ಚಿತ್ರದುರ್ಗ: ನಗರದಲ್ಲಿ ನಿರ್ಮಾಣವಾಗುತ್ತಿರುವ ಕನಕ ಭವನಕ್ಕೆ ಸರ್ಕಾರದಿಂದ 5 ಕೋಟಿ ರೂ. ಅನುದಾನ ನೀಡುವಂತೆ ಮನವಿ ಮಾಡಲು ಕನಕ ಗುರುಪೀಠದ ಸ್ವಾಮೀಜಿ ಹಾಗೂ ಸಮುದಾಯದ ಮುಖಂಡರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡುವುದಾಗಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ತರಾಸು ರಂಗಮಂದಿರದಲ್ಲಿ ಆಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನಕ ಗುರುಪೀಠದ ಸ್ವಾಮೀಜಿಯವರಿಗೆ ಭರವಸೆ ನೀಡಿದಂತೆ ಈಗಾಗಲೇ ಸಮುದಾಯ ಭವನಕ್ಕೆ ಹತ್ತು ಲಕ್ಷ ರೂ. ಅನುದಾನ ನೀಡುವುದಾಗಿ ಘೋಷಿಸಿದ್ದೇನೆ. ಸರ್ಕಾರದಿಂದಲೇ 5 ಕೋಟಿ ರೂ. ಬಿಡುಗಡೆ ಮಾಡಿಸಲು ಸಮುದಾಯದ ಮುಖಂಡರು ಮನವಿ ಮಾಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡೋಣ ಎಂದು ತಿಳಿಸಿದ್ದೇನೆ ಎಂದರು.
ಕುರುಬ ಸಮಾಜಕ್ಕೂ ಕಂಬಳಿಗೂ ಭಾರೀ ನಂಟಿದೆ. ಜಿಲ್ಲೆಯಲ್ಲಿ ಹಿಂದೆ ದೊಡ್ಡ ಮಟ್ಟದಲ್ಲಿ ಕಂಬಳಿ ನೇಯ್ಗೆ ಮಾಡಲಾಗುತ್ತಿತ್ತು. ಈ ಕಂಬಳಿಗಳನ್ನು ದೇಶದ ಸೇನೆಗೂ ಕಳಿಸಲಾಗುತ್ತಿತ್ತು. ಆದರೆ ಇಂದಿನ ಪೀಳಿಗೆ ಬಹಳ ಸೂಕ್ಷ್ಮವಾಗಿ ಕಂಬಳಿಯನ್ನು ಬಳಸುತ್ತಿಲ್ಲ. ಆದರೆ ಕೊರೆಯುವ ಚಳಿಯನ್ನು ನಿಯಂತ್ರಿಸುವ ಶಕ್ತಿ ಈ ಕಂಬಳಿಗಳಿಗಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾಧಿ ಕಾರಿ ಆರ್. ವಿನೋತ್ ಪ್ರಿಯಾ ಮಾತನಾಡಿ, ಕನಕದಾಸರು ತಮ್ಮ ಕೀರ್ತನೆಗಳ ಸರಳ ಸಾಹಿತ್ಯದೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಇಂತಹ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ದಾರ್ಶನಿಕರ ವೈಚಾರಿಕೆಯನ್ನು ಅರಿತು ಅದರಂತೆ ನಡೆಯಲಿ ಎಂಬ ಉದ್ದೇಶದಿಂದ ಸರ್ಕಾರ ಜಯಂತಿಗಳನ್ನು ಆಚರಿಸುತ್ತಿದೆ. ಯುವ ಸಮುದಾಯ ಕನಕದಾಸರ ಕೀರ್ತನೆಗಳನ್ನು ಓದಿ ಅರ್ಥೈಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಿವಮೊಗ್ಗ ಸರ್ಕಾರಿ ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ| ಎಸ್.ಎಂ. ಮುತ್ತಯ್ಯ ವಿಶೇಷ ಉಪನ್ಯಾಸ ನೀಡಿ, ಕರ್ನಾಟಕ ಕಂಡ ಅಪರೂಪದ ದಾರ್ಶನಿಕ ಕನಕದಾಸರು. 16, 17ನೇ ಶತಮಾನದಲ್ಲಿ ಸಮಾಜ ಸುಧಾರಣೆಯಲ್ಲಿ ಕನಕದಾಸರ ಪಾತ್ರ ಬಹು ಮುಖ್ಯವಾಗಿದೆ. ಕುಲ ಕುಲವೆಂದು ಹೊಡೆದಾಡಬೇಡಿ, ಇಲ್ಲಿ ಯಾರು ಮೇಲು ಕೀಳಿಲ್ಲ, ಸರ್ವರೂ ಸಮಾನರು ಎಂಬ ಸಂದೇಶ ಸಾರಿದ್ದಾರೆ. ಕುಲ ಹುಟ್ಟಿನಿಂದಲ್ಲ, ಗುಣ ಹಾಗೂ ನಡತೆಯಿಂದ ಬರುತ್ತದೆ ಎಂದು ಪ್ರತಿಪಾದಿಸಿದ್ದರು ಎಂದರು.