ಚಿತ್ರದುರ್ಗ: ಬಯಲುಸೀಮೆಯ ರೈತರು ನಿರೀಕ್ಷಿಸುತ್ತಿರುವ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅದಕ್ಕಿಂತ ಮುಂಚಿತವಾಗಿ ಯೋಜನೆ ಅಡಿಯಲ್ಲಿ 367 ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೀರು ಭರ್ತಿ ಮಾಡಿಸುವ ಬಗ್ಗೆ ಹೆಚ್ಚಿನ ಗಮನ ನೀಡುವುದಾಗಿ ಸಂಸದ ಎ. ನಾರಾಯಣಸ್ವಾಮಿ ಹೇಳಿದರು.
ಭದ್ರಾ ಮೇಲ್ದಂಡೆ ಕಾಮಗಾರಿಯನ್ನು ಗುರುವಾರ ವೀಕ್ಷಣೆ ಮಾಡಿದ ಬಳಿಕ ಅವರು ಮಾಡಿದರು. ಮುಂದಿನ ಎರಡು ವರ್ಷ ಅಥವಾ ಅಷ್ಟರೊಳಗಾಗಿ ಕೆರೆಗಳಿಗೆ ನೀರು ಭರ್ತಿ ಮಾಡಿಸುವ ಮೂಲಕ ರೈತರು ಹಾಗೂ ಬಯಲುಸೀಮೆಯ ಜನರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.
ಅಜ್ಜಂಪುರ ಸಮೀಪದ ರೈಲ್ವೆ ಗೇಟ್ ಸೇತುವೆ ಬಳಿ ಲೈನಿಂಗ್ ಕಾಮಗಾರಿ ಬಾಕಿ ಇದೆ. ಮಳೆಗಾಲ ಆರಂಭವಾಗಿರುವುದರಿಂದ ಲೈನಿಂಗ್ ಮಾಡಲು ವಿಳಂಬವಾಗುತ್ತಿದೆ. ಮಳೆ ಬಿದ್ದರೂ ಕಾಮಗಾರಿ ಮಾಡಲು ಅನುಕೂಲವಾಗುವಂತೆ ತಾತ್ಕಾಲಿಕವಾಗಿ ಶೀಟ್ ಹಾಕಿಕೊಂಡು ಲೈನಿಂಗ್ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ, ಕಾಲುವೆಗಳ ಸ್ಥಿತಿಗತಿಯನ್ನು ಪರಿಶೀಲಿಸಿದ್ದು ಮುಂದಿನ ಮೂರು ತಿಂಗಳೊಳಗೆ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು. ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಾಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ವಿವಿ ಸಾಗರಕ್ಕೆ ಶೀಘ್ರ ನೀರು ಹರಿಸುವ ಕುರಿತು ಪ್ರಯತ್ನದಲ್ಲಿದ್ದಾರೆ. ಅವರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಶಿವಕುಮಾರ್ ಮಾತನಾಡಿ, ಯೋಜನೆ ಆರಂಭವಾದ ಸಂದರ್ಭದಲ್ಲಿ ಹಲವಾರು ಅಡೆತಡೆಗಳಿದ್ದವು. ಈಗ ಅವೆಲ್ಲವೂ ನಿವಾರಣೆಯಾಗಿದೆ. ವಾಣಿವಿಲಾಸ ಸಾಗರಕ್ಕೆ ಶೀಘ್ರದಲ್ಲೇ ನೀರು ಹರಿಸುವ ಪ್ರಯತ್ನದಲ್ಲಿದ್ದೇವೆ. ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳ್ಳುವವರೆಗೆ ಗುರುತ್ವಾಕರ್ಷಣೆಯೊಂದಿಗೆ ವಾಣಿವಿಲಾಸ ಸಾಗರಕ್ಕೆ ನೀರು ಹರಿಯಲಿದೆ, ಅಲ್ಲದೆ ಹೊಸದುರ್ಗ, ಹೊಳಲ್ಕೆರೆ, ಪಾವಗಡ, ಮೊಳಕಾಲ್ಮೂರು ಹಾಗೂ ಚಿತ್ರದುರ್ಗ ತಾಲೂಕಿನ ಹಲವು ಭಾಗಗಳಿಗೆ ಮತ್ತು ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೀರು ಹರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಗುರುವಾರ ಬೆಳಿಗ್ಗೆ ಲಕ್ಕವಳ್ಳಿ ಡ್ಯಾಂ ವೀಕ್ಷಣೆ ಮಾಡಿದ ಸಂಸದರು, ಬಿ.ಆರ್. ಪ್ರಾಜೆಕ್ಟ್‌ನಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ನಂತರ ಶಾಂತಿಪುರದಲ್ಲಿನ ನೀರು ಲಿಫ್ಟ್ ಮಾಡುವ ಪಂಪ್‌ಹೌಸ್, ಅಜ್ಜಂಪುರ ಕಾಲುವೆ ಸೇರಿದಂತೆ ಮತ್ತಿತರ ಕಡೆಗಳಲ್ಲಿ ನಡೆಯುತ್ತಿದ್ದ ಕಾಮಗಾರಿಗಳನ್ನು ವೀಕ್ಷಿಸಿದರು.
ಭದ್ರಾ ಮೇಲ್ದಂಡೆ ಯೋಜನೆಯ ಅಧಿಧೀಕ್ಷಕ ಇಂಜಿನಿಯರ್ ವೇಣುಗೋಪಾಲ, ಅಧೀಕ್ಷಕ ಎಸ್.ಎಸ್.ಪಾಳೇಗಾರ, ಬಿಜೆಪಿ ವಕ್ತಾರ ದಗ್ಗೆ ಶಿವಪ್ರಕಾಶ್, ಮೋಹನ್, ರವಿ, ಸತ್ಯನಾರಾಯಣ ಮತ್ತಿತರರು ಇದ್ದರು.