Advertisement

ರೈತರಿಗೆ ಹೆಚ್ಚು ಪರಿಹಾರ ಕೊಡಿಸಲು ಯತ್ನ

04:46 PM May 03, 2019 | Naveen |

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ತಾಲೂಕಿನಲ್ಲಿ 11 ಮತ್ತು 12ನೇ ಪ್ಯಾಕೇಜ್‌ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ರೈತರು ಕಾಮಗಾರಿಗೆ ಅಡ್ಡಿ ಮಾಡಬಾರದು. ಕಾಮಗಾರಿ ಮುಂದುವರೆಸಲು ಸಹಕಾರ ನೀಡಬೇಕು ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮನವಿ ಮಾಡಿದರು.

Advertisement

ಇಲ್ಲಿನ ರೆಡ್ಡಿ ಜನಸಂಘದ ಕಾರ್ಯಾಲಯದಲ್ಲಿ ಗುರುವಾರ ಕರೆಯಲಾಗಿದ್ದ ರೈತರು ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಚಿತ್ರದುರ್ಗಕ್ಕೆ ಹತ್ತಿರವಾಗಿರುವ ಗ್ರಾಮಗಳ ಜಮೀನುಗಳ ಮಾರುಕಟ್ಟೆ ಬೆಲೆ 30 ಲಕ್ಷ ರೂ.ಗಳಷ್ಟಿದೆ. ಇನ್ನು ಕೆಲವು ಕಡೆ 15 ಲಕ್ಷ ರೂ. ಇದೆ. ಆದರೆ ನೋಂದಣಿ ಮೌಲ್ಯ ಒಂದು ಲಕ್ಷದಿಂದ ಎರಡೂವರೆ ಲಕ್ಷದಷ್ಟಿದೆ. ಇದರಿಂದ ರೈತರಿಗೆ ಅನ್ಯಾಯವಾಗಲಿದೆ. ಹಾಗಾಗಿ ಸರ್ಕಾರದಿಂದ ಹೆಚ್ಚಿನ ಪರಿಹಾರ ಕೊಡಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ತಾಲೂಕಿನಲ್ಲಿ ಆರಂಭಗೊಂಡಿರುವುದರಿಂದ ರೈತರು ಸಂತಸಗೊಂಡಿದ್ದಾರೆ. ಆದರೆ ಎಲ್ಲೆಲ್ಲಿ ಭೂಮಿ ವಶಪಡಿಸಿಕೊಳ್ಳಲಾಗುತ್ತದೆ,

ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ಸಿಗುತ್ತದೋ ಇಲ್ಲವೋ ಎನ್ನುವ ಭಯ ಕೆಲವು ರೈತರಲ್ಲಿದೆ. ಈ ವಿಷಯದಲ್ಲಿ ಯಾರೂ ಗಾಬರಿಯಾಗುವುದು ಬೇಡ. ಚುನಾವಣೆ ನೀತಿಸಂಹಿತೆ ಮುಗಿದ ಮೇಲೆ ಜಿಲ್ಲಾಧಿಕಾರಿ, ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್‌ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸಂಪೂರ್ಣ ಮಾಹಿತಿ ನೀಡುವಂತೆ ಸೂಚಿಸುವುದಾಗಿ ತಿಳಿಸಿದರು.

Advertisement

ರೈತರಿಗೆ ನ್ಯಾಯಬದ್ಧ ಪರಿಹಾರ ಸಿಗಲಿದೆ. ರೈತರಲ್ಲಿರುವ ಎಲ್ಲ ರೀತಿಯ ಆತಂಕ, ಗೊಂದಲ, ಅನುಮಾನಗಳನ್ನು ಅನುಷ್ಠಾನಾಧಿಕಾರಿಗಳು ನಿವಾರಣೆ ಮಾಡಲಿದ್ದಾರೆ. ಕಾಮಗಾರಿಯ ವೇಗ ಹೆಚ್ಚಿಸಬೇಕು. ನಿಗದಿತ ಅವಯೊಳಗೆ ಎಲ್ಲ ಕಾಮಗಾರಿಗಳು ಪೂರ್ಣಗೊಂಡು ಗರ ಬಡಿದಿರುವ ಜಿಲ್ಲೆಗೆ ಭದ್ರಾ ಯೋಜನೆಯಡಿ ನೀರು ಹರಿದರೆ ಸಾಕು. ಆಗ ಜನ-ಜಾನುವಾರುಗಳಿಗೆ ಕುಡಿಯಲು ನೀರು ಸಿಗಲಿದೆ. ಜೊತೆಗೆ ರೈತರ ಜಮೀನುಗಳಿಗೆ ನೀರು ಹರಿಯಲಿದೆ ಎಂದರು.

ಗೋನೂರು-ಕಲ್ಲೇನಹಳ್ಳಿ ನಡುವೆ ಆರಂಭಗೊಂಡಿರುವ ಪ್ಯಾಕೇಜ್‌ 11ರ ಕಾಮಗಾರಿ ಬೆಳಗಟ್ಟ, ಹಾಯ್ಕಲ್, ರಾಮಜೋಗಿಹಳ್ಳಿ, ದ್ಯಾಮವ್ವನಹಳ್ಳಿ, ಕಾಸವರಹಟ್ಟಿ ತನಕ ನಡೆಯಲಿದೆ. ಪ್ಯಾಕೇಜ್‌ 11ರ ಕಾಮಗಾರಿ ಐಮಂಗಲ ಸಬ್‌ ಡಿವಿಷನ್‌ಗೆ ಸೇರಿದ್ದಾಗಿದೆ. ಗೋನೂರು, ದೊಡ್ಡಸಿದ್ದವ್ವನಹಳ್ಳಿ, ಕುಂಚಿಗನಹಾಳ್‌, ದ್ಯಾಮವ್ವನಹಳ್ಳಿಯ ಪ್ಯಾಕೇಜ್‌ 12 ಬುರುಜನರೊಪ್ಪ ಸಬ್‌ ಡಿವಿಷನ್‌ಗೆ ಒಳಪಟ್ಟಿದೆ. ಕಾಮಗಾರಿ ಆದಷ್ಟು ಬೇಗ ಪೂರ್ಣಗೊಂಡು ತಾಲೂಕಿಗೆ ನೀರು ಹರಿದು ಬರಲಿ. ನೀತಿಸಂಹಿತೆ ಮುಗಿದ ಮೇಲೆ ಭೂಸ್ವಾಧೀನಕ್ಕಾಗಿ ನೋಟಿಫಿಕೇಷನ್‌ ಹೊರಡಿಸಲಾಗುತ್ತದೆ ಎಂದು ತಿಳಿಸಿದರು.

ಭೂಮಿ ವಶಪಡಿಸಿಕೊಳ್ಳುವ ಸಂಬಂಧ ನಮಗೆ ಇದುವರೆಗೂ ಯಾವುದೇ ನೋಟಿಸ್‌ ಬಂದಿಲ್ಲ. ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ಪರಿಹಾರ ಸಿಗುತ್ತದೋ ಇಲ್ಲವೋ ಎನ್ನುವ ಭಯ ಕಾಡುತ್ತಿದೆ ಎಂದು ಕೆಲವು ರೈತರು ಶಾಸಕರಲ್ಲಿ ತಮ್ಮ ಅಳಲು ತೋಡಿಕೊಂಡರು. ಯಾವುದೇ ಕಾರಣಕ್ಕೂ ನಿಮಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದಾಗಿ ಶಾಸಕ ತಿಪ್ಪಾರೆಡ್ಡಿ ರೈತರಲ್ಲಿ ಆತ್ಮಸ್ಥೈರ್ಯ ಮೂಡಿಸಿದರು.

ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ವಿಭಾಗ ನಂ-5ರ ಕಾರ್ಯಪಾಲಕ ಅಭಿಯಂತರ ಪರಮೇಶ್ವರ್‌, ಅಧಿಧೀನ ಇಂಜಿನಿಯರ್‌ಗಳು, ಗೋನೂರು, ಕಲ್ಲೇನಹಳ್ಳಿ, ಬೆಳಗಟ್ಟ, ಹಾಯ್ಕಲ್, ರಾಮಜೋಗಿಹಳ್ಳಿ, ದ್ಯಾಮವ್ವನಹಳ್ಳಿ, ಕಾಸವರಹಟ್ಟಿ, ಕುಂಚಿಗನಹಾಳ್‌ ರೈತರು ರೈತರು ಸಭೆಯಲ್ಲಿ ಭಾಗವಹಿಸಿದ್ದರು.

ಭದ್ರಾ ಮೇಲ್ದಂಡೆ ಯೋಜನೆ ತ್ವರಿತಗತಿಯಲ್ಲಿ ಪೂರ್ಣಗೊಂಡು ತಾಲೂಕಿಗೆ ನೀರು ಹರಿದು ಬರಲಿ ಎನ್ನುವ ಕಾರಣಕ್ಕಾಗಿ ರೈತರು ಮತ್ತು ನಾವು ಇಂಜಿನಿಯರ್‌ ಹಾಗೂ ಅಧಿಕಾರಿಗಳಿಗೆ ಸಹಕಾರ ನೀಡಲು ತೀರ್ಮಾನಿಸಿದ್ದೇವೆ. ಆದ್ದರಿಂದ ಶೀಘ್ರವಾಗಿ ಕೆಲಸ ಪೂರ್ಣಗೊಳಿಸಬೇಕು.
ಜಿ.ಎಚ್. ತಿಪ್ಪಾರೆಡ್ಡಿ, ಶಾಸಕರು.

Advertisement

Udayavani is now on Telegram. Click here to join our channel and stay updated with the latest news.

Next