ಚಿತ್ರದುರ್ಗ: ಕೋವಿಡ್ 19 ಎರಡನೇ ಅಲೆ ನಿಯಂತ್ರಿಸುವ ಸಲುವಾಗಿ ಸರ್ಕಾರ ಜಾರಿ ಮಾಡಿರುವ ವೀಕೆಂಡ್ ಕರ್ಫ್ಯೂಗೆ ಕೋಟೆನಾಡು ಚಿತ್ರದುರ್ಗದ ಜನತೆ ಉತ್ತಮವಾಗಿ ಸ್ಪಂದಿಸಿದರು. ಅನಗತ್ಯವಾಗಿ ಬೀದಿಗಿಳಿಯದೆ ಮನೆಯಲ್ಲೇ ಇದ್ದು ಕೊರೊನಾ ಹರಡದಂತೆ ತಡೆಯುವ ಸರ್ಕಾರದ ನಿರ್ಣಯವನ್ನು ಸ್ವಾಗತಿಸಿದರು.
ಕೆಲಸಗಳಿಗೆ ತೆರಳುವವರು, ಔಷ ಧ ಮತ್ತಿತರೆ ಅಗತ್ಯ ಕೆಲಸಗಳಿಗೆ ಮಾತ್ರ ಬೆರಳೆಣಿಕೆಯಷ್ಟು ಜನ ಅಲ್ಲಲ್ಲಿ ಓಡಾಡುವುದು ಕಂಡುಬಂತು. ಉಳಿದಂತೆ ಇಡೀ ನಗರ ಕಳೆದ ವರ್ಷದ ಲಾಕ್‌ಡೌನ್ ನೆನಪಿಸುತ್ತಿತ್ತು. ಬೆಳಗ್ಗೆ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀಗೆ ಇದ್ದ ವಿನಾಯಿತಿ ಅವ ಧಿಯಲ್ಲಿ ಜನ ರಸ್ತೆಯಲ್ಲಿ ಕಾಣಿಸುತ್ತಿದ್ದರು.
ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಆದರೆ 10 ಗಂಟೆಯ ನಂತರ ಪೊಲೀಸರು ಇಡೀ ನಗರದಲ್ಲಿ ಸುತ್ತಾಡಿ ಅಂಗಡಿಗಳನ್ನು ಮುಚ್ಚಿಸಿದರು. ಇಡೀ ದಿನ ನಗರ ಅಕ್ಷರಶಃ ಮೌನಕ್ಕೆ ಜಾರಿತ್ತು. ಗಾಂಧಿ ವೃತ್ತ, ಬಿ.ಡಿ. ರಸ್ತೆ, ಹೊಳಲ್ಕೆರೆ ರಸ್ತೆ, ಮೆದೇಹಳ್ಳಿ ರಸ್ತೆ, ಲಕ್ಷ್ಮೀ ಬಜಾರ್ ಸೇರಿದಂತೆ ವ್ಯಾಪಾರ ವಹಿವಾಟುಗಳು ಜೋರಾಗಿ ನಡೆಯುವ ಪ್ರದೇಶಗಳಲ್ಲಿ ಕೂಡಾ ನೀರವ ಮೌನ ಕಾಣಿಸುತ್ತಿತ್ತು.
ಊಟಕ್ಕೆ ಪರದಾಡಿದ ಬ್ಯಾಚುಲರ್‌ಗಳು: ಅನೇಕ ಬ್ಯಾಚುಲರ್ ಹುಡುಗರು ಮಧ್ಯಾಹ್ನದ ಊಟಕ್ಕೆ ಪರದಾಡಿದರು. ಪ್ರಮುಖ ರಸ್ತೆಗಳಲ್ಲಿ ತೆರೆದಿರುತ್ತಿದ್ದ ಯಾವ ಹೋಟೆಲ್ ಕೂಡ ತೆರೆದಿರಲಿಲ್ಲ. ಖಾನಾವಳಿ, ಮೆಸ್‌ಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಕೂಡ ಇಲ್ಲದೆ ಎಲ್ಲಿ ಹೋಟೆಲ್ ತೆರೆದಿದೆ ಎಂದು ಅವರಿವರನ್ನು ವಿಚಾರಿಸುತ್ತಿದ್ದರು. 12 ಗಂಟೆ ವೇಳೆಗೆ ತೆರೆದ ಪ್ರವಾಸಿಮಂದಿರ ಹಾಗೂ ಯೂನಿಯನ್ ಪಾರ್ಕ್ ಆವರಣದ ಇಂದಿರಾ ಕ್ಯಾಂಟೀನ್ ಕೆಲವರಿಗೆ ಆಸರೆಯಾಯಿತು.
ಪೊಲೀಸರಿಗೆ ಹೆಚ್ಚು ತೊಂದರೆ ನೀಡದ ಕರ್ಫ್ಯೂ: ಕಳೆದ ವರ್ಷದ ಲಾಕ್‌ಡೌನ್ ಹೋಲಿಸಿಕೊಂಡರೆ ಈಗಿನ ಕರ್ಫ್ಯೂ ಪೊಲೀಸರಿಗೆ ಹೆಚ್ಚು ತ್ರಾಸು ನೀಡಲಿಲ್ಲ. ಅನಗತ್ಯವಾಗಿ ಓಡಾಡಿದ ಒಂದಿಷ್ಟು ಪ್ರಕರಣ ಬಿಟ್ಟರೆ ಪೊಲೀಸರು ಜನರನ್ನು ಬೆನ್ನತ್ತಿ ಹೋಗುವುದು, ಕದ್ದು ಮುಚ್ಚಿ ವ್ಯಾಪಾರ ನಡೆಸುವವರನ್ನು ಹುಡುಕುವುದು ಇರಲಿಲ್ಲ. ಅಂಗಡಿ, ಹೋಟೆಲ್ ಮಾಲೀಕರುಗಳು ಸ್ವಯಂಪ್ರೇರಣೆಯಿಂದಲೇ ಬಂದ್ ಮಾಡಿಕೊಂಡು ಮನೆಯಲ್ಲಿ ಇದ್ದಿದ್ದರಿಂದ ಪೊಲೀಸರು ಎಲ್ಲಾ ರಸ್ತೆಗಳಲ್ಲಿ ಓಡಾಟ ನಡೆಸಿ ನಾವು ರಸ್ತೆಯಲ್ಲಿ ಇದ್ದೇವೆ ಎನ್ನುವ ಎಚ್ಚರಿಕೆ ನೀಡುತ್ತಿದ್ದರು. ಆಟೋ, ಬಸ್‌ಗಳು ಸಂಚಾರ ನಡೆಸಿದವು. ಆದರೆ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಎಪಿಎಂಸಿ ವಹಿವಾಟುಗಳು ಬಂದ್ ಆಗಿದ್ದವು. ಬೆಳಗ್ಗೆ ಮಟನ್ ಮಾರುಕಟ್ಟೆಯಲ್ಲಿ ಚಿಕನ್, ಮಟನ್ ಬೆಲೆ ತುಸು ಹೆಚ್ಚಾಗಿತ್ತು. ಆದರೂ ವೀಕೆಂಡ್ ಲಾಕ್ ಡೌನ್ ಎಂಜಾಯ್ ಮಾಡಲು ಜನ ಮುಗಿಬಿದ್ದು ಖರೀದಿ ಮಾಡಿದರು.