ಚಿತ್ರದುರ್ಗ: ಜಮೀನಿನಲ್ಲಿ ಬಂಗಾರದ ನಾಣ್ಯಗಳು ಸಿಕ್ಕಿವೆ. ಕಡಿಮೆ ಬೆಲೆಗೆ ಕೊಡುತ್ತೇವೆ ಎಂದು ನಂಬಿಸಿ ನಕಲಿ ಬಂಗಾರ ಕೊಟ್ಟು ವಂಚನೆ ಮಾಡುತ್ತಿದ್ದ ಮೂವರು ಆರೋಪಿತರನ್ನು
ಚಿತ್ರದುರ್ಗ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹರಪನಹಳ್ಳಿ ತಾಲ್ಲೂಕು ಮಾಚ್ಚಹಳ್ಳಿ ಕೊರಚರಹಟ್ಟಿಯ ಕೆ.ಸುರೇಶ್ (25), ಅರಸೀಕೆರೆ ತಾಲ್ಲೂಕಿನ ಚೆಲ್ಲಾಪುರ ಗ್ರಾಮದ ಕೇಶವಮೂರ್ತಿ (30) ಹಾಗೂ ಹರಪನಹಳ್ಳಿ ತಾಲ್ಲೂಕು
ವಡೇರಹಳ್ಳಿ ಕೊರಚರಹಟ್ಟಿಯ ಶೇಖರಪ್ಪ (48) ಬಂಧಿತರು. ಬಂಧಿತರಿಂದ ಸುಮಾರು ಅರ್ಧ ಕೆ.ಜಿ ಯಷ್ಟು ನಕಲಿ ಬಂಗಾರದ ನಾಣ್ಯ ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ವಿಫ್ಟ್ ಕಾರನ್ನು ವಶಕ್ಕೆ
ಪಡೆದಿದ್ದಾರೆ. ತಮ್ಮ ಜಮೀನಿನಲ್ಲಿ ಹೊಲ ಉಳುಮೆ ಮಾಡುವಾಗ ಬಂಗಾರದ ನಾಣ್ಯಗಳು ಸಿಕ್ಕಿವೆ. ಅದನ್ನು ಕಡಿಮೆ ಬೆಲೆಗೆ ಕೊಡುತ್ತೇವೆ ಎಂದು ಚಿತ್ರದುರ್ಗ ನಗರ ಹಾಗೂ ಹೊರ
ವಲಯದಲ್ಲಿ ಸಾರ್ವಜನಿಕರನ್ನು ಈ ತಂಡ ನಂಬಿಸುತ್ತಿತ್ತು. ಬಳಿಕ ಒಂದು ಶುದ್ಧ ಬಂಗಾರದ ನಾಣ್ಯ ನೀಡಿ ನಂತರ ನಕಲಿ ಬಂಗಾರದ ನಾಣ್ಯಗಳನ್ನು ನೀಡಿ ಮೋಸ ಮಾಡುತ್ತಿದ್ದರು. ಚಿತ್ರದುರ್ಗ ನಗರದ ಪಿಳ್ಳೆಕೇರೆನಹಳ್ಳಿ ಬಳಿ ಬಾಪೂಜಿ ಕಾಲೇಜು ಹಿಂಭಾಗ ಶನಿವಾರ ಬೆಳಗ್ಗೆ ಕಾರಿನಲ್ಲಿ ವ್ಯವಹರಿಸುತ್ತಿದ್ದಾಗ ಅನುಮಾನಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಉಳಿದವರ ಪತ್ತೆಗೆ ಜಾಲ ಬೀಸಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ಪತ್ತೆ ಕಾರ್ಯಕ್ಕೆ ಎಸ್ಪಿ ಜಿ.ರಾಧಿಕಾ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.