ಚಿತ್ರದುರ್ಗ: ಕೋವಿಡ್-19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಸ್ಥಾಪಿಸಿರುವ ವಾರ್ ರೋಂಗೆ ಬಂದಿರುವ ಕರೆಗಳು ಹಾಗೂ ಪರಿಹಾರ ಕುರಿತು ಜಿಲ್ಲಾ ಧಿಕಾರಿ ಆರ್. ವಿನೋತ್ ಪ್ರಿಯಾ ಅಧಿಕಾರಿಗಳ ಸಭೆ ನಡೆಸಿದರು. ನಗರದ ಜಿಲ್ಲಾ ಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ದೂರವಾಣಿ ಕರೆಗಳ ಸಮಸ್ಯೆ ಕುರಿತ ಕೈಗೊಂಡ ಕ್ರಮಗಳ ಕುರಿತು ಪರಿಶೀಲಿಸಿ ಎಲ್ಲರಿಗೂ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದು ಸೂಚಿಸಿದರು.
ತರಕಾರಿ ತಲುಪದ ಹಳ್ಳಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಂತೆ ನಡೆಸುವುದು ಅಥವಾ ವಾಹನದ ಮೂಲಕ ತರಕಾರಿ ತಲುಪಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಿ, ತರಕಾರಿ ತಲುಪದ ಹಳ್ಳಿಗಳನ್ನು ಪತ್ತೆ ಮಾಡಿ ತರಕಾರಿ ತಲುಪಿಸಲು ತೀರ್ಮಾನಿಸಲಾಯಿತು. ಜಿಲ್ಲೆಯ ಗಡಿಗಳ ಮೂಲಕ ಯಾರಾದರೂ ಜಿಲ್ಲೆಗೆ ಬಂದರೆ ಅವರು ಇಲ್ಲಿಯೇ ಉಳಿಯಬೇಕು. ನಡೆದುಕೊಂಡು ಬರುವವರನ್ನು ಪತ್ತೆ ಮಾಡಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಅಂತವರಿಗೆ ಜವನಗೊಂಡನಹಳ್ಳಿ ಹಾಸ್ಟೆಲ್ ನಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗುವುದು. ತುರ್ತು ವಾಹನ ಸೇವೆ ಅಗತ್ಯವಿದ್ದವರು ಆರ್‌ಟಿಒ ಸಂಪರ್ಕಿಸಬೇಕು. ಗ್ರಾಮೀಣ ಪ್ರದೇಶದವರು ಆಯಾ ಪಿಡಿಒಗಳಿಗೆ ಸಂಪರ್ಕಿಸುವಂತೆ ತಿಳಿಸಿದರು.
ಜಿಪಂ ಉಪಕಾರ್ಯದರ್ಶಿ ಡಾ| ರಂಗಸ್ವಾಮಿ ಮಾತನಾಡಿ, ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ಒದಗಿಸಲು ಜಿಲ್ಲಾಡಳಿತದಿಂದ ವಾರ್ ರೂಂ ಸ್ಥಾಪಿಸಲಾಗಿದೆ. ಸಾರ್ವಜನಿಕರಿಗೆ ಅಗತ್ಯ ಸೇವೆ ಕಲ್ಪಿಸಲು ಆರೋಗ್ಯ ಇಲಾಖೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ, ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯತಿ, ಆಹಾರ ಇಲಾಖೆ, ಪಶು ಸಂಗೋಪನೆ ಸೇರಿದಂತೆ ಮತ್ತಿತರೆ ಇಲಾಖೆಗಳಿಗೆ ಸಂಬಂಧಿಸಿದ ಕರೆಗಳು ಬರುತ್ತಿದ್ದು, ಎಲ್ಲ ಕರೆಗಳನ್ನು ಸ್ವೀಕರಿಸಿ ಸೂಕ್ತ ಪರಿಹಾರ ಕಲ್ಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಹಾಯವಾಣಿ ಸಂಖ್ಯೆಗಳು: ಸಾರ್ವಜನಿಕರು ತಮ್ಮ ದೂರುಗಳನ್ನು ನೀಡಬಹುದಾದ ಸಹಾಯವಾಣಿ ಸಂಖ್ಯೆ 08194-222027, 08194- 222035, 08194-222038,
08194-222044, 08194-222050, 08194-222056 ಕ್ಕೆ ಕರೆ ಮಾಡಬಹುದು. ಮಾ. 28 ರಿಂದ ಏ. 7 ರವರೆಗೆ ಕಂಟ್ರೋಲ್ ರೂಂ ಗೆ ಒಟ್ಟು 95 ಕರೆಗಳು ಸ್ವೀಕೃತವಾಗಿದ್ದು, ಈ ಪೈಕಿ ಆಹಾರ ಇಲಾಖೆ-17, ನಗರಸಭೆ-08, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ-03, ಅರಣ್ಯ-05, ಪೊಲೀಸ್-03, ಕಂದಾಯ-23, ಇತರೆ-05 ಸೇರಿದಂತೆ 95 ಕರೆಗಳು ಬಂದಿವೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಎಡಿಸಿ ಸಿ.ಸಂಗಪ್ಪ, ಜಿಪಂ ಸಿಇಒ ಹೊನ್ನಾಂಬ, ಎಸಿ ಪ್ರಸನ್ನ, ನಗರಸಭೆ ಪೌರಾಯುಕ್ತ ಜೆ.ಟಿ.ಹನುಮಂತರಾಜು, ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ, ಬಿಸಿಎಂ ಅ ಧಿಕಾರಿ ಅವಿನ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಂಜುಳಮ್ಮ ಉಪಸ್ಥಿತರಿದ್ದರು.