Advertisement

ಡಿಸಿ ನೇತೃತ್ವದಲ್ಲಿ ತಮಟಕಲ್ ಕಲ್ಯಾಣಿ ಸ್ವಚ್ಛತೆ

11:53 AM Jul 31, 2019 | Naveen |

ಚಿತ್ರದುರ್ಗ: ಬರಪೀಡಿತ ಜಿಲ್ಲೆ ಅಂತರ್ಜಲ ಕೊರತೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ. ಹಾಗಾಗಿ ಪಾರಂಪರಿಕ ಜಲಮೂಲಗಳನ್ನು ಪುನರ್‌ ಸ್ಥಾಪಿಸಿ, ಜಲ ಸಂರಕ್ಷಣೆ ಕೈಗೊಳ್ಳುವ ನಿಟ್ಟಿನಲ್ಲಿ ಜು.1 ರಿಂದ ಜಿಲ್ಲೆಯ ಐದು ತಾಲೂಕುಗಳಲ್ಲಿ ಆರಂಭಿಸಿರುವ ಜಲಶಕ್ತಿ ಅಭಿಯಾನ ಈಗ ಜನಾಂದೋಲನವಾಗಿ ರೂಪುಗೊಳ್ಳುತ್ತಿದೆ. ಇದಕ್ಕೆ ಮಂಗಳವಾರ ತಾಲೂಕಿನ ತಮಟಕಲ್ ಗ್ರಾಮ ಸಾಕ್ಷಿಯಾಯಿತು.

Advertisement

ಹಾಳು ಬಿದ್ದಿದ್ದ ಕಲ್ಯಾಣಿಯನ್ನು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ನೇತೃತ್ವದಲ್ಲಿ ಸ್ವಚ್ಛಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಜಿಪಂ ಸಿಇಒ ಸಿ. ಸತ್ಯಭಾಮ ತಮಟಕಲ್ ಗ್ರಾಮದಲ್ಲಿ ಸಂಚರಿಸಿ ಸ್ವಚ್ಛತೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.

ಜಿಲ್ಲಾಧಿಕಾರಿಯವರೇ ಪೊರಕೆ ಹಿಡಿದು ಕಲ್ಯಾಣಿಯನ್ನು ಸ್ವಚ್ಛಗೊಳಿಸಲು ಮುಂದಾಗಿದ್ದು ಇತರರಿಗೆ ಪ್ರೇರಣೆ ನೀಡಿತು. ಮಂಗಳವಾರ ಬೆಳ್ಳಂಬೆಳಿಗ್ಗೆ ತಮಟಕಲ್ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಗಿಡ-ಗಂಟಿ ಬೆಳೆದು ಹಾಳುಬಿದ್ದಿದ್ದ ಕಲ್ಯಾಣಿಯನ್ನು ಸ್ವಚ್ಛಗೊಳಿಳಿಸಿದರು. ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್‌ ಸೇರಿದಂತೆ ಜಿಲ್ಲಾಧಿಕಾರಿ ಕಚೇರಿಯ ಎಲ್ಲ ಸಿಬ್ಬಂದಿಗಳು, ಜಿಪಂ, ತಾಪಂ, ಗ್ರಾಪಂ ಅಧಿಕಾರಿಗಳು, ಸಿಬ್ಬಂದಿಗಳು ಕಲ್ಯಾಣಿ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದರು.

ತಮಟಕಲ್ ಗ್ರಾಮದ ಗ್ರಾಮಸ್ಥರೂ ಕೂಡ ಭಾಗಿಯಾಗಿ ಜಲಶಕ್ತಿ ಅಭಿಯಾನಕ್ಕೆ ಬಲ ತುಂಬಿದರು. ಗ್ರಾಮದ ಅನೇಕ ಕಡೆ ಗಿಡಗಳನ್ನು ನೆಡಲಾಯಿತು. ಗಿಡಗಳನ್ನು ಉಳಿಸಿ ಬೆಳೆಸುವುದಾಗಿ ಗ್ರಾಮಸ್ಥರು ಭರವಸೆ ನೀಡಿದರು.

ಇದೇ ರೀತಿ ಜಿಲ್ಲೆಯ ಎಲ್ಲ ಕಲ್ಯಾಣಿಗಳು, ಪುಷ್ಕರಣಿ, ಕೆರೆ-ಕಟ್ಟೆಗಳು ಸ್ವಚ್ಛಗೊಂಡು ಪಾರಂಪರಿಕ ಜಲಮೂಲಗಳು ಪುನಶ್ಚೇತನಗೊಳ್ಳಬೇಕೆಂಬುದು ಜಲಶಕ್ತಿ ಅಭಿಯಾನದ ಆಶಯವಾಗಿದೆ. ಜಿಲ್ಲೆ ಪದೇ ಪದೇ ಬರಕ್ಕೆ ತುತ್ತಾಗುತ್ತಿದ್ದು, ಅಲ್ಪ ಸ್ವಲ್ಪ ಮಳೆ ರೈತರ ಕೃಷಿ ಚಟುವಟಿಕೆಗೆ ಸಾಲುತ್ತಿಲ್ಲ. ಜನ- ಜಾನುವಾರುಗಳಿಗೆ ಕುಡಿಯುವ ನೀರಿನ ತತ್ವಾರ ಇದೆ. ಜಿಲ್ಲೆಯಲ್ಲಿರು ಏಕೈಕ ನದಿ ವೇದಾವತಿ ನದಿ ಬತ್ತಿಹೋಗಿದ್ದು, ಮಳೆಗಾಲದಲ್ಲಿ ಮಾತ್ರ ಸ್ವಲ್ಪ ಹರಿವು ಇರುತ್ತದೆ. ಈ ನದಿಗೆ ನಿರ್ಮಿಸಿಲಾಗಿರುವ ವಾಣಿವಿಲಾಸ ಸಾಗರ ಜಲಾಶಯ ಅನೇಕ ವರ್ಷಗಳಿಂದ ನೀರಿನ ಕೊರತೆ ಎದುರಿಸುತ್ತಿದೆ. ಚಿತ್ರದುರ್ಗ, ಹಿರಿಯೂರು ಸೇರಿದಂತೆ ಪ್ರಮುಖ ಪಟ್ಟಣಗಳಿಗೆ ಇದೊಂದೇ ಕುಡಿಯುವ ನೀರಿನ ಮೂಲವಾಗಿದೆ. ಜಿಲ್ಲೆಯ ಅನೇಕ ಪುಷ್ಕರಣಿಗಳು, ಕಲ್ಯಾಣಿಗಳು, ಹೊಂಡಗಳು, ಕೆರೆ-ಕಟ್ಟೆಗಳು ನೀರಿನ ಸಮಸ್ಯೆ ತೀವ್ರವಾಗದಂತೆ ಜನ-ಜಾನುವಾರುಗಳನ್ನು ಕಾಪಾಡುತ್ತಿದ್ದವು. ಇದಕ್ಕೆ ಸ್ಪಷ್ಟ ನಿದರ್ಶನವೆಂದರೆ ನಗರದಲ್ಲಿ ಈಗಲೂ ಬಳಕೆಯಲ್ಲಿರುವ ಸಂತೆಹೊಂಡ, ಸಿಹಿನೀರು ಹೊಂಡ ಹಾಗೂ ಅಲ್ಲಲ್ಲಿ ಕಂಡುಬರುವ ಬಾವಿಗಳು. ಆದರೆ ಪದೇ ಪದೇ ಮಳೆಯ ತೀವ್ರ ಕೊರತೆ, ನಗರೀಕರಣ, ಜಾಗತೀಕರಣ ಹಾಗೂ ಬೋರ್‌ವೆಲ್ಗಳ ಅತಿ ಹೆಚ್ಚಿನ ಬಳಕೆಯಿಂದಾಗಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಪುಷ್ಕರಣಿ, ಕಲ್ಯಾಣಿಗಳು, ತೆರೆದ ಬಾವಿಗಳು ತ್ಯಾಜ್ಯ ತುಂಬುವ ತೊಟ್ಟಿಗಳಾಗಿ ಮಾರ್ಪಟ್ಟಿದ್ದರೆ, ಕೆರೆ-ಕಟ್ಟೆಗಳು ಜನರ ದುರಾಸೆಯಿಂದ ಒತ್ತುವರಿಗೆ ಒಳಗಾಗಿ ಲೇಔಟ್‌ಗಳಾಗಿರುವ ಸಾಧ್ಯತೆಗಳೇ ಹೆಚ್ಚು. ಕೃಷಿ ಭೂಮಿ ಹಾಗೂ ಅರಣ್ಯ ಕಡಿಮೆಯಾಗಿದೆ.

Advertisement

ನರೇಗಾ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಗಳನ್ನು ಸಮೀಕರಿಸಿ ಜಲಶಕ್ತಿ ಅಭಿಯಾನಕ್ಕೆ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಢೀಕರಿಸಲಾಗುತ್ತದೆ. ಕೃಷಿಹೊಂಡ ನಿರ್ಮಾಣ, ಕೆರೆ ಹೂಳೆತ್ತುವಿಕೆ, ಇಂಗು ಗುಂಡಿ, ಬದು, ಗೋಕಟ್ಟೆ ನಿರ್ಮಾಣ, ಅರಣ್ಯೀಕರಣಕ್ಕೆ ಒತ್ತು, ಮಲ್ಟಿ ಚೆಕ್‌ಡ್ಯಾಂ, ಚೆಕ್‌ಡ್ಯಾಂ ನಿರ್ಮಾಣ ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next