Advertisement

ಜು.1 ರಿಂದ 6-8ನೇ ತರಗತಿಗೆ ಪಾಠ ಮಾಡಲ್ಲ

12:04 PM Jun 24, 2019 | Naveen |

ಚಿತ್ರದುರ್ಗ: ಪ್ರಾಥಮಿಕ ಶಾಲೆಗಳಲ್ಲಿನ ಪದವೀಧರ ಶಿಕ್ಷಕರು ಸೇರಿದಂತೆ ಶಿಕ್ಷಕರ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಜುಲೈ 1 ರಿಂದ ಪಾಠ ಬೋಧನೆ ಬಹಿಷ್ಕರಿಸಲು ರಾಜ್ಯ ಸಂಘ ನಿರ್ಧರಿಸಿದೆ ಎಂದು ರಾಜ್ಯ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಬಿ. ನಟರಾಜ್‌ ಹೇಳಿದರು.

Advertisement

ನಗರದ ಕೆಳಗೋಟೆಯ ಬಾರ್‌ಲೈನ್‌ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಂಘದ ಜಿಲ್ಲಾ ಕಾರ್ಯಕಾರಿಣಿ ಸಭೆ ಹಾಗೂ ಸರ್ಕಾರಿ ನೌಕರರ ಸಂಘದ ನೂತನ ನಿರ್ದೇಶಕರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪದವೀಧರ ಶಿಕ್ಷಕರ ಬೇಡಿಕೆ ಈಡೇರಿಸದೇ ಇರುವುದರಿಂದ ನಾವೇಕೆ 6 ರಿಂದ 8ನೇ ತರಗತಿಗಳಿಗೆ ಪಾಠ ಮಾಡಬೇಕು. ನಾವು ಪ್ರಾಥಮಿಕ ಶಾಲಾ ಶಿಕ್ಷಕರಿದ್ದುಕೊಂಡು 1 ರಿಂದ 5ನೇ ತರಗತಿ ಮಕ್ಕಳಿಗೆ ಪಾಠ ಮಾಡುತ್ತೇವೆ. ಪದವೀಧರ ಶಿಕ್ಷಕರಿಗೆ ಮಾರಕವಾಗಿರುವ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ವಿರುದ್ಧ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರು ಸಂಘಟಿತ ಹೋರಾಟ ಮಾಡಲಿದ್ದಾರೆ ಎಂದರು.

2014ಕ್ಕಿಂತ ಹಿಂದೆ ನೇಮಕವಾದ ಪದವೀಧರ ಹಾಗೂ ಪದವಿ ಇಲ್ಲದ ಇತರ ಪ್ರಾಥಮಿಕ ಶಾಲಾ ಶಿಕ್ಷಕರನ್ನು 1 ರಿಂದ 5 ತರಗತಿಗಳಿಗೆ ಹಿಂಬಡ್ತಿ ನೀಡಿ ಆದೇಶ ಮಾಡಿದೆ. ಇದರಿಂದ ಪದವೀಧರ ಶಿಕ್ಷಕರಿಗಲ್ಲದೇ ಪಿಯುಸಿ, ಟಿಸಿಎಚ್ ಅಧ್ಯಯನ ಮಾಡಿ ನೇಮಕವಾಗಿರುವ ಶಿಕ್ಷಕರಿಗೂ ಈ ನಿಯಮ ಮಾರಕವಾಗಿದೆ. ಸರ್ಕಾರ ಎಲ್ಲಾ ಇಲಾಖೆಗಳಲ್ಲಿ ಸೇವಾ ಹಾಗೂ ವಿದ್ಯಾರ್ಹತೆ ಆಧಾರದ ಮೇಲೆ ಬಡ್ತಿ ನೀಡುತ್ತಿದ್ದು, ಪ್ರಾಥಮಿಕ ಶಾಲಾ ಶಿಕ್ಷಕರನ್ನು ಮಾತ್ರ 1 ರಿಂದ 5 ನೇ ತರಗತಿಗೆ ಹಿಂಬಡ್ತಿ ನೀಡಿದ್ದು, ಸಾವಿರಾರು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಘೋರ ಅನ್ಯಾಯವಾಗಿದೆ ಎಂದು ಕಿಡಿ ಕಾರಿದರು.

ಈ ಆದೇಶದ ವಿರುದ್ಧ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ ಕಳೆದ ಎರಡು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಸರ್ಕಾರವೇ ನಿರ್ಧರಿಸಿದಂತೆ ಪದವೀಧರ ಶಿಕ್ಷಕರು 1 ರಿಂದ 5ನೇ ತರಗತಿಗೆ ಮಾತ್ರ ಬೋಧನೆ ಮಾಡಿ 6 ರಿಂದ 8 ನೇ ತರಗತಿಯ ಬೋಧನೆ ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಸಿದರು.

Advertisement

ಹೊಳಲ್ಕೆರೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹ ಖಾಟ್ರೋತ್‌ ಮಾತನಾಡಿ, ಶಿಕ್ಷಕರೊಂದಿಗೆ ಚರ್ಚಿಸಿ ಜು.1 ರಿಂದು ಸಾಮೂಹಿಕವಾಗಿ ರಜೆ ಹಾಕುವ ತೀರ್ಮಾನ ತೆಗೆದುಕೊಳ್ಳುತ್ತೇವೆ. ಈ ಹೋರಾಟಕ್ಕೆ ಸಂಘದ ಬೆಂಬಲವಿದೆ. ಶಿಕ್ಷಕರು ಎಚ್ಚೆತ್ತುಕೊಂಡು ಹೋರಾಟ ಮಾಡಬೇಕಿದೆ ಎಂದು ಕರೆ ನೀಡಿದರು.

ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸರ್ಕಾರಿ ನೌಕರರ ಸಂಘಕ್ಕೆ ಚುನಾಯಿತರಾದ ಶಿಕ್ಷಕ ಪ್ರತಿನಿಧಿಗಳನ್ನು ಅಭಿನಂದಿಸಲಾಯಿತು. ಜಿಲ್ಲಾ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಉಪಾಧ್ಯಕ್ಷ ಈರಣ್ಣ, ನಟೇಶ್‌ ಹಾಗೂ ಜಿಲ್ಲೆಯ ಆರು ತಾಲೂಕುಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಪದಾಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next