ಚಿತ್ರದುರ್ಗ: ತಂತ್ರವಿದ್ಯೆ, ತಂತ್ರಶಾಸ್ತ್ರ ಎಂದರೆ ನಮಗೆ ಮಾಯಾ ಮಂತ್ರ, ಮಾಟ ಮಂತ್ರ ಎಂಬ ಕಲ್ಪನೆ ಇದೆ. ಈ ತಂತ್ರ ಸಾಹಿತ್ಯದ ಬಗ್ಗೆ ಅಲಕ್ಷ್ಯವಿದೆ. ಆದರೆ ಅಧ್ಯಯನ ಮಾಡಿದಾಗ ಅನೇಕ ಅರ್ಥಗಳು ತಿಳಿಯುತ್ತವೆ ಎಂದು ಭದ್ರಾವತಿಯ ಕನ್ನಡ ಪ್ರಾಧ್ಯಾಪಕ ಡಾ| ಕೆ.ಎಸ್.
ಕುಮಾರಸ್ವಾಮಿ ಹೇಳಿದರು.
ನಗರದ ಐಎಂಎ ಸಭಾಂಗಣದಲ್ಲಿ ಭಾನುವಾರ ಚಿತ್ರದುರ್ಗ ಇತಿಹಾಸ ಕೂಟ ಹಾಗೂ ರೇಣುಕಾ ಪ್ರಕಾಶನದ ಸಹಯೋಗದಲ್ಲಿ ಆಯೋಜಿಸಿದ್ದ 41ನೇ ಉಪನ್ಯಾಸ ಕಾರ್ಯಕ್ರಮದಲ್ಲಿ “ತಂತ್ರ ಸಾಹಿತ್ಯ; ಒಂದು ಸ್ಥೂಲ ಅವಲೋಕನ’ ವಿಷಯದ ಕುರಿತು ಅವರು ಮಾತನಾಡಿದರು.
ಇತಿಹಾಸ ಸಂಶೋಧನೆ ಎಂದರೆ ಸತ್ಯ ಶೋಧನೆ ಮಾಡುವುದು. ಹಾಗಾಗಿ ಸಂಶೋಧನೆ ನಿಖರವಾಗಿರಬೇಕು. ತಂತ್ರ ಸಾಹಿತ್ಯ ಸಂಸ್ಕೃತ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗೆ ಅನುವಾದವಾಗಿವೆ. ತಂತ್ರಶಾಸ್ತ್ರಕ್ಕೆ ನಾನಾ ವಿಶ್ಲೇಷಣೆ ಇದೆ. ತಂತ್ರ ಅಂದರೆ ಮಗ್ಗದಿಂದ ಆಗ ತಾನೇ ತೆಗೆದ ತಂತ್ರಕ ಎಂದು ಪಾಣಿನಿ ಹೇಳುತ್ತಾರೆ. ಮಗ್ಗ ಎಂದ ತಕ್ಷಣ ಯಂತ್ರ ಎಂಬ ಕಲ್ಪನೆ ಬರುತ್ತದೆ.
ಕೆಲ ವಿದ್ಯಾಂಸರು ತಂತ್ರಸಾಹಿತ್ಯ ಅಥರ್ಣವೇದದಿಂದ ಪ್ರಾರಂಭವಾಗಿದೆ ಎಂದು ಹೇಳಿದರೆ ಬನ್ನಂಜೆ ಗೋವಿಂದಾಚಾರ್ಯರು ಭಾರತದ ಅತ್ಯಂತ ಪುರಾತನ ಶಾಸ್ತ್ರಗಳಲ್ಲಿ ತಂತ್ರಶಾಸ್ತ್ರವೂ ಒಂದು ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದರು.
ತಂತ್ರ ಸಾಹಿತ್ಯದಲ್ಲಿ ಸಾಕಷ್ಟು ಆಯಾಮಗಳನ್ನು ತಿಳಿದುಕೊಳ್ಳಲು ಸಾಧ್ಯವಿದೆ. ತಂತ್ರ ಅಂದರೆ ಜ್ಞಾನ. ಮಾಟ ಸಂಸ್ಕೃತ ಭಾಷೆಯಿಂದ ಬಂದ ಪದ. ಮಾಟ ಅಂದರೆ ಸೌಂದರ್ಯ, ಸುಂದರವಾದ ಕೆಲಸ ಅಂತ ಕೂಡ ಪ್ರಾಚೀನ ಕಾಲದಲ್ಲಿ ಬಳಸುತ್ತಿದ್ದರು. ತಂತ್ರಶಾಸ್ತ್ರ ಇತಿಹಾಸಕಾರರು ಹಾಗೂ ಜನಸಮಾನ್ಯರಿಗೆ ಅಪರಿಚಿತವಾಗಿದ್ದಾರೆ. ಅದರ ಬಗ್ಗೆ ತಪ್ಪುಗ್ರಹಿಕೆಗಳಿವೆ. ಇದು ಸಮಾಜದ ದುರಂತ. ಇಂದು ತಂತ್ರಶಾಸ್ತ್ರದ ಅಧ್ಯಯನ ಮಾಡುವ ಅವಶ್ಯಕತೆ ಇದೆ ಎಂದರು.
ಅಮರಕೋಶದಲ್ಲಿ ಸಾಂಖ್ಯಾ, ಅರ್ಥಶಾಸ್ತ್ರ, ಯೋಗ ಸೇರಿ ತಂತ್ರಶಾಸ್ತ್ರವಾಗಿದೆ ಎಂದು ಹೇಳಿದೆ. ಪೂರ್ವ ಮೀಮಾಂಸೆಯನ್ನು ಪ್ರಥಮ ತಂತ್ರಶಾಸ್ತ್ರ ಎಂದು ಕರೆಯಲಾಗುತ್ತದೆ. ತಂತ್ರಶಾಸ್ತ್ರ ವಿಜ್ಞಾನಕ್ಕೆ ತುಂಬ ಹತ್ತಿರವಾದದ್ದು. ನಮ್ಮ ಪಾರಂಪರಿಕ ವಿಜ್ಞಾನ ಎಂದು ಕೆಲವರು ಹೇಳುತ್ತಾರೆ. ತಂತ್ರಸಾಹಿತ್ಯ ಇಲ್ಲದಿದ್ದರೆ ಭಾರತ ಸಾಹಿತ್ಯ ಬರಡಾಗುತ್ತಿತ್ತು ಎಂದರು.
ಹಿರಿಯ ಸಂಶೋಧಕ ಪ್ರೊ| ಲಕ್ಷ್ಮಣ ತೆಲಗಾವಿ, ರೇಣುಕಾ ಪ್ರಕಾಶನದ ಎನ್.ಡಿ. ಶಿವಣ್ಣ, ಇತಿಹಾಸ ಕೂಟದ ಸಂಚಾಲಕ ಡಾ| ಎನ್.ಎಸ್. ಮಹಂತೇಶ್, ಹಿರಿಯ ಪತ್ರಕರ್ತ ಉಜ್ಜಿನಪ್ಪ, ಗೋಪಾಲಸ್ವಾಮಿ ನಾಯಕ್, ಸಾಹಿತಿ ಎಸ್.ಆರ್. ಗುರುನಾಥ್ ಮತ್ತಿತರರು ಉಪಸ್ಥಿತರಿದ್ದರು.