Advertisement

ಶಿಕ್ಷಕರು ಭಗವದ್ಗೀತೆ ಅಧ್ಯಯನ ಮಾಡಿ

02:42 PM Sep 13, 2019 | Naveen |

ಚಿತ್ರದುರ್ಗ: ಭಾರತೀಯರಲ್ಲಿ ಆಧ್ಯಾತ್ಮಿಕ ವಾತಾವರಣ ಗಟ್ಟಿಯಾಗಿ ನೆಲೆಯೂರಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್‌. ಹೆಗಡೆ ಹೇಳಿದರು.

Advertisement

ಸೋಂದಾ ಸ್ವರ್ಣವಲ್ಲಿ ಮಠ ಹಾಗೂ ಭಗವದ್ಗೀತಾ ಅಭಿಯಾನ ಸಮಿತಿ ಸಹಯೋಗದಲ್ಲಿ ನಗರದ ವಾಸವಿ ಮಹಲ್ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿಕ್ಷಕರ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಎಲ್ಲ ಅಪರಾಧಗಳನ್ನು ಕಾನೂನಿಂದಲೇ ಸರಿ ಮಾಡುವುದು ಕಷ್ಟ. ಆದರೆ ಭಾರತೀಯ ಪರಂಪರೆಯಲ್ಲಿ ಹಾಸುಹೊಕ್ಕಾಗಿರುವ ಆಧ್ಯಾತ್ಮದಿಂದ ವ್ಯಕ್ತಿಯ ತಿಳಿವಳಿಕೆ ಮಟ್ಟವನ್ನು ಹೆಚ್ಚಿಸಿ ಸರಿಯಾಗಿ ನಡೆಯುವಂತೆ ಮಾಡಲು ಹಲವು ಮಾರ್ಗಗಳಿವೆ. ಅದರಲ್ಲಿ ಭಗವದ್ಗೀತೆ ಕೂಡಾ ಒಂದು ಎಂದರು.

ಶಿಕ್ಷಕರು ಭಗವದ್ಗೀತೆಯನ್ನು ಓದಿಕೊಂಡು ಅದರ ಸಾರವನ್ನು ಗ್ರಹಿಸಿ ಮಕ್ಕಳಿಗೆ ತಿಳಿಸಿದರೆ ಸರಿದಾರಿಯಲ್ಲಿ ನಡೆಯುತ್ತಾರೆ. ಜಿಲ್ಲೆಯಲ್ಲಿ ಭಗವದ್ಗೀತಾ ಅಭಿಯಾನ ನಡೆಯುವುದರಿಂದ ಮಕ್ಕಳನ್ನು ಇದಕ್ಕಾಗಿ ತಯಾರು ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ತಿಳಿಸಿದರು.

ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್‌. ಮಂಜುನಾಥ್‌ ಮಾತನಾಡಿ, ಚಿತ್ರದುರ್ಗದಲ್ಲಿ ಹತ್ತು ವರ್ಷಗಳ ಹಿಂದೆ ಜಿಲ್ಲಾ ಮಟ್ಟದ ಭಗವದ್ಗೀತಾ ಅಭಿಯಾನ ನಡೆದಿತ್ತು. ಈಗ ರಾಜ್ಯ ಮಟ್ಟದ ಅಭಿಯಾನ ಚಿತ್ರದುರ್ಗದಲ್ಲಿ ನಡೆಯಲಿದೆ. ಹಾಗಾಗಿ ಶಿಕ್ಷಕರು ಭಗವದ್ಗೀತೆಯನ್ನು ಮೊದಲು ಕಲಿತು ನಂತರ ಮಕ್ಕಳಿಗೆ ಬೋಧಿಸಬೇಕು ಎಂದು ಹೇಳಿದರು.

Advertisement

ಮಕ್ಕಳಲ್ಲಿ ದುರ್ಗುಣ, ದುಶ್ಚಟಗಳು ಬಾರದಂತೆ ಅವರ ಜೀವನಕ್ಕೆ ಉತ್ತಮ ಸಂದೇಶ ಕೊಡುವ ಜವಾಬ್ದಾರಿ ಶಿಕ್ಷಕರ ಮೇಲಿರುತ್ತದೆ. ಈ ಹಿನ್ನೆಲೆಯಲ್ಲಿ ಭಗವದ್ಗೀತೆಯ ಸಾರಾಂಶವನ್ನು ಚೆನ್ನಾಗಿ ಮಕ್ಕಳ ಮನಸ್ಸಿನಲ್ಲಿ ಬಿತ್ತಿದರೆ ಅವರ ಭವಿಷ್ಯ ಸುಂದರವಾಗಲಿದೆ ಎಂದರು.

ಗೊತ್ತಿಲ್ಲದೆ ಮನುಷ್ಯ ತಪ್ಪು ಮಾಡುತ್ತಾನೆ. ಆದರೆ ಗೊತ್ತಿದ್ದೂ ತಪ್ಪು ಮಾಡುವುದು ದೊಡ್ಡ ಅಪರಾಧ. ಅಂತಹ ಮನಃಸ್ಥಿತಿಯನ್ನು ಬದಲಾಯಿಸುವ ಶಕ್ತಿ ಭಗವದ್ಗೀತೆಯಲ್ಲಿದೆ ಎಂದು ಅಭಿಪ್ರಾಯಪಟ್ಟರು.

ರಾಜರಾಜೇಶ್ವರಿ ದೇವಸ್ಥಾನದ ನಾಗರಾಜ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಭಗವದ್ಗೀತಾ ಅಭಿಯಾನವನ್ನು ಯಾವುದೇ ಧರ್ಮ ಪ್ರಚಾರಕ್ಕಾಗಿ ಮಾಡುತ್ತಿಲ್ಲ. ಇದರ ಸಾರ ಮನುಷ್ಯನ ಜೀವನಕ್ಕೆ ಅತ್ಯವಶ್ಯಕ ಎಂದು ಭಗವದ್ಗೀತೆಯ ಮಹತ್ವವನ್ನು ತಿಳಿಸಿದರು.

ಅ. 30 ರಂದು ಚಿತ್ರದುರ್ಗದಲ್ಲಿ ರಾಜ್ಯ ಮಟ್ಟದ ಭಗವದ್ಗೀತಾ ಅಭಿಯಾನ ಆರಂಭಗೊಂಡು ಡಿಸೆಂಬರ್‌ 7 ರಂದು ಮುಕ್ತಾಯಗೊಳ್ಳಲಿದೆ. ಅದಕ್ಕೆ ಪೂರಕವಾಗಿ ಏರ್ಪಡಿಸಿರುವ ಕಾರ್ಯಾಗಾರದಲ್ಲಿ ಗಮನ ಕೊಟ್ಟು ಭಗವದ್ಗೀತೆಯ ಮಹತ್ವ ತಿಳಿದುಕೊಳ್ಳಿ ಎಂದು ಶಿಕ್ಷಕರಿಗೆ ಸಲಹೆ ನೀಡಿದರು.

ಆರ್ಯವೈಶ್ಯ ಸಂಘದ ಅಧ್ಯಕ್ಷ ಕಾಶಿ ವಿಶ್ವನಾಥ ಶೆಟ್ಟಿ, ಪ್ರಾಧ್ಯಾಪಕ ಡಾ| ರಾಜೀವಲೋಚನ, ಮಾರುತಿ ಮೋಹನ್‌, ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಪಿ.ಎಲ್. ಸುರೇಶ್‌ರಾಜು, ಸಂಸ್ಕಾರ ಭಾರತಿಯ ನಾಗರಾಜ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next