Advertisement

ಅರಣ್ಯ ನಾಶ ಮುಂದುವರೆದ್ರೆ ಅಪಾಯ: ರಾಘವೇಂದ್ರ

04:00 PM Jun 19, 2019 | Team Udayavani |

ಚಿತ್ರದುರ್ಗ: ದೇಶದಲ್ಲಿ ಅರಣ್ಯ ಸಂಪತ್ತು ನಾಶವಾಗುತ್ತಿದೆ. ಹಾಗಾಗಿ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ಅರಣ್ಯ ವ್ಯಾಪ್ತಿ ಕಡಿಮೆಯಾಗುತ್ತಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಘವೇಂದ್ರ ರಾವ್‌ ಆತಂಕ ವ್ಯಕ್ತಪಡಿಸಿದರು.

Advertisement

ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅರಣ್ಯ ಪ್ರದೇಶದ ಒತ್ತುವರಿ, ವಿವಿಧ ಯೋಜನೆಗಳಿಗೆ ಅನುಮೋದನೆ, ಹಂಚಿಕೆ, ನಿರ್ದಿಷ್ಟ ಪ್ರಮಾಣದಲ್ಲಿ ಅರಣ್ಯ ಪ್ರದೇಶವನ್ನು ಹೆಚ್ಚಿಸಲು ಆಗುತ್ತಿಲ್ಲ. ಇದರಿಂದಾಗಿ ದೇಶದ ಭೂಭಾಗದಲ್ಲಿ ಶೇ. 33 ರಷ್ಟು ಇರಬೇಕಾಗಿದ್ದ ಕಾಡು, ಶೇ. 22ರಷ್ಟು ಕಾಡು ಉಳಿದಿದೆ. ಅರಣ್ಯ ನಾಶ ಇದೇ ರೀತಿ ಮುಂದುವರೆದರೆ ಮುಂದಿನ ಪೀಳಿಗೆಗೆ ಉಸಿರಾಟಕ್ಕೂ ತೊಂದರೆ ಕಾಡಲಿದೆ ಎಂದು ಎಚ್ಚರಿಸಿದರು.

ಖಾಲಿ ಜಾಗ, ಮನೆ, ಜಮೀನು, ಶಾಲಾ-ಕಾಲೇಜು ಆವರಣದಲ್ಲಿ ಸಸಿಗಳನ್ನು ನೆಡಬೇಕು. ನೆರೆಹೊರೆಯವರಿಗೆ ಪರಿಸರ ಜಾಗೃತಿ ಮೂಡಿಸಬೇಕು. ಪ್ಲಾಸ್ಟಿಕ್‌ ವಸ್ತುಗಳ ಬಳಕೆ ಕಡಿಮೆ ಮಾಡುವಂತೆ ತಿಳಿ ಹೇಳಬೇಕು. ಮನೆಗಳಲ್ಲಿ ಹಸಿ ಕಸ ಒಣ ಕಸವನ್ನು ಸರಿಯಾಗಿ ವಿಂಗಡಣೆ ಮಾಡಬೇಕು ಎಂದರು.

ಆರ್‌ಎಫ್‌ಒ ಜಿ.ಎಸ್‌. ಸಂದೀಪ ನಾಯಕ್‌ ಮಾತನಾಡಿ, ಪರಿಸರ ದಿನದಂದು ಗಿಡ ನೆಟ್ಟು ನೆಪ ಮಾತ್ರಕ್ಕೆ ಪರಿಸರ ದಿನವನ್ನು ಆಚರಿಸಿದರೆ ಸಾಲದು. ಪ್ರತಿಯೊಬ್ಬರೂ ಗಿಡ ನೆಟ್ಟು ಪೋಷಿಸಿದರೆ ಮಾತ್ರ ಪರಿಸರ ದಿನಾಚರಣೆಗೆ ಅರ್ಥ ಬರುತ್ತದೆ. ವರ್ಷ ಪೂರ್ತಿ ಪರಿಸರದ ಬಗ್ಗೆ ಚರ್ಚೆ, ಪರಿಸರದ ಕೆಲಸಗಳು ನಡೆಯಬೇಕು. ಕಳೆದ ವರ್ಷ ಕೊಡಗಿನಲ್ಲಿ ಮಳೆ ಸುರಿದು ಆದ ಅನಾಹುತಕ್ಕೆ ಮನುಷ್ಯನೇ ಕಾರಣ. ಅಲ್ಲಿನ ಪರಿಸರದಲ್ಲಿ ಇದ್ದ ಮರಗಳನ್ನು ಕಡಿದ ಪರಿಣಾಮ ಕಳೆದ ವರ್ಷದ ಮಳೆ ನಮಗೆ ಪಾಠ ಕಲಿಸಿದೆ. ಅಂತಹ ತಪ್ಪು ಆಗದಂತೆ ಎಚ್ಚರ ವಹಿಸಬೇಕಿದೆ ಎಂದರು.

ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಣೆ ಮಾಡಲಾಯಿತು. ಪರಿಸರದ ಬಗ್ಗೆ ಜಾಗೃತಿ ಮೂಡಿಸಿದ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next