Advertisement

ಕೋಟೆ ಅಭಿವೃದ್ಧಿಗೆ ಏಂಜಲ್‌ ಫಾಲ್ಸ್‌ ಗೆ ಇಳಿಯೋ ಕನಸು!

01:10 PM Nov 21, 2019 | Naveen |

„ತಿಪ್ಪೇಸ್ವಾಮಿ ನಾಕೀಕೆರೆ
ಚಿತ್ರದುರ್ಗ:
ಕೋಟೆನಾಡಿನ “ಮಂಕಿ ಮ್ಯಾನ್‌’ ಎಂದೇ ಹೆಸರಾಗಿರುವ ಜ್ಯೋತಿರಾಜ್‌ ಅಲಿಯಾಸ್‌ ಕೋತಿರಾಜ್‌ ಕೋಟೆ ಅಭಿವೃದ್ಧಿಗಾಗಿ ಅಮೇರಿಕಾದ ಏಂಜಲ್‌ ಫಾಲ್ಸ್‌ಗೆ ಇಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

Advertisement

ಬೆಂಗಳೂರಿನನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಜ್ಯೋತಿರಾಜ್‌ ಮಾಧ್ಯಮದವರೊಂದಿಗೆ ಮಾತನಾಡುತ್ತ ತಮ್ಮ ಆಸೆ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದು ಹರಿದಾಡುತ್ತಿದೆ. ಐತಿಹಾಸಿಕ ಚಿತ್ರದುರ್ಗದ ಏಳು ಸುತ್ತಿನ ಕೋಟೆಗೆ ಹಲವು ಶತಮಾನಗಳ ಇತಿಹಾಸವಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ ಎನ್ನುವ ಕೊರಗು ಪ್ರತಿಯೊಬ್ಬರಿಗೂ ಇದೆ. ಹೀಗಾಗಿ ಕೋಟೆಯಲ್ಲೇ ಸಾಹಸ ಪ್ರದರ್ಶಿಸುತ್ತ ಹೆಸರು ಗಳಿಸಿರುವ ಜ್ಯೋತಿರಾಜ್‌ ಇದರ ಅಭಿವೃದ್ಧಿಗಾಗಿ ದೊಡ್ಡ ಸಾಹಸಕ್ಕೆ ಮುಂದಾಗಿದ್ದಾರೆ.

ಜ್ಯೋತಿರಾಜ್‌ ಅಮೆರಿಕಾದ ಬರೊಬ್ಬರಿ 3221 ಅಡಿ ಆಳದ ಏಂಜಲ್‌ ಫಾಲ್ಸ್ ಗೆ ಇಳಿಯುವ ಪ್ರೇರಣೆಯೂ ಈ ಕೋಟೆಯಿಂದಲೇ ಬಂದಿದೆಯಂತೆ. ಎಲ್ಲವೂ ಅಂದುಕೊಂಡಂತೆ ಆದರೆ 2020 ಫೆಬ್ರವರಿ 26 ಅಥವಾ 27ಕ್ಕೆ ಫಾಲ್ಸ್‌ಗೆ ಇಳಿಯುವ ದಿನ ನಿಗದಿಯಾಗಲಿದೆ. ಒಂದು ಅತ್ಯುತ್ತಮ ಪ್ರವಾಸಿ ತಾಣವಾಗಿ ರೂಪುಗೊಳ್ಳಲು ಬೇಕಾದ ಎಲ್ಲಾ ಅರ್ಹತೆ ಕೋಟೆಗಿದ್ದರೂ ಆಳುವ ವರ್ಗದ ನಿರಾಸಕ್ತಿಯ ಕಾರಣಕ್ಕೆ ಕೋಟೆ ದಿನದಿಂದ ದಿನಕ್ಕೆ ಕಳೆಗುಂದುತ್ತಿದೆ. ಇತ್ತೀಚೆಗೆ ಸುರಿದ ಮಳೆಗೆ ಕೆಲವೆಡೆ ಗೋಡೆಗಳು ಕುಸಿದಿವೆ. ಹಾಗಾಗಿ ಕೋಟೆ ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತಿದೆ. ಇದರಿಂದ ಬೇಸರಗೊಂಡಿರುವ ಜ್ಯೋತಿರಾಜ್‌ ತನಗೆ ಬದುಕು ಕೊಟ್ಟ ಚಿತ್ರದುರ್ಗದ ಕೋಟೆಯ ಋಣ ತೀರಿಸಲು ಇದೊಂದು ಅವಕಾಶ. ಒಂದು ವೇಳೆ ಅವಕಾಶ ಸಿಕ್ಕಿ ಏಂಜಲ್‌ ಫಾಲ್ಸ್‌ಗೆ ಇಳಿದು ಹತ್ತಿ ಬದುಕಿ ವಾಪಾಸಾದರೆ ಅದೊಂದು ವಿಶ್ವ ದಾಖಲೆಯಾಗುತ್ತದೆ. ಆಕಸ್ಮಾತ್‌ ಮರಣ ಹೊಂದಿದರೆ ದುರ್ಗದ ಜನತೆ ನನಗೆ ನಾಲ್ಕು ಹಿಡಿ ಮಣ್ಣು ಕೊಡಿ ಎಂದು ನೋವು ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಶಾಲಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಜ್ಯೋತಿರಾಜ್‌ ಸುದ್ದಿ ಮಾಧ್ಯಮದವರ ಜತೆ ಮಾತನಾಡುತ್ತಾ, ಏಂಜಲ್‌ ಫಾಲ್ಸ್‌ ಏರುವ ಆಸೆ ಹೇಳಿಕೊಂಡಿದ್ದಾರೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ದುರ್ಗದ ಕೋಟೆ ಅಭಿವೃದ್ಧಿಗಾಗಿ ಪ್ರಾಣವನ್ನೇ ಪಣಕ್ಕಿಟ್ಟು ಸಾಹಸ ಮಾಡಲು ಮುಂದಾಗಿರುವ ಜ್ಯೋತಿರಾಜ್‌ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಬಹುತೇಕರು ಇಂಥಹ ಸಾಹಸಕ್ಕೆ ಕೈಹಾಕಬೇಡ, ಚಿತ್ರದುರ್ಗದಲ್ಲೇ ಹೋರಾಟ ಮಾಡಿ ನಾವೆಲ್ಲಾ ಸೇರಿ ಅಭಿವೃದ್ಧಿ ಮಾಡೋಣ
ಎನ್ನುತ್ತಿದ್ದಾರೆ.

ಸಾಯಲು ಬಂದವ ಮಂಕಿಮ್ಯಾನ್‌ ಆದ: ಮೂಲತಃ ತಮಿಳುನಾಡಿನ ಜ್ಯೋತಿರಾಜ್‌ ಬಾಲ್ಯದಲ್ಲೇ ಹೆತ್ತವರು ಹಾಗೂ ಊರು ಬಿಟ್ಟು ನಿರಾಶಾವಾದಿಯಾಗಿ ಸಾಯುವ ಆಲೋಚನೆಯಿಂದ ಚಿತ್ರದುರ್ಗದ ಕೋಟೆಯ ಬಂಡೆಯನ್ನು ಹತ್ತಿದ್ದರು. ಈ ವೇಳೆ ಅಕ್ಕಪಕ್ಕದಲ್ಲಿದ್ದ ಕೋತಿಗಳು ಸರಸರನೆ ಮರ, ಬಂಡೆಗಳನ್ನು ಏರುವುದು, ಜಂಪ್‌ ಮಾಡುವುದು ನೋಡಿ ಆಶ್ಚರ್ಯ ಗೊಂಡಿದ್ದಾರೆ. ನಾನ್ಯಾಕೆ ಈ ಪ್ರಯತ್ನ ಮಾಡಬಾರದು ಅಂದುಕೊಂಡು ಆರಂಭಿಸಿದ ಪ್ರಯತ್ನದ ಕಾರಣಕ್ಕೆ ತಮಿಳುನಾಡಿನ ಸಾಧಾರಣ ಹುಡುಗನೊಬ್ಬ ಇಂದು “ಮಂಕಿ ಮ್ಯಾನ್‌’ ಎಂದು ಜಗತ್ತಿನಾದ್ಯಂತ ಹೆಸರುವಾಸಿಯಾಗಿದ್ದಾನೆ.

Advertisement

ಕೋಟೆ ಅಭಿವೃದ್ಧಿ- ಕ್ಲೈಂಬಿಂಗ್‌ ವಾಲ್‌ ನಿರ್ಮಾಣ ಮಾಡುವಾಸೆ

ಏಂಜಲ್‌ ಫಾಲ್ಸ್‌ ಏರುವ ಬಗ್ಗೆ “ಉದಯವಾಣಿ’ ಜತೆ ಮಾತನಾಡಿದ ಜ್ಯೋತಿರಾಜ್‌, ನನಗೆ 35 ವರ್ಷವಾಯ್ತು. ಇನ್ನೈದು ವರ್ಷ ಸಾಹಸ ಮಾಡಬೇಕು ಎಂದುಕೊಂಡಿದ್ದೇನೆ. ಗೂಗಲ್‌ ನಲ್ಲಿ ಹುಡುಕಾಡಿದಾಗ ಬುಜ್‌ಖಲೀಫ್‌ ಹತ್ತಬೇಕು ಅಂದುಕೊಂಡೆ. ಆದರೆ ಏಂಜಲ್‌ ಫಾಲ್ಸ್‌ ಸರಿ ಅನ್ನಿಸಿತು ಎಂದು ತಿಳಿಸಿದರು.

ನನ್ನ ಜತೆ ಕೆಲ ಹುಡುಗರು ಇದ್ದಾರೆ. ಅವರಿಗೆಲ್ಲಾ ನನ್ನಂತೆಯೇ ಬಂಡೆ ಹತ್ತುವುದು, ಗೋಟೆ ಹತ್ತುವ ತರಬೇತಿ ನೀಡುತ್ತಿದ್ದೇನೆ. ಒಂದು ವಾಲ್‌ ಮಾಡಬೇಕು ಎನ್ನುವುದು ಆಸೆ. ಸಾಕಷ್ಟು ಜನರ ಬಳಿ ನೆರವು ಕೇಳಿದರೂ ಸ್ಪಂದಿಸಿಲ್ಲ. ಈಗ ಏಂಜಲ್‌ ಫಾಲ್ಸ್‌ ಸಾಹಸದಿಂದ ಬರುವ ಹಣದಲ್ಲಿ ಕೋಟೆ ಅಭಿವೃದ್ಧಿ ಹಾಗೂ ವಾಲ್‌ ನಿರ್ಮಿಸಿಕೊಳ್ಳುತ್ತೇನೆ ಎನ್ನುವ ಆಸೆ ಮುಂದಿಟ್ಟರು. ಇಸ್ಕ್ರೀಡೆಬಲ್‌ ಮಂಕಿಮ್ಯಾನ್‌: ಆಸ್ಟ್ರೇಲಿಯಾದ ಸಿನಿಮಾ ನಿರ್ದೇಶಕ ಡ್ಯಾನ್ಲಿ ಜೋಸೆಫ್‌ “ಇಸ್ಕ್ರೀಡೆಬಲ್‌ ಮಂಕಿಮ್ಯಾನ್‌’ ಎಂಬ ಇಂಗ್ಲಿಷ್‌ ಸಿನಿಮಾ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ನನ್ನ ಬಾಲ್ಯದ ಬಗ್ಗೆ ಕಳೆದ 15 ದಿನಗಳಿಂದ ಚಿತ್ರೀಕರಣ ಮಾಡುತ್ತಿದ್ದೇವೆ. ನನ್ನ ಅಮೇರಿಕಾ ಕನಸಿಗೆ ನೀರೆರೆದವರು ಈ ನಿರ್ದೇಶಕರು. ಅವರೇ ಅಲ್ಲಿನ ಅನುಮತಿ ಮತ್ತಿತರೆ ವಿಷಯಗಳ ಬಗ್ಗೆ ಗಮನಹರಿಸುತ್ತಿದ್ದಾರೆ ಎಂದು ಜ್ಯೋತಿರಾಜ್‌ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next