Advertisement

2021ರ ಜನಗಣತಿ ನಡೆಸಲು ಜಿಲ್ಲಾಡಳಿತದಿಂದ ಸಿದ್ಧತೆ

01:25 PM Jan 19, 2020 | Naveen |

ಚಿತ್ರದುರ್ಗ: ದೇಶಾದ್ಯಂತ ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯುವ ಜನಗಣತಿ 2021ಕ್ಕೆ ನಡೆಯಲಿದ್ದು, ಜಿಲ್ಲಾಡಳಿತ ಈಗಾಗಲೇ ಪೂಕರ ಸಿದ್ಧತೆ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ತಿಳಿಸಿದ್ದಾರೆ.

Advertisement

ಈ ಕುರಿತು ಪ್ರಕಟಣೆ ನೀಡಿರುವ ಅವರು, ಸರ್ಕಾರ ಜನರಿಗಾಗಿ ರೂಪಿಸುವ ಯಾವುದೇ ಯೋಜನೆಗಳಿಗೆ ಜನಸಂಖ್ಯೆಯ ವಿವರವೇ ಆಧಾರ. ಇದು ನಿಖರವಾಗಿ ದೊರೆಯುವುದು ಜನಗಣತಿಯಲ್ಲಿ. ಹೀಗಾಗಿ ಜನಗಣತಿ ಕಾರ್ಯ ಅತ್ಯಂತ ಮಹತ್ವ ಪಡೆದಿದೆ. ಜಿಲ್ಲಾಧಿಕಾರಿಗಳನ್ನು ಪ್ರಧಾನ ಜಿಲ್ಲಾ ಗಣತಿ ಅಧಿಕಾರಿಗಳನ್ನಾಗಿ ಹಾಗೂ ಅಪರ ಜಿಲ್ಲಾಧಿಕಾರಿಗಳನ್ನು ಜಿಲ್ಲಾ ಜನಗಣತಿ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

ಭಾರತದ ಜನಸಂಖ್ಯೆ ಬೆಳೆವಣಿಗೆಗೆ ಇತಿಹಾಸವಿದ್ದು, ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳಲ್ಲಿ ಚೀನ ಮೊದಲ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ. 1871-72 ರ ಆಸುಪಾಸಿನಲ್ಲಿ ಮೊಟ್ಟ ಮೊದಲ ಬಾರಿಗೆ ದೇಶದಲ್ಲಿ ಜನಗಣತಿ ನಡೆಸಲು ತೀರ್ಮಾನಿಸಿ, ಗಣತಿದಾರರಿಗೆ ತರಬೇತಿ ನೀಡಿ, ಜನಗಣತಿ ನಡೆಸಲಾಗಿತ್ತು.

1881 ರಲ್ಲಿದ್ದ ಗಣತಿ ನಿಯಮ ಬದಲಾಯಿಸಿ, 1891 ರಿಂದ ಜನಗಣತಿ ಸಮೀಕ್ಷೆಗೆ ಸಂಬಂಧಿ ಸಿದಂತೆ ಕೆಲವು ವಿನೂತನ ಅಂಶಗಳನ್ನು ಉದ್ಯೋಗ ಮತ್ತು ಜಾತಿಯಾಧರಿತ ಮಾಹಿತಿ
ಕಲೆಹಾಕಲಾಯಿತು. 1901 ರಿಂದ ಹತ್ತು ವರ್ಷಕ್ಕೊಮ್ಮೆ ಜನಗಣತಿ ಕಾರ್ಯ ನಡೆಸುವ ಪ್ರಕ್ರಿಯೆ ಜಾರಿಗೆ ಬಂದಿದೆ. 2021 ರಲ್ಲಿ ನಡೆಯುವ ಜನಗಣತಿ 13ನೇ ಗಣತಿಯಾಗಿದೆ.

ಕಳೆದ 2011 ರ ಜನಗಣತಿಯಲ್ಲಿ ಉತ್ತರ ಪ್ರದೇಶ 19.9 ಕೋಟಿ ಜನಸಂಖ್ಯೆ ಹೊಂದಿ ದೇಶದಲ್ಲೇ ಹೆಚ್ಚು ಜನಸಂಖ್ಯೆಯುಳ್ಳ ರಾಜ್ಯವಾಗಿತ್ತು. ಭಾರತ ಜಗತ್ತಿನ ಶೇ. 17.5 ರಷ್ಟು ಜನಸಂಖ್ಯೆ ಹೊಂದಿದೆ. ಸಾಕ್ಷರತೆ 74.04, ಲಿಂಗಾನುಪಾತ 943 ರಷ್ಟಿದೆ ಎಂದು ವರದಿಯಾಗಿತ್ತು.

Advertisement

2011 ರ ಜನಗಣತಿಯ ವರದಿಯಂತೆ ಕರ್ನಾಟಕದಲ್ಲಿ 6.1 ಕೋಟಿ ಜನಸಂಖ್ಯೆ ದಾಖಲಾಗಿತ್ತು. ರಾಜ್ಯದ ಸಾಕ್ಷರತೆ 75.04 ಇದ್ದರೆ, ಲಿಂಗಾನುಪಾತ 965 ರಷ್ಟು ದಾಖಲಾಗಿತ್ತು.

2021 ಜನಗಣತಿ ವಿಶೇಷ: ಈ ಬಾರಿ ವಿಶೇಷವಾಗಿ ಮೊಬೈಲ್‌ ಆ್ಯಪ್‌
ಮೂಲಕ ಸಮೀಕ್ಷೆ ನಡೆಸಲಾಗುತ್ತದೆ. ಜಿಲ್ಲೆಯಲ್ಲಿ ಜನಗಣತಿಗಾಗಿ ಈಗಾಗಲೆ ಹಲವು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಿಗೆ ಜನಗಣತಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು ನೇಮಿಸಿ ಅಧಿಸೂಚನೆ ಹೊರಡಿಸಲಾಗಿದೆ.
ಗ್ರಾಮ ಮಟ್ಟದಲ್ಲಿ ತಹಶೀಲ್ದಾರ್‌ ಕಾರ್ಯನಿರ್ವಹಿಸಿದರೆ, ಪಟ್ಟಣ ಪಂಚಾಯತಿ, ಪುರಸಭೆ ಅಥವಾ ನಗರಸಭೆ ಆಯುಕ್ತರು ಕಾರ್ಯನಿರ್ವಹಿಸುವರು. ತಮ್ಮ ಕ್ಷೇತ್ರಗಳ ನಕ್ಷೆ ತಯಾರಿಸಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೇಕು. ಇದರ ಆಧಾರದಲ್ಲಿ ಜನಸಂಖ್ಯೆ ಆಧರಿಸಿ ಬ್ಲಾಕ್‌ ಎಂದು ಗುರುತಿಸಲಾಗುತ್ತದೆ.

ಬ್ಲಾಕ್‌ಗೆ ಒಬ್ಬ ಗಣತಿದಾರರನ್ನು ನೇಮಿಸಲಾಗುತ್ತದೆ. ಈಗಾಗಲೇ ಜಿಲ್ಲೆಯಿಂದ ಇಬ್ಬರು ಮಾಸ್ಟರ್‌ ತರಬೇತುದಾರರನ್ನು ಆಯ್ಕೆ ಮಾಡಿದ್ದು, ರಾಜ್ಯಮಟ್ಟದಲ್ಲಿ ತರಬೇತಿ ಕೊಡಿಸಲಾಗಿದೆ. ಇವರು ಜಿಲ್ಲೆಯ 53 ಕ್ಷೇತ್ರ ತರಬೇತುದಾರರಿಗೆ ತರಬೇತಿ ನೀಡುವರು.

ತರಬೇತಿ ಪಡೆದ ಕ್ಷೇತ್ರ ತರಬೇತುದಾರರು 3054 ಜನ ಗಣತಿದಾರರಿಗೆ ಹಾಗೂ 507 ಮೇಲ್ವಿಚಾರಕರಿಗೆ ತರಬೇತಿ ನೀಡುವರು. ಗಣತಿದಾರರನ್ನಾಗಿ ಶಿಕ್ಷಣ ಇಲಾಖೆಯವರನ್ನು ಆಯ್ಕೆ ಮಾಡುವುದು ರೂಢಿ, ಮಾಹಿತಿ ರವಾನಿಸುವಲ್ಲಿ ಹಾಗೂ ಮಾಹಿತಿ ಸಂಗ್ರಹಿಸುವಲ್ಲಿ ನಿಪುಣರು ಎಂಬ ಉದ್ದೇಶದಿಂದ ಶಿಕ್ಷಕರನ್ನು ಗಣತಿದಾರರನ್ನಾಗಿ ಆಯ್ಕೆ ಮಾಡಲಾಗುತ್ತದೆ.

ಜಿಲ್ಲೆಯಲ್ಲಿ ಒಟ್ಟು 3054 ಗಣತಿದಾರರನ್ನು ನೇಮಿಸಲಾಗುವುದು, ಈ ಪೈಕಿ 278 ಹೆಚ್ಚುವರಿ ಕಾಯ್ದಿರಿಸಿದ ಗಣತಿದಾರರು. ಗ್ರಾಮೀಣ ಹಾಗೂ ನಗರ ಪ್ರದೇಶ ಸೇರಿದಂತೆ ತಾಲೂಕುವಾರು ವಿವರ ಇಂತಿದೆ. ಮೊಳಕಾಲ್ಮೂರು ಗಣತಿದಾರರು-258, ಮೇಲ್ವಿಚಾರಕರು-42. ಚಳ್ಳಕೆರೆ ಗಣತಿದಾರರು-673, ಮೇಲ್ವಿಚಾರಕರು-112. ಚಿತ್ರದುರ್ಗ
ಗಣತಿದಾರರು-790, ಮೇಲ್ವಿಚಾರಕರು-131. ಹೊಳಲ್ಕೆರೆ ಗಣತಿದಾರರು-377, ಮೇಲ್ವಿಚಾರಕರು-62. ಹಿರಿಯೂರು ಗಣತಿದಾರರು-526, ಮೇಲ್ವಿಚಾರಕರು-88. ಹಾಗೂ ಹೊಸದುರ್ಗದಲ್ಲಿ ಗಣತಿದಾರರು-430, ಮೇಲ್ವಿಚಾರಕರನ್ನಾಗಿ 72 ಜನರನ್ನು ನೇಮಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ
ಕಚೇರಿ ತಿಳಿಸಿದೆ.

ಜಿಲ್ಲೆಯಲ್ಲಿ 2021 ರ ಜನಗಣತಿ ಕಾರ್ಯ ಸುಸೂತ್ರವಾಗಿ ಜರುಗಲು ಬೇಕಾದ ಸಿದ್ಧತೆಗಳು ಈಗಾಗಲೆ ಭರದಿಂದ ಸಾಗಿದ್ದು, ನಿಖರ ಅಂಕಿ-ಅಂಶಗಳ ಸಂಗ್ರಹಣೆಯ ಕಾರ್ಯವನ್ನು ಯಶಸ್ವಿಗೊಳಿಸಲು ಅಧಿಕಾರಿ, ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರದ ಅಗತ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next