Advertisement

ಪ್ರವಾಸಿ ತಾಣಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ

03:57 PM Jun 30, 2019 | Team Udayavani |

ಚಿತ್ರದುರ್ಗ: ಐತಿಹಾಸಿಕ ಕೋಟೆ, ಚಂದ್ರವಳ್ಳಿ ಸೇರಿದಂತೆ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡಿದೆ. ಕ್ರಿಯಾ ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಸೂಚನೆ ನೀಡಿದರು.

Advertisement

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರ್ಕಾರ 3.46 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಇದರಲ್ಲಿ ಚಿತ್ರದುರ್ಗದ ಕೋಟೆಯ ಆವರಣದಲ್ಲಿ ಪಾರ್ಕಿಂಗ್‌ ವ್ಯವಸ್ಥೆ, ಡಿಜಿಟಲ್ ಪ್ರವಾಸಿ ಮಾಹಿತಿ ಕೇಂದ್ರ, ವಸ್ತು ಸಂಗ್ರಹಾಲಯ, ಪಾತ್‌ವೇ ಉನ್ನತೀಕರಣ ಹಾಗೂ ಇತರೆ ಸೌಲಭ್ಯಗಳನ್ನು ಕಲ್ಪಿಸಲು ಪ್ರವಾಸೋದ್ಯಮ ಇಲಾಖೆ ಯೋಜನೆ ರೂಪಿಸಬೇಕಿದೆ. ಇದರ ಜೊತೆಗೆ ಭಾರತೀಯ ಪುರಾತತ್ವ ಇಲಾಖೆ ಕೂಡ ಕೋಟೆಯ ಅಭಿವೃದ್ಧಿ ಹಾಗೂ ಪ್ರವಾಸಿಗರಿಗೆ ಮೂಲ ಸೌಕರ್ಯ ಒದಗಿಸುವ ಕೆಲಸ ಮಾಡಬೇಕಿದೆ ಎಂದರು.

ಚಂದ್ರವಳ್ಳಿ ಅಭಿವೃದ್ಧಿಗೂ ಸರ್ಕಾರ ಅನುದಾನ ಒದಗಿಸಿದ್ದು, ಇದರಲ್ಲಿ ಚಂದ್ರವಳ್ಳಿ ಬಳಿ ಪಾರ್ಕಿಂಗ್‌ ವ್ಯವಸ್ಥೆಗೆ 2 ಕೋಟಿ, ಪ್ರವಾಸಿ ಕೇಂದ್ರಕ್ಕೆ 1 ಕೋಟಿ, ಮಾಹಿತಿ ಫಲಕ ಅಳವಡಿಕೆಗೆ 3 ಲಕ್ಷ, ಬ್ಯಾಟರಿ ಚಾಲಿತ ವಾಹನಕ್ಕಾಗಿ 9 ಲಕ್ಷ, ವಿದ್ಯುತ್‌ ದಿಪಾಲಂಕಾರಕ್ಕೆ 20 ಲಕ್ಷ ರೂ. ಸೇರಿದಂತೆ 3.38 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಅಲ್ಲದೆ ಚಂದ್ರವಳ್ಳಿಯಲ್ಲಿ ಮಕ್ಕಳ ಉದ್ಯಾನವನ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ 5 ಕೋಟಿ ರೂ. ಅನುದಾನ ಒದಗಿಸಿದೆ. ಈ ಎಲ್ಲ ಯೋಜನೆಗಳು ಕಾರ್ಯರೂಪಕ್ಕೆ ಬರಲು ಯೋಜನಾಬದ್ಧವಾಗಿ ಪ್ರವಾಸಿ ತಾಣ ಅಭಿವೃದ್ಧಿ ಹಾಗೂ ಪ್ರವಾಸಿಗರಿಗೆ ಉತ್ತಮ ಸೌಲಭ್ಯ ದೊರಕಿಸಲು ಅನುಕೂಲವಾಗುವಂತೆ ಯೋಜನೆ ರೂಪಿಸುವಂತೆ ತಿಳಿಸಿದರು.

ಸಂಸದ ಎ. ನಾರಾಯಣಸ್ವಾಮಿ ಮಾತನಾಡಿ, ದೂರದೃಷ್ಟಿ ಕೊರತೆಯಿಂದ ನಿರೀಕ್ಷಿತ ಮಟ್ಟದಲ್ಲಿ ಕೋಟೆ ಅಭಿವೃದ್ಧಿಯಾಗಿಲ್ಲ. ದೇಶವಷ್ಟೇ ಅಲ್ಲ ವಿಶ್ವದಾದ್ಯಂತ ಚಿತ್ರದುರ್ಗ ಕೋಟೆಯತ್ತ ಆಕರ್ಷಿತರಾಗಿ ಪ್ರವಾಸಿಗರು ನಿರಂತರವಾಗಿ ಬರುವಂತಾಗಬೇಕಿದೆ. ಕೋಟೆಯ ಪ್ರವೇಶದ್ವಾರದಿಂದ ಸುಮಾರು ಒಂದು ಕಿಮೀ ಆವರಣದಲ್ಲಿ ಆಕರ್ಷಕ ವರ್ಣಮಯ ವಿದ್ಯುತ್‌ ಅಲಂಕಾರ ಮಾಡಬೇಕು. ಈಗಾಗಲೇ ಪುರಾತತ್ವ ಇಲಾಖೆ ಸಮ್ಮತಿಸಿದ್ದು, ಕೂಡಲೇ ಕಾರ್ಯರೂಪಕ್ಕೆ ಬರಬೇಕು ಎಂದರು.

ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ಕೋಟೆಗೆ ಬಸ್‌ ಮುಂತಾದ ವಾಹನಗಳು ಬರಲು ಸೂಕ್ತ ಹಾಗೂ ಅಗಲವಾದ ರಸ್ತೆಯ ಅಗತ್ಯವಿದೆ. ಕೋಟೆ ಪ್ರದೇಶದಲ್ಲಿನ ಒತ್ತುವರಿ ತೆರವುಗೊಳಿಸಿ ಸುಸಜ್ಜಿತ ಪಾರ್ಕಿಂಗ್‌ ವ್ಯವಸ್ಥೆ, ಶೌಚಾಲಯ ಸೇರಿದಂತೆ ಮೂಲ ಸೌಕರ್ಯ ಒದಗಿಸಬೇಕಿದೆ. ಕೋಟೆ ವೀಕ್ಷಿಸಲು ಬರುವ ಪ್ರವಾಸಿಗರು, ಅದರಲ್ಲೂ ಮಹಿಳೆಯರು ಶೌಚಕ್ಕೆ ಹೋಗಲು ಅಲ್ಲಿನ ಸುತ್ತಮುತ್ತಲ ಮನೆಯವರಲ್ಲಿ ಗೋಗರೆದು ಬೇಡಿಕೊಳ್ಳುವ ಪರಿಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ತಹಶೀಲ್ದಾರ್‌ ಕಾಂತರಾಜ್‌ ಮಾತನಾಡಿ, ಕೋಟೆ ಪ್ರದೇಶದಲ್ಲಿ ಸರ್ವೆ ಕೈಗೊಂಡಿದ್ದು, ಪಾರ್ಕಿಂಗ್‌ಗಾಗಿ 4.50 ಎಕರೆ ಭೂಮಿ ಲಭ್ಯವಿದೆ. ವಿವಿಧೆಡೆ ರಸ್ತೆ ಹಾಗೂ ಭೂಮಿ ಒತ್ತುವರಿ ಕಂಡುಬಂದಿದ್ದು, ಅದನ್ನು ತೆರವುಗೊಳಿಸಿ, ರಸ್ತೆ ಅಗಲೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಶಾಸಕರಾದ ಎಂ. ಚಂದ್ರಪ್ಪ, ಟಿ. ರಘುಮೂರ್ತಿ, ಗೂಳಿಹಟ್ಟಿ ಶೇಖರ್‌ ಮಾತನಾಡಿ, ಸರ್ಕಾರ ಬಿಡುಗಡೆ ಮಾಡಿರುವ ಅನುದಾನದಲ್ಲಿ ನಮ್ಮ ಕ್ಷೇತ್ರದಲ್ಲಿನ ಪ್ರವಾಸಿ ತಾಣಗಳ ಅಭಿವೃದ್ಧಿಗೂ ಯೋಜನೆ ರೂಪಿಸಬೇಕು. ಆಡುಮಲ್ಲೇಶ್ವರ, ಹಿಮತ್‌ಕೇತಾರ, ಜೋಗಿಮಟ್ಟಿ, ಚಂದ್ರವಳ್ಳಿ ಪ್ರದೇಶಗಳಿಗೆ ತ್ವರಿತವಾಗಿ ಸಂಪರ್ಕ ಕಲ್ಪಿಸುವ ರೀತಿಯಲ್ಲಿ ಕೇಬಲ್ ಕಾರ್‌ ನಂತಹ ಯೋಜನೆ ರೂಪಿಸಿ ಕೇಂದ್ರ ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಸಂಸದರಿಗೆ ಮನವಿ ಮಾಡಿದರು.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ ಮಾತನಾಡಿ, ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ಪರಿಶಿಷ್ಟ ಜಾತಿ-34, ಪರಿಶಿಷ್ಟ ಪಂಗಡ-17, ಹಿಂದುಳಿದ ವರ್ಗ-12 ಹಾಗೂ ಅಲ್ಪಸಂಖ್ಯಾತರ ವರ್ಗದ 2 ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ಆಗಸ್ಟ 15 ರಂದು ಕಾರುಗಳನ್ನು ವಿತರಿಸಲಾಗುವುದು ಎಂದರು. ಜಿಪಂ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್‌, ಪುರಾತತ್ವ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next