ಚಿತ್ರದುರ್ಗ: ದಲಿತರಿಗೆ ಅನ್ಯಾಯವಾದರೆ ಮೊದಲು ಹೋಗುವುದೇ ಪೊಲೀಸರ ಬಳಿಗೆ. ಆದರೆ ಅಲ್ಲಿಯೇ ನ್ಯಾಯ ಸಿಗಲಿಲ್ಲ ಎಂದರೆ ಎಲ್ಲಿಗೆ ಹೋಗಬೇಕು ಎಂದು ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ ಪ್ರಶ್ನಿಸಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ಉಪವಿಭಾಗದ ಡಿವೈಎಸ್ಪಿ ಪಾಂಡುರಂಗಪ್ಪ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಕೂಡಲೇ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಒಳಿತಿಗಾಗಿ ಇರುವ ದೌರ್ಜನ್ಯ ತಡೆ ಕಾಯ್ದೆಯನ್ನು ಡಿವೈಎಸ್‌ಪಿ ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು. 2016ರಲ್ಲಿ ದಲಿತ ಮಹಾಗಣಪತಿ ಪ್ರತಿಷ್ಠಾಪನೆ ಮಾಡಿದ ಕಾರಣಕ್ಕೆ ಸಮುದಾಯದ ಬಾಳೆಕಾಯಿ ಶ್ರೀನಿವಾಸ್ ವಿರುದ್ಧ ಪ್ರಕರಣ ದಾಖಲಿಸಿ ರೌಡಿ ಪಟ್ಟಿಗೆ ಸೇರಿಸಲಾಗಿದೆ. ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಒಬ್ಬ ಅಧಿಕಾರಿಯಿಂದ ಇಲಾಖೆಗೆ ಕೆಟ್ಟ ಹೆಸರು ಬರಬಾರದು ಎಂದರು.
ಬಾಳೆಕಾಯಿ ಶ್ರೀನಿವಾಸ್‌ಗೆ ಛಲವಾದಿ ಗುರುಪೀಠದಲ್ಲಿ ಸಾಮಾಜಿಕ ನ್ಯಾಯ ವಿಭಾಗದ ಅಧ್ಯಕ್ಷ ಸ್ಥಾನ ನೀಡಿದ್ದೇವೆ. ವಿನಾಕಾರಣ ಅವರ ಮೇಲೆ ಸುಳ್ಳು ಆರೋಪ ಹೊರಿಸಿ ಗಡಿಪಾರು ಮಾಡುವ ಸಿದ್ಧತೆ ನಡೆಸುತ್ತಿದ್ದಾರೆ. ಇದು ಸಂವಿಧಾನ ಬಾಹಿರ. ಡಿವೈಎಸ್‌ಪಿ ಅವರು ಸಂವಿಧಾನಕ್ಕೆ ಬದ್ಧವಾಗಿ ನಡೆದುಕೊಳ್ಳಲಿ. ಇಲ್ಲದಿದ್ದರೆ ಪಾಂಡುರಂಗಪ್ಪ ವಿರುದ್ಧ ನಾನೇ ಅಟ್ರಾಸಿಟಿ ಪ್ರಕರಣ ದಾಖಲಿಸುತ್ತೇನೆ ಎಂದು ಸ್ವಾಮೀಜಿ ಎಚ್ಚರಿಸಿದರು.
ಆರ್‌ಎಸ್‌ಎಸ್, ವಿಶ್ವ ಹಿಂದೂ ಪರಿಷತ್, ಬಜರಂಗದಳದ ಹಿಂಬಾಲಕರಾಗಿ ಡಿವೈಎಸ್‌ಪಿ ಪಾಂಡುರಂಗಪ್ಪ ಕೆಲಸ ಮಾಡುತ್ತಿದ್ದಾರೆ. ಸಂಘ ಪರಿವಾರದಲ್ಲಿ ಆಸಕ್ತಿ ಇದ್ದರೆ ಸಂಘಕ್ಕೆ ಸೇರಿಕೊಳ್ಳಿ. ಬಿಜೆಪಿ ಸರ್ಕಾರದ ಪರವಾಗಿ ಕರ್ತವ್ಯ ನಿರ್ವಹಿಸುವುದಾದರೆ ಕೆಲಸಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ ರಾಜಕೀಯ ಪ್ರವೇಶಿಸಿ. ಅದನ್ನು ಬಿಟ್ಟು ಕರ್ತವ್ಯದಲ್ಲಿದ್ದು, ಸಂವಿಧಾನ ವಿರೋ ಧಿಯಾಗಿ ನಡೆದುಕೊಳ್ಳುವುದು ಸರಿಯಲ್ಲ. ಇನ್ನಾದರೂ ವರ್ತನೆ ಬದಲಿಸಿಕೊಳ್ಳಿ. ಇಲ್ಲವಾದರೆ ಹೋರಾಟಕ್ಕೆ ಸಿದ್ಧವಾಗಬೇಕಾಗುತ್ತದೆ ಎಂದು ಗುಡುಗಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಧನಂಜಯ, ಮಹಾಲಿಂಗಪ್ಪ ಕುಂಚಿಗನಹಾಳ್, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ಕುಮಾರ್‌ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಎಸ್.ಕೆ. ಮಹಂತೇಶ್ ಇದ್ದರು.