಾಗುವುದು. ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಲು ಅಂಗನವಾಡಿ ಕಾರ್ಯಕರ್ತೆಯರು, ಸ್ವಯಂ ಸೇವಾ ಸಂಸ್ಥೆಗಳು ಸಹಕಾರ ನೀಡಬೇಕು. ಒಟ್ಟಾರೆ ಜಿಲ್ಲೆಯಲ್ಲಿ ಈ ಬಾರಿಯ ಪಲ್ಸ್‌ ಪೋಲಿಯೋ ಲಸಿಕಾ ಕಾರ್ಯಕ್ರಮದಡಿ ಯಾವುದೇ ಮಗು ಲಸಿಕೆಯಿಂದ ವಂಚಿತವಾಗಬಾರದು ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಪಾಲಾಕ್ಷ ಮಾತನಾಡಿ, ಪಲ್ಸ್‌ ಪೋಲಿಯೋ ಲಸಿಕಾ ಕಾರ್ಯಕ್ರಮ ಕುರಿತು ವ್ಯಾಪಕ ಪ್ರಚಾರಕ್ಕಾಗಿ ಗ್ರಾಮೀಣ ಪ್ರದೇಶಗಳಲ್ಲಿ ಡಂಗುರ ಹೊಡೆಸಬೇಕು. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಕಸದ ವಾಹನಗಳಲ್ಲಿ ಧ್ವನಿವರ್ಧಕ ವ್ಯವಸ್ಥೆ ಮೂಲಕ ಪ್ರಚಾರ ಮಾಡಬೇಕು. ಆರೋಗ್ಯ ಇಲಾಖೆಯಿಂದ ಆಟೋ ಮೂಲಕವೂ ಪ್ರಚಾರ ಕೈಗೊಳ್ಳಲಾಗುವುದು. ಈಗಾಗಲೆ ಪ್ರಚಾರ ಕುರಿತ ಪೋಸ್ಟರ್‌, ಬ್ಯಾನರ್‌ಗಳು ಇಲಾಖೆಯಿಂದ ಸರಬರಾಜಾಗಿದೆ ಎಂದು ಮಾಹಿತಿ ನೀಡಿದರು.

ಆರ್‌ಸಿಎಚ್‌ ಅಧಿಕಾರಿ ಡಾ| ಪಿ.ಸಿ. ಕುಮಾರಸ್ವಾಮಿ, ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ| ರೇಣುಪ್ರಸಾದ್‌, ಡಾ|
ಚಂದ್ರಶೇಖರ ಕಂಬಾಳಿಮಠ, ಡಾ| ಸುಧಾ, ಡಾ| ಆನಂದಪ್ರಕಾಶ್‌, ಮಂಜುನಾಥ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾ ನಾಯಕ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next