ಚಿತ್ರದುರ್ಗ: ಪೋಕ್ಸೋ ಪ್ರಕರಣದ ಆರೋಪಿಯಾಗಿರುವ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ಸೋಮವಾರ ಮಧ್ಯಾಹ್ನ ನ್ಯಾಯಾಲಯಕ್ಕೆ ಶರಣಾದರು.
ಪೋಕ್ಸೋ ಪ್ರಕರಣದಡಿ ಕಳೆದ ವರ್ಷ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಆನಂತರ ಹೈಕೋರ್ಟಿನಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದ ಮುರುಘಾ ಶ್ರೀ ದಾವಣಗೆರೆಯಲ್ಲಿದ್ದರು.
ಸದರಿ ಜಾಮೀನು ಪ್ರಶ್ನಿಸಿ ಸಂತ್ರಸ್ಥ ಬಾಲಕಿ ಪರ ವಕೀಲರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಶ್ರೀಗಳ ವಿರುದ್ಧ ಸಲ್ಲಿಕೆ ಆಗಿದ್ದ ಅರ್ಜಿಯನ್ನು ಏಪ್ರಿಲ್ 22 ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ದ್ವಿಸದಸ್ಯ ಪೀಠ ಒಂದು ವಾರದೊಳಗೆ ಚಿತ್ರದುರ್ಗದ ವಿಚಾರಣಾ ನ್ಯಾಯಾಲಯದ ಎದುರು ಹಾಜರಾಗಲು ಸೂಚಿಸಿತ್ತು.
2023 ನವೆಂಬರ್ 8 ರಂದು ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಈ ಹಿನ್ನೆಲೆಯಲ್ಲಿ ಏ.29 ಸೋಮವಾರ ಮಧ್ಯಾಹ್ನ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಎದುರು ಹಾಜರಾದರು.
ನ್ಯಾಯಾಂಗ ಬಂಧನ: ಮುರುಘಾ ಶ್ರೀಗಳಿಗೆ ಮೇ 27 ರವರೆಗೆ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ಆದೇಶಿಸಿದೆ. ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಂಕ್ರಪ್ಪ ನಿಂಬಣ್ಣ ಕಲ್ಕಣಿ ಅವರು ಮೇ.27 ರಿಂದ ಪ್ರಕರಣ ವಿಚಾರಣೆಗೆ ದಿನಾಂಕ ನಿಗದಿ ಮಾಡಿ ಆದೇಶಿಸಿದರು.