ಹೊಸದುರ್ಗ: ಬುಡಕಟ್ಟು ಸಂಸ್ಕೃತಿಯ ಹಿನ್ನೆಲೆ ಹೊಂದಿದ ಯಾವುದೇ ಜಾತಿ ಎಸ್‌ಸಿ-ಎಸ್‌ಟಿ ಪಂಗಡ ಸೇರಲು ಅರ್ಹವಾಗಲಿದೆ ಎಂದು ಉಪ್ಪಾರ ಕುಲಶಾಸ್ತ್ರೀಯ ಅಧ್ಯಯನದ ಯೋಜನಾ ನಿರ್ದೇಶಕ ಪ್ರೊ| ಕೆ.ಎಂ. ಮೈತ್ರಿ ಹೇಳಿದರು.
ತಾಲೂಕಿನ ಭಗೀರಥ ಮಠದಲ್ಲಿ ಬುಧವಾರ ನಡೆದ ಉಪ್ಪಾರ ಕುಲಶಾಸ್ತ್ರೀಯ ಅಧ್ಯಯನ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಪೂರ್ವಿಕರ ಆರಾಧನೆ, ಸಂಪ್ರದಾಯ, ಬೆಡಗುಗಳು, ವೃತ್ತಿ ಇನ್ನಿತರ ಅಂಶಗಳು ತಪ್ಪಿದಲ್ಲಿ ವರದಿಯಲ್ಲಿ ಸೇರ್ಪಡೆ ಮಾಡಲಾಗುವುದು ಎಂದರು. ಉಪ್ಪಾರ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆ ಮಾಡುವ ವಿಚಾರವಾಗಿ ಕುಲಶಾಸ್ತ್ರೀಯ ಅಧ್ಯಯನ ನಡೆಯುತ್ತಿದೆ. ವರದಿಯಲ್ಲಿ ಯಾವುದಾದರೂ ಅಂಶಗಳು ಬಿಟ್ಟಿದ್ದರೆ ಅಥವಾ ದೋಷಗಳು ಉಂಟಾಗಿದ್ದಲ್ಲಿ ನಮಗೆ ಮಾಹಿತಿ ನೀಡಿ ಸರಿಪಡಿಸುವ ಕೆಲಸವನ್ನು ಉಪ್ಪಾರ ಸಮುದಾಯದವರು ಮಾಡಬೇಕೆಂದರು.
ಇದನ್ನೂ ಓದಿ :ಕನ್ನಡ ಧ್ವಜ ತೆರವಿಗೆ ಮೋರ್ಚಾ
ಭಗೀರಥ ಮಠದ ಡಾ| ಪುರುಷೋತ್ತ ಮಾನಂದಪುರಿ ಸ್ವಾಮೀಜಿ ಮಾತನಾಡಿ, ಎಷ್ಟೇ ಪರಿಣಾಮಕಾರಿಯಾಗಿ ಕುಲಶಾಸ್ತ್ರೀಯ ಅಧ್ಯಯನ ವರದಿ ತಯಾರಿಸಿದರೂ ಸರಕಾರದ ಮೇಲೆ ಒತ್ತಡ ಹಾಕಿದರಷ್ಟೇ ಕೆಲಸ ವಾಗಲು ಸಾಧ್ಯ. ಸಮುದಾಯದ ವಿಚಾರ ಮುನ್ನೆಲೆಗೆ ಬಂದಂತಹ ಸಂದರ್ಭದಲ್ಲಿ ರಾಜಕೀಯ ಮುಖಂಡರು ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗೊತ್ತಿ ಸಮುದಾಯದ ಶ್ರೇಯೋಭಿವೃದ್ಧಿಗೆ ಎಂತಹ ತ್ಯಾಗಕ್ಕೂ ಸಿದ್ಧರಾಗಿರಬೇಕು. ಸಮಾಜ ನಮಗೇನು ಮಾಡಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾವೇನು ಕೊಡುಗೆ ನೀಡಿದ್ದೇವೆ ಎಂಬುದು ಮುಖ್ಯ. ಎಸ್‌ಟಿ ಸೇರ್ಪಡೆಯಿಂದ ಉಪ್ಪಾರ ಸಮಾಜ ಎಲ್ಲಾ ಹಂತಗಳಲ್ಲಿಯೂ ಅಭಿವೃದ್ಧಿ ಹೊಂದಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಪ್ಪಾರ ಸಮಾಜ ಎಸ್‌ಟಿ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮಣ ಉಪ್ಪಾರ ಅಧ್ಯಕ್ಷತೆ ವಹಿಸಿದ್ದರು. ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ನಾಗರಾಜು, ಭಗೀರಥ ಧಾರ್ಮಿಕ ಟ್ರಸ್ಟ್‌ನ ಭೀಮಪ್ಪ, ಮಧುರೆ ನಟರಾಜ್, ಮಂಜುನಾಥ್, ಮೈಲಾರಪ್ಪ, ಗುರುಮೂರ್ತಿ ಮತ್ತಿತರರು ಇದ್ದರು.
ಇದನ್ನೂ ಓದಿ : ಸಂಧಾನ ಸಭೆ ಯಶಸ್ವಿ : ಅನಿರ್ದಿಷ್ಟ ಧರಣಿ ಹಿಂದಕ್ಕೆ