Advertisement

ಕೋಟೆನಗರಿಯಲ್ಲಿ ಹೂಗಳ ಘಮ

01:24 PM Feb 01, 2020 | Naveen |

ಚಿತ್ರದುರ್ಗ: ಹೂವು ಚೆಲುವೆಲ್ಲಾ ನಂದೆಂದಿತ್ತು ಎಂಬ ಮಾತು ತೋಟಗಾರಿಕಾ ಇಲಾಖೆ ಆವರಣದಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನಕ್ಕೆ ಹೇಳಿ ಮಾಡಿಸಿದಂತಿತ್ತು. ಸಂಜೆಗತ್ತಲಿನ, ಮಿನುಗುವ ಬೆಳಕಿನಲ್ಲಿ ಸುಗಂಧ ಬೀರುತ್ತಾ ಸಾವಿರಾರು ಹೂವುಗಳು ದುರ್ಗದ ನಾಗರಿಕರನ್ನು ಆಕರ್ಷಣೆ ಮಾಡಿದ ಪರಿ ನಿಜಕ್ಕೂ ಅದ್ಭುತವಾಗಿತ್ತು. ಬಯಲು ಸೀಮೆ ದುರ್ಗದಲ್ಲೊಂದು ಲಾಲ್‌ಬಾಗ್‌ ಸೃಷ್ಟಿಯಾಗಿತ್ತು. ಹಣ್ಣು, ಹೂವು, ಹಸಿರಿನ ಸೊಬಗು ನೋಡಲು ಜನ ದಾಂಗುಡಿ ಇಟ್ಟಿದ್ದರು.

Advertisement

ಪುಟಾಣಿ ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಖುಷಿ ಖುಷಿಯಾಗಿ ಪ್ರದರ್ಶನದಲ್ಲಿ ಹೆಜ್ಜೆ ಹಾಕಿದರು. ಜ.31ರಿಂದ ಫೆ.2ರವರೆಗೆ ಮೂರು ದಿನಗಳ ಕಾಲ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಶುಕ್ರವಾರ ಸಂಜೆ ಚಾಲನೆ ದೊರೆಯಿತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ. ಅರುಣ್‌ ಪ್ರದರ್ಶನವನ್ನು ಉದ್ಘಾಟಿಸಿದರು.

ವಿಧಾನ ಪರಿಷತ್‌ ಸದಸ್ಯೆ ಜಯಮ್ಮ ಬಾಲರಾಜ್‌, ಜಿಪಂ ಸಿಇಒ ಸಿ. ಸತ್ಯಭಾಮಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ, ಉಪವಿಭಾಗಾಧಿಕಾರಿ ಪ್ರಸನ್ನ ಮತ್ತಿತರರಿದ್ದರು. ಚಂದ್ರಯಾನ ವಿಶೇಷ ಆಕರ್ಷಣೆ: ಇತ್ತೀಚೆಗೆ ಇಸ್ರೋ ಕೈಗೊಂಡಿದ್ದ ಚಂದ್ರಯಾನದ ಮಾದರಿ ಈ ವರ್ಷದ ಫಲಪುಷ್ಪ ಪ್ರದರ್ಶನದ ವಿಶೇಷ ಆಕರ್ಷಣೆಯಾಗಿತ್ತು. ಬಗೆ ಬಗೆಯ ಹೂವುಗಳಿಂದ ರೂಪುಗೊಂಡಿದ್ದ ರಾಕೆಟ್‌ ಮಾದರಿ ಮಕ್ಕಳಿಗೆ ಎಲ್ಲಿಲ್ಲದ ಆಸಕ್ತಿ ಮೂಡಿಸಿತ್ತು. ಅಲ್ಲೇ ಬದಿಯಲ್ಲಿ ಇಸ್ರೋ ಅಧ್ಯಕ್ಷರನ್ನು ಎದೆಗಪ್ಪಿಕೊಂಡು ಸಂತೈಸುವ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಕೂಡಾ ಗಮನ ಸೆಳೆಯಿತು.

ಒಂಟಿಕಲ್ಲು ಬಸವಣ್ಣ: ಕೋಟೆಯಲ್ಲಿರುವ ಐತಿಹಾಸಿಕ ಹಾಗೂ ಆಕರ್ಷಕ ಒಂಟಿ ಕಲ್ಲು ಬಸವಣ್ಣನ ಪ್ರತಿಕೃತಿ ಕೂಡಾ ಫಲಪುಷ್ಪ ಪ್ರದರ್ಶನದಲ್ಲಿರುವುದರಿಂದ ಅಲ್ಲಿ ಸೆಲ್ಫಿ  ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿತ್ತು. ಮಾದರಿ ಕ್ಷೇತ್ರ ನಿರ್ಮಾಣ: ರೈತರು ಅಳವಡಿಕೆ ಮಾಡಿಕೊಳ್ಳಬೇಕಾದ ತೋಟಗಾರಿಕೆ ಕ್ಷೇತ್ರದ ಒಂದು ಮಾದರಿ ನಿರ್ಮಿಸಿ ವಿವಿಧ ಬಹುಬೆಳೆ ಪದ್ಧತಿ ಬಗ್ಗೆ ನೀರನ್ನು ಮಿತಗೊಳಿಸಿ ನೀರಾವರಿ ಒದಗಿಸುವ ಬಗ್ಗೆ ಪ್ರೋಸಸಿಂಗ್‌ ಯೂನಿಟ್‌ ಹಾಗೂ ರಫ್ತು ಮಾಡುವ ಬಗ್ಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಯೋಜನೆಯ ಉದ್ದೇಶಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲು ಮಾದರಿ ಕ್ಷೇತ್ರ ಪ್ರದರ್ಶನ ನಿರ್ಮಿಸಲಾಗಿದೆ.
ಚಿತ್ತಾಕರ್ಷಕ ಪುಷ್ಪಗಳು: ಹಲವು ವರ್ಣಗಳಿಂದ ಕೂಡಿದ ಸುಮಾರು 50ಕ್ಕೂ ಹೆಚ್ಚು ಬಗೆಯ ಆರ್ಕಿಡ್ಸ್‌, ಕಾರ್ನೆಶನ್‌, ಕಾಕ್ಸ್‌ ಕೂಂಬ್‌, ಸೆಲೋಶಿಯಾ, ಪ್ಲಾಕ್ಸ್‌, ಗಾಕ್ಸಿನಿಯ, ಕಲಂಚಾ, ಲಿಲ್ಲಿಸ್‌, ಇಂಪೇಷನ್ಸ್‌ (ಮಿಕ್ಸಡ್‌), ಡೇಲಿಯಾ, ಸಾಲ್ವಿಯಾ, ಚೆಂಡು ಹೂ, ಚಿಂತಾಮಣಿ ಚೆಂಡು ಹೂ ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next