ಚಿತ್ರದುರ್ಗ: ಕೋವಿಡ್ ವೈರಾಣು ನಿಯಂತ್ರಣ ಮಾಡುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದನ್ವಯ ಕೋಟೆನಾಡು ಚಿತ್ರದುರ್ಗದಲ್ಲಿ ಸಂಡೇ ಲಾಕ್‌ಡೌನ್ ಪರಿಣಾಮಕಾರಿಯಾಗಿ ಜಾರಿಯಾಗಿತ್ತು.
ವೀಕೆಂಡ್ ಲಾಕ್‌ಡೌನ್ ಕಾರಣಕ್ಕೆ ಜನ ಸ್ವಯಂ ಪ್ರೇರಣೆಯಿಂದ ರಸ್ತೆಗಿಳಿಯದೆ ಮನೆಯಲ್ಲೇ ಇದ್ದು, ಲಾಕ್‌ಡೌನ್‌ಗೆ ಬೆಂಬಲ ನೀಡಿದರು. ಇದರಿಂದ ನಗರ ಸಂಪೂರ್ಣ ಸ್ತಬ್ಧವಾಗಿತ್ತು. ಈ ಹಿಂದಿನ ಲಾಕ್‌ಡೌನ್ ಸಂದರ್ಭದಲ್ಲಿ ಪೊಲೀಸರು ಮಾಡಿಕೊಂಡಿದ್ದ ಎಲ್ಲ ಚೆಕ್‌ಪೋಸ್ಟ್ ಗಳು ಮತ್ತೆ ಕಾರ್ಯಾಚರಣೆ ಮಾಡಿದವು. ನಗರದ ಗಾಂಧಿ ವೃತ್ತದಲ್ಲಿ ಬ್ಯಾರಿಕೇಡ್‌ಗಳನ್ನು ರಸ್ತೆಗೆ ಅಡ್ಡವಿಟ್ಟು ವಾಹನ ಸಂಚಾರಕ್ಕೆ ತಡೆಯೊಡ್ಡಿದ್ದರು. ರಸ್ತೆಗಿಳಿಯುವ ಸಾರ್ವಜನಿಕರು, ವಾಹನ ಸವಾರರಿಗೆ ಪೊಲೀಸರು ಬೈದು, ಬುದ್ಧಿ ಹೇಳಿ ಕಳಿಸಿದ ಘಟನೆಗಳು ನಡೆದವು.
ಬಂದ್‌ನಿಂದಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ಬೆರಳೆಣಿಕೆಯಷ್ಟು ವಾಹನಗಳು ಮಾತ್ರ ಸಂಚಾರ ಮಾಡಿದವು. ತುರ್ತು ಕೆಲಸಗಳಿಗೆ ಬಂದವರನ್ನು ಮಾತ್ರ ಪೊಲೀಸರು ಅಡ್ಡಿಪಡಿಸದೆ ಬಿಡುತ್ತಿದ್ದರು. ಬೈಕುಗಳಲ್ಲಿ ಮೂರು ಜನ ಪ್ರಯಾಣಿಸುತ್ತಿದ್ದವರನ್ನು ಹಿಡಿದು ದಂಡ ಹಾಕುತ್ತಿದ್ದ ದೃಶ್ಯಗಳು ಕಂಡು ಬಂದವು. ಉಳಿದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಅಗತ್ಯ ಪರಿಕರಗಳನ್ನು ಹೊತ್ತ ಲಾರಿಗಳು ಹಾಗೂ ತುರ್ತು ಕೆಲಸದ ನಿಮಿತ್ತ ಓಡಾಡುವ ಇತರೆ ವಾಹನಗಳು ಮಾತ್ರ ಹೆದ್ದಾರಿಯಲ್ಲಿ ಓಡಾಡುತ್ತಿದ್ದವು.
ನಿತ್ಯ ಗ್ರಾಮೀಣ ಭಾಗದಿಂದ ತರಕಾರಿ, ಸೊಪ್ಪು ಮತ್ತಿತರೆ ವಸ್ತುಗಳನ್ನು ತಂದು ಮುರುಘರಾಜೇಂದ್ರ ಮೈದಾನದಲ್ಲಿ ಬೆಳಗ್ಗೆ 4 ಗಂಟೆಯಿಂದಲೇ ಮಾರಾಟ ಮಾಡಲಾಗುತ್ತಿತ್ತು. ಆದರೆ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಭಾನುವಾರ ಮಾರುಕಟ್ಟೆ ಬಂದ್ ಆಗಿತ್ತು.