Advertisement

ಸ್ವ ಪ್ರತಿಷ್ಠೆ ಬಿಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿ

07:21 PM Apr 23, 2021 | Team Udayavani |

ಚಳ್ಳಕೆರೆ: ಸಾರ್ವಜನಿಕರು ನಮ್ಮ ಮೇಲೆ ವಿಶ್ವಾಸವಿಟ್ಟು ಮತ ನೀಡಿ ಗೆಲ್ಲಿಸುವ ಮೂಲಕ ನಮಗೆ ಚುನಾಯಿತ ಪ್ರತಿನಿಧಿ  ಎಂಬ ಗೌರವ ನೀಡಿದ್ದಾರೆ. ಜನರಿಂದ ಅ ಧಿಕಾರ ಪಡೆದ ನೀವು ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಜನಸೇವೆ ಮಾಡಬೇಕು. ಸ್ವಪ್ರತಿಷ್ಠೆ, ಅಹಂ ಮತ್ತು ಸ್ವಜನಪಕ್ಷಪಾತ ಬಿಟ್ಟು ಜನರ ಹಾಗೂ ಸಮಾಜದ ಒಳಿತಿಗೆ ಶ್ರಮಿಸಬೇಕು ಎಂದು ನಗರಸಭೆ ಸದಸ್ಯರಿಗೆ ಶಾಸಕ ಟಿ. ರಘುಮೂರ್ತಿ ಕಿವಿಮಾತು ಹೇಳಿದರು.

Advertisement

ಇಲ್ಲಿನ ನಗರಸಭೆ ಕಾರ್ಯಾಲಯದಲ್ಲಿ ಗುರುವಾರ ನಡೆದ ತುರ್ತು ಸಭೆಯಲ್ಲಿ ಅವರು ಮಾತನಾಡಿದರು. ಪ್ರಸ್ತುತ ನಗರಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ಆಡಳಿತವಿದ್ದರೂ ಸಹ ಬಿಜೆಪಿ, ಜೆಡಿಎಸ್‌ ಸದಸ್ಯರು ಸಹಕಾರ ನೀಡತ್ತಾ ಬಂದಿದ್ದಾರೆ. ಆಡಳಿತ ಮಂಡಳಿ ಕೈಗೊಳ್ಳುವ ಅಭಿವೃದ್ಧಿ ಕೆಲಸಗಳಿಗೆ ಎಲ್ಲಾ ಸದಸ್ಯರು ಕೈಜೋಡಿಸಿದ್ದಾರೆ. ಆಡಳಿತ ನಡೆಸುವ ಸಂದರ್ಭದಲ್ಲಿ ವಿರೋಧವೂ ವ್ಯಕ್ತವಾಗುತ್ತದೆ. ಆದರೆ ಆಡಳಿತ ಹೊಂದಿರುವ ಅಧ್ಯಕ್ಷ, ಉಪಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷರು ವಿರೋಧವನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಜನರಿಗಾಗಿ ಕೆಲಸ ಮಾಡಬೇಕು. ಮೈಮನಸ್ಯ, ಅಸಮಾಧಾನ ಇದ್ದಲ್ಲಿ ಅದು ನಿಮ್ಮನ್ನು ಅಭಿವೃದ್ಧಿ ಪಥದಿಂದ ದೂರ ತೆಗೆದುಕೊಂಡು ಹೋಗಿ ಅಧಃಪತನಕ್ಕೆ ತಳ್ಳುತ್ತದೆ ಎಂದು ಎಚ್ಚರಿಸಿದರು.

ನಗರಸಭೆಗೆ ಬರುವ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಗುರಿ ನಿಮ್ಮದಾಗಬೇಕು. ವಿಶೇಷವಾಗಿ ಪೌರಾಯುಕ್ತರು ಆಡಳಿತ ಮಂಡಳಿ ಮತ್ತು ಜನರ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕು. ಕಾನೂನನ್ನು ಜನರ ಒಳಿತಿಗಾಗಿಯೇ ಬಳಸಬೇಕು. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಪಟ್ಟಂತೆ ಎಲ್ಲಾ 31 ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸಬೇಕು. ಪ್ರಸ್ತುತ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ನಗರಸಭೆ ಆಡಳಿತ ಮತ್ತು ಚುನಾಯಿತ ಸದಸ್ಯರು ನಿಯಂತ್ರಣಕ್ಕೆ ಮುಂದಾಗಬೇಕು. ನಗರಸಭೆ ಸಿಬ್ಬಂದಿ ವರ್ಗ ಸಾರ್ವಜನಿಕರಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲವೆಂಬ ಆರೋಪವಿದ್ದು, ಈ ಬಗ್ಗೆ ಪೌರಾಯುಕ್ತರು ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಅನಿವಾರ್ಯವಾದಲ್ಲಿ ಮಾತ್ರ ಅವರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಸೂಚಿಸಿದರು.

ಜಿಲ್ಲಾ ಯೋಜನಾ ಧಿಕಾರಿ ಸತೀಶ್‌ ರೆಡ್ಡಿ ಮಾತನಾಡಿ, ನಗರದಲ್ಲಿ ಇತ್ತೀಚೆಗೆ ಹೊಸ ಬಡಾವಣೆಗಳು ನಿರ್ಮಾಣವಾಗುತ್ತಿದ್ದು ಅವುಗಳ ಪರಿಶೀಲನೆಗೆ ಅವಕಾಶವಿದೆ. ನಗರ ಯೋಜನಾ ಪ್ರಾ ಧಿಕಾರದ ವತಿಯಿಂದ ಪರಿಶೀಲನೆ ನಡೆಸಲಾಗುವುದು. ನಗರಸಭೆಯ ಸಾಮಾನ್ಯ ಸಭೆಯಲ್ಲಿ ಲೇಔಟ್‌ ನಿರ್ಮಾಣದ ಬಗ್ಗೆ ಒಪ್ಪಿಗೆ ಇದ್ದರೂ ಅವುಗಳನ್ನು ಪರಿಶೀಲಿಸುವ ಜವಾಬ್ದಾರಿ ಜಿಲ್ಲಾ ಧಿಕಾರಿಗಳು ಮತ್ತು ನಗರ ಯೋಜನಾ ಪ್ರಾಧಿಕಾರಕ್ಕೆ ಇದೆ ಎಂದು ತಿಳಿಸಿದರು.

ಪೌರಾಯುಕ್ತ ಪಿ. ಪಾಲಯ್ಯ ಮಾತನಾಡಿ, ನಗರಸಭೆ ಕೈಗೊಳ್ಳುವ ಎಲ್ಲಾ ನಿರ್ಣಯಗಳು ನಿಯಮದ ಅನುಸಾರವೇ ನಡೆಯುತ್ತವೆ. ಯಾವುದೇ ಹಂತದಲ್ಲೂ ನಿಯಮ ಮೀರಲು ಸಾಧ್ಯವಿಲ್ಲ. ಅನಿವಾರ್ಯವಾದಲ್ಲಿ ಮಾತ್ರ ಜಿಲ್ಲಾ ಧಿಕಾರಿಗಳು ಮತ್ತು ಜಿಲ್ಲಾ ಯೋಜನಾ  ಧಿಕಾರಿಗಳಿಗೆ ಮಾಹಿತಿ ನೀಡಬೇಕಾಗುತ್ತದೆ. ಎಲ್ಲಾ ಸದಸ್ಯರನ್ನು ಹಾಗೂ ಅಧ್ಯಕ್ಷೆ, ಉಪಾಧ್ಯಕ್ಷೆ, ಸ್ಥಾಯಿ ಸಮಿತಿ ಅಧ್ಯಕ್ಷರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಕಾರ್ಯ ನಿರ್ವಹಿಸಲಾಗುತ್ತಿದೆ. ಲೋಪ ದೋಷವಿದ್ದಲ್ಲಿ ಸರಿಪಡಿಸಿಕೊಳ್ಳುವುದಾಗಿ ತಿಳಿಸಿದರು.

Advertisement

ತುರ್ತು ಸಭೆಯಲ್ಲಿ ತಹಶೀಲ್ದಾರ್‌ ಎಂ. ಮಲ್ಲಿಕಾರ್ಜುನ್‌, ಪೊಲೀಸ್‌ ಇನ್ಸ್‌ಪೆಕ್ಟರ್‌ ಜೆ.ಎಸ್‌.ತಿಪ್ಪೇಸ್ವಾಮಿ, ಅಧ್ಯಕ್ಷೆ ಸಿ.ಬಿ. ಜಯಲಕ್ಷ್ಮೀ ಕೃಷ್ಣಮೂರ್ತಿ, ಉಪಾಧ್ಯಕ್ಷೆ ಜೈತುಂಬಿ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್‌ ಗೌಡ, ಸದಸ್ಯರಾದ ಆರ್‌. ರುದ್ರ ನಾಯಕ, ವೈ. ಪ್ರಕಾಶ್‌, ಕವಿತಾ ಬೋರಯ್ಯ, ವೆಂಕಟೇಶ್‌, ಎಸ್‌. ಜಯಣ್ಣ, ಸುಜಾತಾ ಪಾಲಯ್ಯ, ವಿ.ವೈ. ಪ್ರಮೋದ್‌, ಸಿ. ಶ್ರೀನಿವಾಸ್‌, ಸುಮಾ ಭರಮಣ್ಣ, ಕವಿತಾ ನಾಯಕಿ, ಸಿ.ಎಂ. ವಿಶುಕುಮಾರ್‌, ನಿರ್ಮಲಾ, ಎಂ. ನಾಗವೇಣಿ, ಚಳ್ಳಕೆರೆಯಪ್ಪ, ವಿರೂಪಾಕ್ಷಿ, ಕೆ. ವೀರಭದ್ರಪ್ಪ, ಆರ್‌. ಮಂಜುಳಾ, ಪಾಲಮ್ಮ, ಸಾವಿತ್ರಮ್ಮ, ಎಚ್‌.ಪ್ರಶಾಂತ್‌ಕುಮಾರ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next