Advertisement

ಸಂವಿಧಾನ ದೇಶದ ಪವಿತ್ರ ಗ್ರಂಥ: ಡಾ|ಬಸವರಾಜ್‌

06:03 PM Nov 25, 2019 | Naveen |

ಚಿತ್ರದುರ್ಗ: ಸಂವಿಧಾನ ಬಲಿಷ್ಠವಾಗಿರುವ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯೂ ವ್ಯವಸ್ಥಿತವಾಗಿ ಬದುಕಲು ಸಾಧ್ಯವಾಗುತ್ತದೆ ಎಂದು ಮಹಾರಾಜ ಕಾಲೇಜು ಪ್ರಾಚಾರ್ಯ ಡಾ| ವಿ. ಬಸವರಾಜ್‌ ಹೇಳಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪಂಗಡ ನೌಕರರ ಒಕ್ಕೂಟ ಹಾಗೂ ಸಾಮಾಜಿಕ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಿದ್ದ “ನಮ್ಮ ದೇಶ ನಮ್ಮ ಸಂವಿಧಾನ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದ ಸಂವಿಧಾನ ಕೆಲವೇ ವರ್ಗಕ್ಕೆ ಸೀಮಿತವಾಗಿಲ್ಲ. ಪ್ರತಿ ಪ್ರಜೆಗೂ ರಕ್ಷ ಣೆ ಸಿಗಬೇಕು ಎಂಬುದು ಸಂವಿಧಾನದ ಆಶಯವಾಗಿದೆ. ಎಲ್ಲರಿಗೂ ರಕ್ಷಣೆ ನೀಡಿದೆ. ಆದ್ದರಿಂದ ದೇಶದ ಎಲ್ಲ ಪ್ರಜೆಗಳು ಸಂವಿಧಾನವನ್ನು ಓದಿಕೊಳ್ಳಬೇಕು. ಶಿಕ್ಷಣ, ಉದ್ಯೋಗ ಸೇರಿದಂತೆ ಅನೇಕ ಅವಕಾಶಗಳು ಸಂವಿಧಾನದಿಂದ ದೊರೆತಿವೆ. ದೇಶದ ಪವಿತ್ರ
ಗ್ರಂಥ ಸಂವಿಧಾನವಾಗಿದೆ ಎಂದರು.

ಡಾ| ಬಿ.ಆರ್‌. ಅಂಬೇಡ್ಕರ್‌ರವರ ಚಿಂತನೆ, ವಿದ್ವತ್ತು, ಅಪಾರ ಪರಿಶ್ರಮದಿಂದಾಗಿ ಭಾರತೀಯ ಸಂವಿಧಾನ ರೂಪುಗೊಂಡಿದೆ. ಇಂತಹ ಸಂವಿಧಾನದ ಕಾರಣಕ್ಕೆ ಚಹಾ ಮಾರುವ ವ್ಯಕ್ತಿ ಪ್ರಧಾನಿಯಾದರು. ಒಬ್ಬ ಅಲ್ಪಸಂಖ್ಯಾತ ಹಾಗೂ ಮಹಿಳೆ ದೇಶದ ಉನ್ನತ ಸ್ಥಾನಕ್ಕೇರಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಕೂಡ್ಲಿಗಿಯ ಕನ್ನಡ ಪ್ರಾಧ್ಯಾಪಕಿ ಡಾ| ಟಿ. ಗಾಯತ್ರಿ “ಸಂವಿಧಾನ ಮತ್ತು ಮಹಿಳೆಯರು’ ಕುರಿತು ಮಾತನಾಡಿ, ಇಂದು ಸಂವಿಧಾನದ ಮೂಲಕ್ಕೆ ಕೈಹಾಕುವ ಕಳಂಕಿತರು ಹುಟ್ಟಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಸಂವಿಧಾನದ ಆಶಯಗಳನ್ನು ತಿಳಿದುಕೊಳ್ಳಬೇಕು ಎಂದರು.

ದೇಶದ ಚರಿತ್ರೆಯಲ್ಲಿ ಭಕ್ತಿ ಯುಗದಿಂದಲೂ ಮಹಿಳೆಗೆ ಧಾರ್ಮಿಕ ಅವಕಾಶಗಳು ಇರಲಿಲ್ಲ. ಸಾಮಾಜಿಕವಾಗಿ ಸ್ಥಾನಮಾನಗಳು ಸಿಗುತ್ತಿರಲಿಲ್ಲ. ಆದರೆ ಬ್ರಿಟಿಷರ ಆಗಮನದ ನಂತರ ಸಾಮಾಜಿಕ ಸುಧಾರಕರು ಮಹಿಳೆಯರ ಬಗ್ಗೆ ಜಾಗೃತಿ ಮೂಡಿಸಿದರು. ಅಂಬೇಡ್ಕರ್‌ ಮಹಿಳೆಯರ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದರು. ಅವರ ಕಲ್ಪನೆ ವಿಶಿಷ್ಟವಾಗಿತ್ತು. 1820ರಲ್ಲಿ ಬ್ರಿಟನ್‌ ಸರ್ಕಾರ ಮಹಿಳೆಯರಿಗೆ ಮತದಾನದ ಹಕ್ಕು ಕಲ್ಪಿಸಿತ್ತು. ಇದು ಮಹಿಳಾ ಚಳವಳಿಯ ಮೊದಲ ಹಂತವಾಗಿತ್ತು. ಇದನ್ನು ಮನಗಂಡ ಅಂಬೇಡ್ಕರ್‌, ರಾಜಕೀಯವಾಗಿ ಸ್ಥಾನಮಾನ ಪಡೆದುಕೊಳ್ಳದ ಹೊರತು ಸಾಮಾಜಿಕ ಅಭಿವೃದ್ಧಿ ಅಸಾಧ್ಯ ಎಂಬುದನ್ನು ಅರಿತು ಮಹಿಳೆ, ಅಲ್ಪಸಂಖ್ಯಾತರಿಗೆ ಅವಕಾಶ ಒದಗಿಸುವ ನಿಟ್ಟಿನಲ್ಲಿ ಸಂವಿಧಾನದಲ್ಲಿ ಹಲವು ಪರಿಚ್ಛೇದಗಳನ್ನು ಸೇರಿಸಿದ್ದಾರೆ ಎಂದರು.

Advertisement

ಹಿಂದೂ ಸಮಾಜದಲ್ಲಿ ಮಹಿಳೆ ಅತ್ಯಂತ ಶೋಷಿತಳು. ಜತೆಗೆ ಭಾರತೀಯ ಸಮಾಜದಲ್ಲಿ ದಲಿತ ಮತ್ತು ಮಹಿಳೆಯ ಸ್ಥಿತಿಗತಿ ಒಂದೇ ಆಗಿದೆ ಎಂದು ತಿಳಿದು ಸಂವಿಧಾನದಲ್ಲಿ ಸ್ಥಾನಮಾನ ಕಲ್ಪಿಸಿಕೊಡಲು ಪ್ರಯತ್ನಿಸಿದರು ಎಂದು ತಿಳಿಸಿದರು.

“ಸಂವಿಧಾನ ಮತ್ತು ಅಲ್ಪಸಂಖ್ಯಾತರು’ ಕುರಿತು ಮಹಮ್ಮದ್‌ ಸಾದತ್‌ ಮಾತನಾಡಿ, ಭಾರತ ಹಲವಾರು ಜಾತಿಗಳಿಂದ ಕೂಡಿ ಜಾತ್ಯತೀತ ರಾಷ್ಟ್ರವಾಗಿದೆ. ಸಂವಿಧಾನದ ಅವಶ್ಯಕತೆ ಎಲ್ಲರಿಗೂ ಇದೆ. ಸಂವಿಧಾನ ಅಲ್ಪಸಂಖ್ಯಾತರಿಗೂ ಉನ್ನತ ಸ್ಥಾನಮಾನ ನೀಡಿದೆ ಎಂದರು.

ಸಾಮಾಜಿಕ ಸಂಘರ್ಷ ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಎಸ್‌. ಚಿಕ್ಕಣ್ಣ ಮಾತನಾಡಿದರು. ಪ್ರಾಧ್ಯಾಪಕ ಡಾ| ಕೆ.ಕೆ. ಕಾಮಾನಿ, ಚಿಂತಕ ಪ್ರೊ| ಸಿ.ಕೆ. ಮಹೇಶ್‌, ಅಹಿಂದ ಮುಖಂಡ ಮುರುಘಾ ರಾಜೇಂದ್ರ ಒಡೆಯರ್‌, ಶಿಕ್ಷಕ ಕಸವನಹಳ್ಳಿ ಶಿವಣ್ಣ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next