ತಿಪ್ಪೇಸ್ವಾಮಿ ನಾಕೀಕೆರೆ
ಚಿತ್ರದುರ್ಗ: ಜಿಲ್ಲೆಯಲ್ಲಿ ಮುಂಗಾರು ಕೈಒಟ್ಟು, ಹಿಂಗಾರು ಕೈ ಹಿಡಿದಿದೆ. ಪರಿಣಾಮ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಲು ಸಾಧ್ಯವಾಗದ ರೈತರು ಹಿಂಗಾರಿ ಬೆಳೆಗಳ ಬಿತ್ತನೆಗೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.
ಕೃಷಿ ಇಲಾಖೆ ಕೂಡಾ ಈಗಾಗಲೇ 15 ಸಾವಿರ ಕ್ವಿಂಟಲ್ ಕಡಲೆ ಬೀಜ ದಾಸ್ತಾನು ಮಾಡಿದೆ. ಒಟ್ಟು 30 ಸಾವಿರ ಕ್ವಿಂಟಲ್ ಬೀಜದ ಅವಶ್ಯಕತೆಯಿದ್ದು, ಅಗತ್ಯಬಿದ್ದರೆ ಇನ್ನೂ ಹೆಚ್ಚಿನ ದಾಸ್ತಾನಿಗೆ ತರಿಸಲು ಸಿದ್ಧತೆಯಲ್ಲಿದೆ. ಜಿಲ್ಲೆಯಲ್ಲಿ ಹಿಂಗಾರು ಬೆಳೆಯಾಗಿ ರೈತರು ಕಡಲೆ ಬೆಳೆಯುತ್ತಾರೆ. ಇದರ ಜತೆಗೆ ಅಕ್ಕಡಿ ಅಥವಾ ಕಡೆಸುತ್ತಿಗೆ ಕುಸುಬೆಯನ್ನೂ ಹಾಕಲಾಗುತ್ತೆ. ವಿಶೇಷವಾಗಿ ಹಸ್ತಾ ಮಳೆಗೆ ಕಡಲೆ ಬಿತ್ತನೆ ಆರಂಭವಾಗುತ್ತದೆ. ಉತ್ತರೆ ಮಳೆಯಿಂದ ಜಮೀನುಗಳಲ್ಲಿ ಸಾಕಷ್ಟು ತೇವಾಂಶ ಇದೆ. 75 ದಿನಕ್ಕೆ ಕಟಾವಿಗೆ ಬರುವ ಕಡಲೆಯನ್ನು ಎರೆ ಭೂಮಿಯಲ್ಲಿ ಬೆಳೆಯುತ್ತಾರೆ.
ಚಿತ್ರದುರ್ಗ ಕಸಬಾ, ತುರುವನೂರು, ಬೆಳಗಟ್ಟ, ಭರಮಸಾಗರ, ಚಳ್ಳಕೆರೆ, ಹಿರಿಯೂರಿನ ಕೆಲ ಭಾಗ, ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲೂಕಿನ ಕೆಲ ಭಾಗಗಳಲ್ಲಿರುವ ಎರೆ ಭೂಮಿಯಲ್ಲಿ ಕೆಲ ರೈತರಷ್ಟೇ ಸಾಂಪ್ರದಾಯಿಕವಾಗಿ ಕಡಲೆ ಬೆಳೆಯುವ ರೂಢಿ ಇಟ್ಟುಕೊಂಡಿದ್ದಾರೆ. ಕೃಷಿ ಇಲಾಖೆ ಅಂದಾಜಿನ ಪ್ರಕಾರ ಸುಮಾರು 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬಿತ್ತನೆಯಾಗುತ್ತದೆ. ಆದರೆ, ಈ ವರ್ಷ ಇದರ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದ್ದು, ಮುಂಗಾರು ಹಂಗಾಮಿನಲ್ಲಿ 3.55 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇತ್ತು. ಆದರೆ, 2.35 ಲಕ್ಷ ಹೆಕ್ಟೇರ್ ಮಾತ್ರ ಬಿತ್ತನೆಯಾಗಿ ಶೇ. 65ರಷ್ಟು ಗುರಿ ಸಾಧಿ ಸಲಾಗಿದೆ. ಸಮರ್ಪಕ ಮಳೆ ಬಾರದ ಕಾರಣ ಇನ್ನೂ ಶೇ.35ರಷ್ಟು ಬಿತ್ತನೆ ಪ್ರದೇಶ ಖಾಲಿ ಉಳಿದಿದೆ. ಈಗ ಹದವಾಗಿ ಮಳೆ ಬಂದಿರುವುದರಿಂದ ಕಡಲೆಯನ್ನಾದರೂ ಬೆಳೆಯೋಣ ಎಂಬ ತುಡಿತ ರೈತರಲ್ಲಿದೆ.
ಒಂದೇ ದರ: ಕಡಲೆ ಬೀಜಕ್ಕೆ ರೈತರೀಗ ಮುಗಿಬಿದ್ದಿದ್ದಾರೆ. ಇದೇ ಕಾರಣಕ್ಕೆ ಸರ್ಕಾರ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಗಳ ಮೂಲಕ ಬೀಜ ವಿತರಣೆ ಮಾಡುವ ಕಾರ್ಯಕ್ರಮ ಜಾರಿಗೆ ತಂದಿದೆ. ಸಾಮಾನ್ಯವಾಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ಸಿಗುವ ಕಡಲೆ ಬೀಜದ ದರಕ್ಕೂ, ಮಾರುಕಟ್ಟೆಯಲ್ಲಿ ಸಿಗುವ ಕಡಲೆ ಬೀಜದ ದರಕ್ಕೂ ಕನಿಷ್ಠ ಒಂದು ಸಾವಿರವಾದರೂ ವ್ಯತ್ಯಾಸ ಇರುತ್ತದೆ. ಆದರೆ, ಸದ್ಯ ಇರುವ ಬೆಲೆಯನ್ನು ಗಮನಿಸಿದರೆ ಮಾರುಕಟ್ಟೆ ಹಾಗೂ ರೈತ ಸಂಪರ್ಕ ಕೇಂದ್ರದಲ್ಲಿ ಹೆಚ್ಚು ಕಡಿಮೆ ಒಂದೇ ಬೆಲೆ ಇದೆ.
ಕೃಷಿ ಇಲಾಖೆ ಪ್ರತಿ ಕೆಜೆ ಕಡಲೆ ಬೀಜಕ್ಕೆ 45 ರೂ. ಅಂದರೆ ಕ್ವಿಂಟಲ್‌ಗೆ 4500 ರೂ. ನಿಗ ದಿ ಮಾಡಿದೆ. ಮಾರುಕಟ್ಟೆಯಲ್ಲಿ 4600, 4650 ರೂ.ಗೆ ಕಡಲೆ ಬೀಜ ದೊರೆಯುತ್ತಿದೆ. ಕೇವಲ 100-150 ರೂ. ವ್ಯತ್ಯಾಸವಿರುವುದರಿಂದ ರೈತರು ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಮಾರುಕಟ್ಟೆ ದರಕ್ಕಿಂತ ಕಡಿಮೆ ಮಾಡಬೇಕು ಎಂಬ ಕೂಗು ಕೇಳಿಬಂದಿದೆ.
ಬಿತ್ತನೆಗೆ ನೀಡುವ ಪ್ರಮಾಣದಲ್ಲಿ ವ್ಯತ್ಯಾಸ: ಕೃಷಿ ಇಲಾಖೆ ಪ್ರತಿ ಎಕರೆಗೆ 20 ರಿಂದ 25 ಕೆಜಿ ಕಡಲೆ ಬೀಜ ಬಿತ್ತನೆ ಮಾಡಬಹುದು ಎಂದು ಅಂದಾಜಿಸಿ 5 ಎಕರೆವರೆಗೆ ಭೂಮಿ ಇರುವ ರೈತರಿಗೆ 1 ಕ್ವಿಂಟಲ್ ಬೀಜ ವಿತರಣೆ ಮಾಡಲು ತೀರ್ಮಾನಿಸಿದೆ. ಪ್ರತಿ ಎಕೆರೆಗೆ
ಕನಿಷ್ಠ 30ರಿಂದ 35 ಕೆಜಿ ಬಿತ್ತನೆ ಮಾಡಬೇಕಾಗುತ್ತದೆ. ಆದ್ದರಿಂದ ಇಲಾಖೆ ನೀಡುವ ಬೀಜ ಸಾಕಾಗುವುದಿಲ್ಲ. ಇದರ ಪ್ರಮಾಣ ಹೆಚ್ಚಿಸಬೇಕು ಎನ್ನುತ್ತಿದ್ದಾರೆ ರೈತರು.