Advertisement

ಈ ಬಾರಿಯೂ ಸರಳ ರಾಮನವಮಿ

06:53 PM Apr 22, 2021 | Team Udayavani |

ಚಿತ್ರದುರ್ಗ: ಪ್ರತಿ ವರ್ಷ ಜಿಲ್ಲೆಯ ಹಲವೆಡೆ ಅದ್ದೂರಿಯಾಗಿ ನಡೆಯುತ್ತಿದ್ದ ರಾಮನವಮಿ ಉತ್ಸವ ಕೋವಿಡ್‌ ಕಾರಣಕ್ಕೆ ಎರಡನೇ ವರ್ಷವೂ ಅತ್ಯಂತ ಸರಳವಾಗಿ ನೆರವೇರಿತು. ಕೋವಿಡ್‌ ಎರಡನೇ ಅಲೆಯಿಂದಾಗಿ ಶ್ರೀರಾಮ, ಆಂಜನೇಯ ದೇಗುಲಗಳಲ್ಲೂ ಬುಧವಾರ ಸಡಗರ, ಸಂಭ್ರಮ ಕಾಣಲಿಲ್ಲ. ಭಕ್ತರ ಸಂಖ್ಯೆಯೂ ವಿರಳವಾಗಿತ್ತು. ಆದರೆ ರಾಮಭಕ್ತರ ಮನೆ ಮನಗಳಲ್ಲಿ ರಾಮ ಜಪ ನಡೆಯಿತು. ಶ್ರೀರಾಮ, ಆಂಜನೇಯ ಸ್ವಾಮಿ ದೇವರ ಮೂರ್ತಿಗಳಿಗೆ ಹಲವು ದೇಗುಲಗಳಲ್ಲಿ ಪುಷ್ಪಾಲಂಕಾರ ಸೇವೆ ನೆರವೇರಿತು. ಆದರೆ ಹಿಂದಿನಂತೆ ವಿಶೇಷ ಅಲಂಕಾರ ಇರಲಿಲ್ಲ. ಅರ್ಚಕರು ದೇಗುಲಗಳಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದರು.

Advertisement

ಕೆಲ ಭಕ್ತರು ಕುಟುಂಬ ಸಮೇತ ದೇಗುಲಕ್ಕೆ ಭೇಟಿ ನೀಡಿ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಹಲವು ದೇಗುಲಗಳಲ್ಲಿ ಮಾತ್ರ ಪ್ರಸಾದವಾಗಿ ಪಾನಕ, ಮಜ್ಜಿಗೆ ವಿತರಿಸಲಾಯಿತು. ಎಲ್ಲಿಯೂ ಅದ್ಧೂರಿ ಮೆರವಣಿಗೆ ನಡೆಯಲಿಲ್ಲ. ಕೆಲವೆಡೆ ಶಾಸ್ತ್ರಕ್ಕಾಗಿ ನಡೆದರೂ ದೇಗುಲ ಸಮಿತಿ ಒಳಗೊಂಡು ಬೆರಳೆಣಿಕೆಯಷ್ಟು ಜನ ಮಾತ್ರ ಸೇರಿದ್ದರು.

ತಗ್ಗಿನ ಆಂಜನೇಯಸ್ವಾಮಿ ದೇಗುಲ ವತಿಯಿಂದ ಸರಳ ಮೆರವಣಿಗೆ ಜರುಗಿತು. ಪ್ರತಿ ವರ್ಷ ವಿಶೇಷವಾಗಿ ಶ್ರೀರಾಮನವಮಿ ಆಚರಿಸಿಕೊಂಡು ಬರುತ್ತಿರುವ ಇಲ್ಲಿನ ಬುರುಜನಹಟ್ಟಿಯ ಕೋಟೆ ಆಂಜನೇಯಸ್ವಾಮಿ ದೇಗುಲದಲ್ಲಿ ಉತ್ಸವದ ಅಂಗವಾಗಿ ಶ್ರೀರಾಮನ ಭಾವಚಿತ್ರ ಹಾಗೂ ಆಂಜನೇಯಸ್ವಾಮಿ ಉತ್ಸವಮೂರ್ತಿಗೆ ಅರ್ಚಕರಿಂದ ಸರಳವಾಗಿ ಪೂಜೆ ನೆರವೇರಿತು. ನೆಹರೂ ನಗರದ 1ನೇ ತಿರುವಿನಲ್ಲಿರುವ ವೀರಾಂಜನೇಯಸ್ವಾಮಿ ದೇಗುಲದಲ್ಲಿ ಬೆಳಿಗ್ಗೆ ಅರ್ಚಕರು ರಾಮದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಹೊಳಲ್ಕೆರೆ ರಸ್ತೆಯ ಬರಗೈರಮ್ಮ ದೇವಿ ದೇಗುಲದ ಆವರಣದಲ್ಲಿರುವ ಬರಗೈರಿ ಆಂಜನೇಯಸ್ವಾಮಿಗೆ ರಾಮನವಮಿ ಅಂಗವಾಗಿ ಅರ್ಚಕರು ಸರಳವಾಗಿ ಅಲಂಕರಿಸಿ, ಪೂಜೆ ಸಲ್ಲಿಸಿದ್ದರು.

ಜೋಗಿಮಟ್ಟಿ ರಸ್ತೆಯಲ್ಲಿ ಸರಳ ಆಚರಣೆ ನಡೆಯಿತು. ರಂಗಯ್ಯನಬಾಗಿಲ ಬಳಿ ಇರುವ ರಾಮಮಂದಿರ, ಆಂಜನೇಯಸ್ವಾಮಿ, ಗಣಪತಿ ದೇಗುಲ, ಜಿಲ್ಲಾ ಕ್ರೀಡಾಂಗಣ ರಸ್ತೆಯಲ್ಲಿರುವ ಆಂಜನೇಯ ಸ್ವಾಮಿ, ಮದಕರಿನಾಯಕ ವೃತ್ತದಲ್ಲಿರುವ ರಕ್ಷಾ ಆಂಜನೇಯಸ್ವಾಮಿ, ಭೋವಿ ಗುರುಪೀಠದ ಸಿದ್ಧರಾಮೇಶ್ವರ ಮಠದ ಆವರಣದಲ್ಲಿರುವ ರಾಮಮಂದಿರ, ಬೆಟ್ಟದ ಆಂಜನೇಯಸ್ವಾಮಿ, ತಮಟಕಲ್ಲಿನಲ್ಲಿ ಇರುವ ಆಂಜನೇಯಸ್ವಾಮಿ, ವಾಸವಿ ವಿದ್ಯಾಸಂಸ್ಥೆ ಹತ್ತಿರವಿರುವ ರಾಮಮಂದಿರ, ಆಂಜನೇಯಸ್ವಾಮಿ, ಆನೆ ಬಾಗಿಲು ಬಳಿಯ ಆಂಜನೇಯ ಸ್ವಾಮಿ ಸೇರಿ ನಗರದ ಹಲವು ದೇಗುಲಗಳಲ್ಲಿ ಅರ್ಚಕರಿಂದ ಪೂಜೆ ಜರುಗಿತು.

Advertisement

Udayavani is now on Telegram. Click here to join our channel and stay updated with the latest news.

Next