ಫೋಟೋಗ್ರಫಿ ಎಂದರೆ ಅದು ಆ ಕ್ಷಣದ ಸತ್ಯ ಎನ್ನುವುದೇನೋ ನಿಜ. ಆದರೆ ಅದು ಯಾವ ಕಾಲಕ್ಕೂ ಉಳಿದುಬಿಡುವ ಸತ್ಯ. ಇಂದು ವಿಡಿಯೋಗಳ ಭರಾಟೆಯ ನಡುವೆಯೂ ಫೋಟೋಗಳು ತಮ್ಮ ಹೊಳಪನ್ನು ಕಳೆದುಕೊಂಡಿಲ್ಲ. ಡಿಜಿಟಲ್ ತಂತ್ರಜ್ಞಾನ ಬಂದ ಮೇಲೆ ಫೋಟೋ ಕ್ಲಿಕ್ಕಿಸುವುದು ಹೆಚ್ಚಾಗಿರಬಹುದು, ರಾಶಿಗಟ್ಟಲೆ ಫೋಟೋಗಳು ನಮ್ಮ ನಡುವೆ ಹಾಗೂ ಅಂತರ್ಜಾಲದಲ್ಲಿ ಹರಿದಾಡುತ್ತಿರಬಹುದು. ಆದರೆ, ಕಲಾತ್ಮಕ ಫೋಟೋ ಮತ್ತು ಕಲೆಯಾಗಿ ಛಾಯಾಗ್ರಹಣ ತನ್ನ ಛಾಪು ಕಳೆದುಕೊಂಡಿಲ್ಲ.
ತಂತ್ರಜ್ಞಾನ ಬಂದಾಕ್ಷಣ ಉತ್ತಮ ಫೋಟೋಗಳನ್ನು ತೆಗೆಯುವುದು ಸುಲಭವಾಗಿಬಿಟ್ಟಿದೆ ಎನ್ನುವ ಮಾತು ನಿಜವಲ್ಲ. ಹಳೆ ತಲೆಮಾರಿನ ಛಾಯಾಗ್ರಾಹಕರ ಫೋಟೋಗಳನ್ನು ನೋಡಿದಾಗ ಈ ಸಂಗತಿ ಮನದಟ್ಟಾಗುತ್ತದೆ. ಮಾಲಾ ಮುಖರ್ಜಿ ಅಂಥಾ ಛಾಯಾಗ್ರಾಹಕರಲ್ಲೊಬ್ಬರು. ಫೋಟೋಗ್ರಫಿಯೆಂದರೆ ಅದು ಸಂಗೀತ ಕಛೇರಿ ಇದ್ದಂತೆ ಎನ್ನುವುದು ಅವರ ಅನಿಸಿಕೆ. ಸರಿಯಾಗಿ ಸೆರೆ ಹಿಡಿದರೆ ಫೋಟೋದಲ್ಲಿ ಲಯವನ್ನು, ರಾಗ- ತಾಳವನ್ನು ಕಾಣಬಹುದು ಎನ್ನುತ್ತಾರೆ ಅವರು.
ಅವರ ಛಾಯಾಚಿತ್ರ ಪ್ರದರ್ಶನ ನಗರದಲ್ಲಿ ನಡೆಯುತ್ತಿದೆ. ಲಂಡನ್‌ನಲ್ಲಿ ಛಾಯಾಗ್ರಹಣವನ್ನು ಕಲಿಕೆಯಾಗಿ ಅಭ್ಯಾಸ ಮಾಡಿದ ಅವರ ಮೊದಲ ಛಾಯಾಗ್ರಹಣ ಪ್ರದರ್ಶನಕ್ಕೆ ವೇದಿಕೆಯಾಗಿದ್ದು ನಮ್ಮ ಬೆಂಗಳೂರು, ಅದು 25 ವರ್ಷಗಳ ಹಿಂದೆ. ದೇಶ ವಿದೇಶಗಳಲ್ಲಿ ಅವರ ಛಾಯಾಚಿತ್ರ ಪ್ರದರ್ಶನಗಳು ಏರ್ಪಟ್ಟಿವೆ, ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಫೋಟೋದಲ್ಲಿ ಕಾಣಿಸಲ್ಪಡುವ ವಿಷಯ ಮಾತ್ರವಲ್ಲ, ಬಣ್ಣ, ಅದರ ಪ್ರಕೃತಿ ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ಅವರ ವೈಶಿಷ್ಟé.
ಎಲ್ಲಿ?: ಎಂ.ಕೆ.ಎಫ್. ಮ್ಯೂಸಿಯಂ ಆಫ್ ಆರ್ಟ್, ನಂ. 55/1 ಲಾವೆಲ್ಲೆ ರಸ್ತೆ ಯಾವಾಗ?: ಜೂನ್ 29- ಜುಲೈ 13