Advertisement

ಆಸನ ಕೊರತೆ-ಬತ್ತದ ಜ್ಞಾನದ ಒರತೆ!

05:49 PM Nov 04, 2019 | Naveen |

ಚಿತ್ರದುರ್ಗ: ಎಲ್ಲವೂ ಸುಸಜ್ಜಿತವಾಗಿರುವ ಚಿತ್ರದುರ್ಗದ ಕೃಷ್ಣರಾಜೇಂದ್ರ ಗ್ರಂಥಾಲಯದಲ್ಲಿ ನಗರ ಬೆಳೆದಂತೆ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಸಾಕಷ್ಟು ಸ್ಥಳದ ಅಗತ್ಯವೂ ಇದೆ.

Advertisement

11,518 ಜನ ಗ್ರಂಥಾಲಯದ ಸದಸ್ಯರಾಗಿದ್ದು, ಇಲ್ಲಿಂದ ಪುಸ್ತಕ ತೆಗೆದುಕೊಂಡು ಹೋಗುವುದು, ವಾಪಾಸ್‌ ಕೊಡುವುದು ಮಾಡುತ್ತಿದ್ದಾರೆ. ಪ್ರತಿದಿನ ಕನಿಷ್ಠ 500 ಜನ ಓದಗರು ಗ್ರಂಥಾಲಯಕ್ಕೆ ಬಂದು ಹೋಗುತ್ತಿದ್ದಾರೆ. ಮಧ್ಯಾಹ್ನ 12ರಿಂದ 3ರ ವರೆಗೆ ಇಲ್ಲಿ ಕುಳಿತುಕೊಳ್ಳಲು ಜಾಗ ಇಲ್ಲದಂತಾಗುತ್ತದೆ.

ಇರುವ ಎಲ್ಲ ಆಸನಗಳು ಭರ್ತಿಯಾಗುವುದರಿಂದ ಸಾಕಷ್ಟು ಜನ ನಿಂತು, ಹೊರಗೆ ಕುಳಿತು ಓದಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕುಳಿತು ಓದುವ ಉದ್ದೇಶದಿಂದ ಮತ್ತೂಂದು ಕೊಠಡಿಯ ಅಗತ್ಯವಿದೆ ಎಂದು ಗ್ರಂಥಾಲಯದ ಓದುಗರು ಮನವಿ ಮಾಡಿದ್ದಾರೆ. ಇದಕ್ಕಾಗಿ ಈಗಾಗಲೇ ಗ್ರಂಥಾಲಯದ ಅಧಿಕಾರಿಗಳು 48 ಲಕ್ಷ ರೂ. ವೆಚ್ಚದಲ್ಲಿ ಕೊಠಡಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸದ್ಯದಲ್ಲೇ ಮಂಜೂರಾಗುವ ನಿರೀಕ್ಷೆಯಲ್ಲಿದ್ದಾರೆ.

ನಾಲ್ಕು ದಿಕ್ಕಿಗೂ ಗ್ರಂಥಾಲಯ: ಹಿಂದೆ ಜಿಲ್ಲಾ ಕೇಂದ್ರದಲ್ಲಿ ಕೃಷ್ಣರಾಜೇಂದ್ರ ಗ್ರಂಥಾಲಯ ಮಾತ್ರವಿತ್ತು. ಈಗ ನಗರ ಬೆಳೆಯುತ್ತಿದೆ. ಎಲ್ಲರೂ ಇಲ್ಲಿಗೆ ಬಂದು ಹೋಗುವುದು ಕಷ್ಟ ಎಂಬ ಕಾರಣಕ್ಕೆ ನಗರದ ನಾಲ್ಕು ದಿಕ್ಕಿಗೂ ಗ್ರಂಥಾಲಯಗಳನ್ನು ತೆರೆಯುವ ಸಿದ್ಧತೆಗಳು ನಡೆದಿವೆ.

ಈಗಾಗಲೇ ಮುರುಘಾ ಮಠದ ಆವರಣದ ಪ್ರವೇಶದ್ವಾರದಲ್ಲೇ ಸುಂದರವಾದ ಕಟ್ಟಡವಿದ್ದು, ಅದರಲ್ಲಿ ಗ್ರಂಥಾಲಯದ ಶಾಖೆ ತೆರೆದು ಅಲ್ಲಿಗೆ ಒಬ್ಬ ಸಿಬ್ಬಂದಿಯನ್ನೂ ನೇಮಕ ಮಾಡಲಾಗಿದೆ. ಅಲ್ಲಿ 3 ಸಾವಿರ ಪುಸ್ತಕಗಳಿವೆ.

Advertisement

ಜೈಲಿನಲ್ಲಿದೆ ಸುಂದರ ಗ್ರಂಥಾಲಯ: ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲೂ ಗ್ರಂಥಾಲಯ ತೆರೆದಿದ್ದು, ಅತ್ಯಂತ ವ್ಯವಸ್ಥಿತವಾಗಿ ನಿರ್ವಹಣೆಯಾಗುತ್ತಿದೆ. ಅಧ್ಯಾತ್ಮ, ಕಥೆ, ಕವನ, ಕಾದಂಬರಿ, ನಿಯತಕಾಲಿಕೆಗಳು, ಸಾಪ್ತಾಹಿಕಗಳು ಜೈಲಿನ ಗ್ರಂಥಾಲಯದಲ್ಲಿ ಲಭ್ಯವಿವೆ.

ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರತ್ಯೇಕ ಗ್ರಂಥಾಲಯ: ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪುಸ್ತಕಗಳು ಗ್ರಂಥಾಲಯವಿದ್ದರೂ ಜಿಲ್ಲಾ ಪಂಚಾಯಿತಿ ಸಮೀಪದಲ್ಲಿ ಸ್ಪರ್ಧಾತ್ಮಕ ಅಧ್ಯಯನ ಕೈಗೊಳ್ಳುವವರಿಗಾಗಿ ಮತ್ತೂಂದು ಪ್ರತ್ಯೇಕ ಲೈಬ್ರರಿ ಕಾರ್ಯನಿರ್ವಹಿಸುತ್ತಿದೆ. ಜತೆಗೆ ಕಾವಾಡಿಗರಹಟ್ಟಿ, ಸ್ಟೇಡಿಯಂ ರಸ್ತೆಯ ವೀರಸೌಧದಲ್ಲೂ ಗ್ರಂಥಾಲಯದ ಶಾಖೆಗಳನ್ನು ತೆರೆಯಲಾಗಿದೆ.

ದವಳಗಿರಿ ಬಡಾವಣೆಯಲ್ಲಿ ಶಾಖಾ ಗ್ರಂಥಾಲಯದ ಕಟ್ಟಡ ನಿರ್ಮಾಣಕ್ಕಾಗಿ 48 ಲಕ್ಷ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಎಸ್‌ಜೆಎಂಐಟಿ ಕಾಲೇಜು ಹಿಂಭಾಗದಲ್ಲಿ ಸ್ವಂತ ಕಟ್ಟಡಕ್ಕೆ ನಿವೇಶನ ಖರೀದಿ ಸಿದ್ದು, ಕಟ್ಟಡ ಕಾಮಗಾರಿ ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಐಯುಡಿಪಿ ಬಡಾವಣೆಯಲ್ಲೂ ಗ್ರಂಥಾಲಯ ನಿರ್ಮಿಸುವ ಉದ್ದೇಶವಿದ್ದು, ಅಲ್ಲಿಗೂ 30 ಲಕ್ಷ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಸಿಬ್ಬಂದಿ ಕೊರತೆಯೇ ಸಮಸ್ಯೆ: ಕೃಷ್ಣರಾಜೇಂದ್ರ ಗ್ರಂಥಾಲಯ ವ್ಯವಸ್ಥಿತವಾಗಿದೆ. ಆದರೆ, ಸಿಬ್ಬಂದಿ ಕೊರತೆಯೇ ಇಲ್ಲಿನ ಮೊದಲ ಸಮಸ್ಯೆಯಾಗಿದೆ.
ವೋಚರ್‌ ಆಧಾರದಲ್ಲಿ 3 ಜನ ಕೆಲಸ ಮಾಡುತ್ತಿದ್ದಾರೆ. 15 ಜನ ನೌಕರರು ಕೆಲಸ ಮಾಡಬೇಕಾದ ಜಾಗದಲ್ಲಿ ಕೇವಲ 8 ಜನ ಮಾತ್ರ ಇದ್ದು, ಇನ್ನೂ 7 ಹುದ್ದೆಗಳು ಖಾಲಿಯಿವೆ. ಇದರಿಂದ ಇರುವ ಸಿಬ್ಬಂದಿ ಮೇಲೆ ಹೆಚ್ಚು ಒತ್ತಡ ಬೀಳುತ್ತಿದೆ.

ಮಕ್ಕಳಿಗೆ ಭರ್ಜರಿ ಆಫರ್‌: ಜಿಲ್ಲಾ ಕೇಂದ್ರ ಗ್ರಂಥಾಲಯದ ಮಕ್ಕಳ ವಿಭಾಗದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಹಂತದ ಮಕ್ಕಳು ಬಂದು ಓದುತ್ತಿದ್ದಾರೆ. ಈಗ ಮಕ್ಕಳಿಗೂ ಸದಸ್ಯತ್ವ ನೀಡುತ್ತಿದ್ದು, ಇಲ್ಲಿಂದ ಪುಸ್ತಕಗಳನ್ನು ಮನೆಗೆ ಕೊಂಡೊಯ್ದು ಓದಿ ವಾಪಾಸ್‌ ಮಾಡಬಹುದು.

ಇದಕ್ಕಾಗಿ ಒಬ್ಬರಿಗೆ 50 ರೂ. ಶುಲ್ಕವಿದೆ. ಆದರೆ, ಈವರೆಗೆ ಕೇವಲ 51 ಮಕ್ಕಳು ಮಾತ್ರ ನೋಂದಣಿ ಮಾಡಿಸಿಕೊಂಡಿದ್ದಾರೆ. ರಾಜಾಸ್ಥಾನದ ಜೈಪುರದಲ್ಲಿ ನೆಲೆಸಿರುವ ಚಿತ್ರದುರ್ಗ ಮೂಲದ ಡಾ| ವಿಜಯಕುಮಾರ್‌ ಅವರು ಮಕ್ಕಳಿಗೆ ಒಂದು ಆಫರ್‌ ನೀಡಿದ್ದಾರೆ. ಸೆಂಟ್ರಲ್‌ ಯೂನಿವರ್ಸಿಟಿ ಆಫ್‌ ರಾಜಾಸ್ಥಾನ ಗ್ರಂಥಾಲಯದ ಪಾಲಕರಾಗಿರುವ ವಿಜಯಕುಮಾರ್‌, ಚಿತ್ರದುರ್ಗ ಗ್ರಂಥಾಲಯದಲ್ಲಿ ಎಷ್ಟು ಜನ ಮಕ್ಕಳು ಸದಸ್ಯತ್ವ ಪಡೆದರೂ ಅದರ ಶುಲ್ಕವನ್ನು ತಾವು ಭರಿಸುವುದಾಗಿ ಜಿಲ್ಲಾ ಗ್ರಂಥಾಲಯ ಅಧಿಕಾರಿ ತಿಪ್ಪೇಸ್ವಾಮಿ ಅವರಿಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚು-ಹೆಚ್ಚು ಮಕ್ಕಳು ಇಲ್ಲಿ ಸದಸ್ಯರಾಗಲು ಇದೊಂದು ಸುವರ್ಣಾವಕಾಶವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next